ಶಹಾಪುರ: “ಇನ್ನೇನು ಏಪ್ರಿಲ್ ಕೊನೆ ವಾರ ಅಥವಾ ಮೇ ಮೊದಲ ವಾರದಲ್ಲಿ ಚುನಾವಣೆ ಬರುತ್ತದೆ. ಆಗ ಕೇಂದ್ರದಿಂದ ಶಾ ಮತ್ತು ಪ್ರಧಾನಿ ಮೋದಿ ಬರುತ್ತಾರೆ. ನೂರಾರು ಸುಳ್ಳುಗಳನ್ನು ಹೇಳುತ್ತಾರೆ. ಮತದಾರರ ಕಣ್ಣಿಗೆ ಮಣ್ಣು ಎರಚುವ ಕೆಲಸ ಮಾಡುತ್ತಾರೆ. ನೀವೆಲ್ಲರೂ ಎಚ್ಚರ ವಹಿಸಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಯಾದಗಿರಿ ಜಿಲ್ಲೆ ಶಹಾಪುರದಲ್ಲಿ ಭಾನುವಾರ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿ, “ಬಿಜೆಪಿಯವರು ಮೋದಿ ಮೇಲೆ ಡಿಪೆಂಡ್ ಇದ್ದಾರಂತೆ. ಬಿಜೆಪಿ ಅಭ್ಯರ್ಥಿಗಳಿಗೆ ಮೋದಿನೇ ಶ್ರೀರಕ್ಷೆಯಂತೆ. ನಮಗೆ ನಾವು ಮಾಡಿದ ಕೆಲಸ, ಸಾಧನೆಯೇ ಶ್ರೀರಕ್ಷೆ. ರಾಜ್ಯದಲ್ಲಿ ನಾವು ಕೈಗೊಂಡ ಅಭಿವೃದ್ಧಿ ಕೆಲಸಗಳೇ ನಮ್ಮನ್ನು ಗೆಲ್ಲಿಸುತ್ತವೆ’ ಎಂದರು.
ಯಡಿಯೂರಪ್ಪನವರು ತಮ್ಮ ಆಡಳಿತ ಅವ ಧಿಯಲ್ಲಿ ಯಾವುದೇ ಹೇಳಿಕೊಳ್ಳುವಂತ ಕೆಲಸ ಮಾಡಲಿಲ್ಲ. ಈಗ ಮತ್ತೂಮ್ಮೆ ಮುಖ್ಯಮಂತ್ರಿಯಾಗಬೇಕು ಎಂಬ ಕನಸು ಕಾಣುತ್ತಿದ್ದಾರೆ. ಅದು ಅಸಾಧ್ಯ ಎಂದು ತಿಳಿದು ಹತಾಶರಾಗಿ ಏಕವಚನದಲ್ಲಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಅದು ಅವರಿಗೆ ಶೋಭೆ ತರುವಂತಹದ್ದಲ್ಲ. ಯಡಿಯೂರಪ್ಪ ಜೈಲಿಗೆ ಹೋಗಿ ಬಂದಿದ್ದಾರೆ ಅಂತ ಹೇಳಿದ್ರೆ ಕೋಪ ಬರುತ್ತದೆ. ಅವರು ಮುಖ್ಯಮಂತ್ರಿ ಆಗಿದ್ದಾಗ ಭ್ರಷ್ಟಾಚಾರದ ಆರೋಪದಡಿ ಜೈಲಿಗೆ ಹೋಗಿದ್ದು ಸುಳ್ಳಾ? ಇದ್ದದ್ದನ್ನು ಹೇಳಿದ್ರೆ ಕೋಪ ಬರುತ್ತದೆ ಎಂದರು.
ಬಿಜೆಪಿಯವರು ಬಡವರು, ಹಿಂದುಳಿದವರು, ದಲಿತರು ಹಾಗೂ ಅಲ್ಪಸಂಖ್ಯಾತರ ಬಗ್ಗೆ ಎಂದಿಗೂ ಮಾತನಾಡಿಲ್ಲ. ಅವರು ಎಂದಿಗೂ ಹಿಂದೂ ಪರ ಅಲ್ಲ. ಬಿಜೆಪಿಯವರಿಗೆ ಸುಳ್ಳೇ ಮನೆ ದೇವರು. ಅವರು ಎಂದಿಗೂ ಸತ್ಯವನ್ನು ನುಡಿದಿಲ್ಲ. ಸುಳ್ಳು ಹೇಳುವುದು ಅವರ ಕಸಬು. ಹೀಗಾಗಿ, ಬಿಜೆಪಿ ರಾಜ್ಯದಲ್ಲಿ ಇರಲಿಕ್ಕೆ ಲಾಯಕ್ಕಿಲ್ಲ.
– ಸಿದ್ದರಾಮಯ್ಯ, ಮುಖ್ಯಮಂತ್ರಿ
ಜಿಪಂ ಅಧ್ಯಕ್ಷರಿಂದ ನಾಡಗೀತೆಗೆ ಅಗೌರವ
ಹುಣಸಗಿಯಲ್ಲಿ ಕಾರ್ಯಕ್ರಮ ಆರಂಭಕ್ಕೂ ಮುನ್ನ ನಾಡಗೀತೆ ಪ್ರಸ್ತುತ ಪಡಿಸುವ ಸಂದರ್ಭದಲ್ಲಿ ಜಿಪಂ ಅಧ್ಯಕ್ಷ ಬಸರಡ್ಡಿ ಪಾಟೀಲ್ ಅನಪುರ ಅವರು ನಾಡಗೀತೆಗೆ ಅಗೌರವ ತೋರಿಸಿದ ಘಟನೆ ನಡೆಯಿತು. ನಾಡಗೀತೆ ಹೇಳುತ್ತಿರುವಾಗ ತಮ್ಮ ಬೆಂಬಲಿಗರನ್ನು ವೇದಿಕೆಯತ್ತ ಕರೆಯಲು ಗಮನ ಹರಿಸಿದರೆ ಹೊರತು ನಾಡಗೀತೆಗೆ ಗೌರವ ಕೊಡುವ ಬಗ್ಗೆ ಗಮನ ಹರಿಸಲಿಲ್ಲ. ಪೊಲೀಸರು ಎಷ್ಟೇ ಮನವಿ ಮಾಡಿದರೂ ಜಿಪಂ ಅಧ್ಯಕ್ಷರು ಕ್ಯಾರೇ ಎನ್ನಲಿಲ್ಲ.