Advertisement

Shastriji Jayanti: ಮೂರ್ತಿ ಚಿಕ್ಕದಾದರೂ… ಕೀರ್ತಿ ದೊಡ್ಡದು

11:35 PM Oct 01, 2023 | Team Udayavani |

“ಹತ್ಯಾರೋಂಕೋ ಹತ್ಯಾರೋಂಸೆ ಹಠಾವೋ’ ಎಂದು ಕರೆಕೊಟ್ಟು, ಕಾಲುಕೆರೆದು ಗೂಳಿಯಂತೆ ಯುದ್ಧಕ್ಕೆ ಬಂದ ಶತ್ರುರಾಷ್ಟ್ರದ ಮೇಲೆ ಹುಲಿಯಂತೆ ಎಗರಿ ಹೆಡೆಮುರಿ ಕಟ್ಟುವ ಮೂಲಕ ದೈಹಿಕ ಬಲಕ್ಕೂ ಮಾನಸಿಕ ಶಕ್ತಿಗೂ ಸಂಬಂಧವೇ ಇಲ್ಲ, ಮಾನಸಿಕವಾಗಿ ಶಕ್ತನಾಗಿರು­ವವನು ಅದೆಂತಹ ಕಠಿನತೆಯನ್ನೂ ಧೈರ್ಯವಾಗಿ ಎದುರಿಸಬಲ್ಲ ಎಂದು ವಿಶ್ವಕ್ಕೆ ಸಾರಿ, ಒಬ್ಬ ರಾಜಕಾರಣಿಯೆಂದರೆ, ಒಬ್ಬ ನಾಯಕನೆಂದರೆ, ಒಬ್ಬ ಮನುಷ್ಯನೆಂದರೆ ಹೀಗಿರಬೇಕೆಂದು ತನ್ನ ಗುಣಗಳಿಂದಲೇ ತೋರಿಸಿಕೊಟ್ಟು, ಪ್ರತಿಯೊಬ್ಬ ವ್ಯಕ್ತಿಯ ಮನಸ್ಸಿ­ನೊಳಗೂ ಉಳಿದುಹೋಗುವಂತಹ ಮಹಾನ್‌ ಚೇತನ, ನಮ್ಮ ದೇಶ ಕಂಡ ದೊಡ್ಡ ನಾಯಕ ಲಾಲ್‌ ಬಹಾದ್ದೂರ್‌ ಶಾಸ್ತ್ರೀಜಿ.

Advertisement

ಶಿಕ್ಷಕರೆಂದರೆ ಬಡಪಾಯಿಗಳು ಎನ್ನುವಂತಹ ಕಾಲದಲ್ಲಿ ಒಬ್ಬ ಬಡ ಶಿಕ್ಷಕನಾದ ಶಾರದಾ ಪ್ರಸಾದ್‌ ಮತ್ತು ದುಲಾರಿದೇವಿಯವರ ಮಗ­ನಾಗಿ ಅ. 2, 1904ರಲ್ಲಿ, ಉತ್ತರಪ್ರದೇಶದ ಮುಘಲ್‌ ಸರಾಯಿ ಎಂಬಲ್ಲಿ ಜನಿಸಿದ ಶಾಸ್ತ್ರೀಜಿ­ಯವರು, ಬಾಲ್ಯ­ದಿಂದಲೂ ಬಡತನವನ್ನು ಭರಪೂರ ಎದುರಿ­ಸಿಯೇ ಬೆಳೆದವರು. ಒಂದು ಸೈಕಲ್‌ ಕೊಂಡುಕೊಳ್ಳುವಷ್ಟೂ ಆರ್ಥಿಕವಾಗಿ ಶಕ್ತರಿಲ್ಲದ್ದ­ರಿಂದ ಪ್ರತೀ ದಿನ ಎಂಟು ಕಿಲೋ­ಮೀಟರ್‌ ದೂರವಿದ್ದ ಶಾಲೆಗೆ ನಡೆದುಕೊಂಡೇ ಹೋಗಿಬರ­ಬೇಕಾಗಿತ್ತು. ಇಂತಹ ಬಡತನದಲ್ಲೇ ಹುಟ್ಟಿ, ಬಡನತದಲ್ಲಿಯೇ ಬೆಳೆದ ಲಾಲ್‌ ಬಹದ್ದೂರ್‌ ವಿದ್ಯಾಭ್ಯಾಸದಲ್ಲಿ ತುಂಬಾ ಚುರುಕಾಗಿ­ದ್ದರಿಂದ, ಪ್ರಾಥಮಿಕ ಹಂತವನ್ನು ತನ್ನ ಊರಿನ ಸುತ್ತಮುತ್ತಲೇ ಮುಗಿಸಿ, ಮುಂದಿನ ವಿದ್ಯಾಭ್ಯಾಸ­ಕ್ಕಾಗಿ ವಾರಾಣಸಿಗೆ ತೆರಳಿ, ಕಾಶೀ ವಿದ್ಯಾಪೀಠದಲ್ಲಿ ಪದವಿ ವ್ಯಾಸಂಗ ಮಾಡಿ, “ಶಾಸ್ರ್ತೀ’ ಎಂಬ ಬಿರುದು ಪಡೆದು, ‘ಲಾಲ್‌ ಬಹದ್ದೂರ್‌ ಶ್ರೀವಾಸ್ತವ’ನಿಂದ “ಲಾಲ್‌ ಬಹದ್ದೂರ್‌ ಶಾಸ್ರ್ತೀ’ ಆಗುತ್ತಾರೆ.

1956ರಲ್ಲಿ ತಮಿಳುನಾಡಿನ ಅರಿಯಾಲೂರಿನಲ್ಲಿ ನಡೆದ ರೈಲು ದುರಂತ, ಭಾರತ ದೇಶದಲ್ಲೇ ಅತೀ ದೊಡ್ಡ ಮತ್ತು ಹೃದಯ ವಿದ್ರಾವಕ ದುರಂತವೆಂದು ಅನೇಕ ಪತ್ರಿಕೆಗಳ ವರದಿಗಳು ಹೇಳುತ್ತವೆ. ಸುಮಾರು ನೂರೈವತ್ತು ಜನರನ್ನು ಬಲಿ ಪಡೆದು, ನೂರಾರು ಜನರು ತೀವ್ರ ಗಾಯಗೊಂಡ ಘಟನೆಯದು. ಬೇರೆ ಯಾರೇ ಆಗ ಅಧಿಕಾರದಲ್ಲಿದ್ದರೂ ನೂರಾರು ಸಬೂಬುಗಳ ಸಮಜಾಯಿಶಿ ನೀಡಿ, ತನ್ನ ಅಧಿಕಾರಕ್ಕೆ ಧಕ್ಕೆಯಾಗದಂತೆ ನೋಡಿಕೊಂಡು, ಗಟ್ಟಿಯಾಗಿ ಕುಳಿಬಿಡುತ್ತಿದ್ದರೇನೋ. ಆದರೆ ಒಬ್ಬ ರೈಲ್ವೇ ಸಚಿವನಾಗಿ, ನೈತಿಕ ಹೊಣೆ ಹೊತ್ತು, ತಮ್ಮ ಖಾತೆಗೆ ರಾಜೀನಾಮೆ ನೀಡಿ, ಎಲ್ಲರಿಗೂ ಮಾದರಿಯಾಗಿ ಶಾಸ್ತ್ರೀಜಿ ನಿಲ್ಲುತ್ತಾರೆ.

ನಾನಕರ ಬೋಧನೆಯಿಂದ ತುಂಬಾ ಪ್ರಭಾವಕ್ಕೊಳಗಾದ ಶಾಸ್ತ್ರೀಜಿಯವರು, 1915ರಲ್ಲಿ ವಾರಾಣಸಿಯಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಮಹಾತ್ಮಾ ಗಾಂಧೀಜಿಯವರ ಭಾಷಣ ಕೇಳಿ, ಗಾಢವಾಗಿ ಪ್ರಭಾವಿತರಾಗಿ, ಅಂದಿನಿಂದಲೇ ಗಾಂಧೀಜಿಯವರ ಸರಳತೆಯನ್ನು ಮೈಗೂಡಿಸಿ­ಕೊಂಡು, ಜೀವನಪರ್ಯಂತ ಹಾಗೆಯೇ ಬಾಳಿದ ಮಹಾನ್‌ ವ್ಯಕ್ತಿ. ಒಬ್ಬ ರೈಲ್ವೇ ಸಚಿವರಾಗಿದ್ದಾಗ ಲೂ ರೈಲುಗಳಲ್ಲಿ ಎರಡನೇ ದರ್ಜೆಯ ಬೋಗಿ ಗಳಲ್ಲಿ ಪ್ರಯಾಣಿಸುತ್ತಿದ್ದರೆಂದರೆ ಅವರ ಸರಳತೆ ಅರ್ಥವಾಗುತ್ತದೆ. ಇಡೀ ರಾಷ್ಟ್ರದ ಪ್ರಧಾನಮಂತ್ರಿ­ಯಾಗಿದ್ದಾಗಲೂ ತಮ್ಮದೇ ಆದ ಒಂದು ಸ್ವಂತ ಕಾರನ್ನು ಹೊಂದಿರಲಿಲ್ಲವೆಂದರೆ, ಒಂದು ಸಣ್ಣ ಅಧಿಕಾರ ಸಿಕ್ಕರೆ ಅಥವಾ ಒಂದಿಷ್ಟು ಕಾಸಿದ್ದರೆ ಕಾರಿನಲ್ಲೇ ಓಡಾಡಬೇಕೆಂದು ತರತರದ ಕಾರು­ಗಳನ್ನು ಕೊಳ್ಳುವವರ ಮುಂದೆ ಶಾಸ್ತ್ರೀಜಿಯವರು ಸರಳತೆಯ ಮೇರು ಪರ್ವತದಂತೆ ಕಾಣುತ್ತಾರೆ. ದೇಶದ ಗೃಹಸಚಿವನಾಗಿದ್ದೂ ಒಂದು ಸ್ವಂತ ಮನೆಯನ್ನೂ ಕಟ್ಟಿಸಿಕೊಂಡಿರಲಿಲ್ಲವೆಂಬುದು ಸೋಜಿಗವೇ ಸರಿ.

ಒಬ್ಬ ಸಚಿವರಾದಾಗಲೂ ಅಡುಗೆ ಮಾಡಲು ಒಬ್ಬ ಅಡುಗೆಯವರನ್ನು ನೇಮಿಸಿಕೊಳ್ಳಲಾಗದ ಸ್ಥಿತಿಯಲ್ಲಿ ಬದುಕುತ್ತಿದ್ದ­ರೆಂದರೆ ಅವರ ಸರಳತೆಗೆ, ಸ್ವತ್ಛ ರಾಜಕಾರಣಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕಿಲ್ಲವೆನಿಸು­ತ್ತದೆ. ಸ್ವಾತಂತ್ರ್ಯ ಹೋರಾಟದ ಪ್ರಯುಕ್ತ ಜೈಲಿನಲ್ಲಿದ್ದ ಸಂದರ್ಭದಲ್ಲಿ ಅಂದರೆ 1942ರಲ್ಲಿ ತನ್ನ ಸ್ವಂತ ಮಗಳು ತೀವ್ರ ಅನಾರೋಗ್ಯಕ್ಕೊಳ­ಗಾದಾಗ ವೈದ್ಯರು ಬರೆದು ಕೊಟ್ಟ ಔಷಧಗಳನ್ನು ಕೊಡಿಸಲು ಬೇಕಾದ ಹಣವಿಲ್ಲದೆ, ಮಗಳನ್ನು ಕಳೆದುಕೊಳ್ಳು­ವಷ್ಟು ಬಡತನದಲ್ಲಿ ಶಾಸ್ತ್ರೀಜಿ­ಯವರು ಬದುಕಿದ್ದರೆಂದರೆ ಅಧಿಕಾರದಲ್ಲಿ ಅವರ ಪ್ರಾಮಾಣಿಕತೆ ಎದ್ದುಕಾಣುತ್ತದೆ.

Advertisement

ಸ್ವಾರ್ಥ ರಾಜಕಾರಣವೇ ತುಂಬಿರುವ ರಾಜಕಾರಣಿ ಗಳ ನಡುವೆ, ಒಬ್ಬ ಪ್ರಧಾನ ಮಂತ್ರಿಯಾಗಿ, ದೇಶದಲ್ಲಿ ಆಹಾರ ಕೊರತೆ­ಯಾದಾಗ, ದೇಶದ ಜನರಿಗೆಲ್ಲ ಒಂದು ಹೊತ್ತು ಊಟ ತ್ಯಜಿಸುವಂತೆ ಕರೆ ನೀಡುವುದರ ಜತೆಗೆ, ತಾವು ಮತ್ತು ತಮ್ಮ ಕುಟುಂಬದ­ವರೆಲ್ಲರೂ ಕೇವಲ ಒಂದು ಹೊತ್ತು ಊಟ ಮಾಡುತ್ತಿದ್ದ ಶಾಸ್ತ್ರೀಜಿ ಎಂದೆಂದಿಗೂ ಎಲ್ಲ ನಾಯಕರಿಗೂ ಮಹಾನ್‌ ಮಾದರಿ.

ಭಾರತ ದೇಶವು ವಿಷಮ ಪರಿಸ್ಥಿತಿಯಲ್ಲಿದ್ದ ಸಂದರ್ಭದಲ್ಲಿ ಪ್ರಧಾನ ಮಂತ್ರಿಯಾಗಿ ಸುಮಾರು ಒಂದೂವರೆ ವರ್ಷದ ಅಧಿಕಾರದ ಅವಧಿಯಲ್ಲಿ ಎಲ್ಲವನ್ನೂ ಸಮರ್ಥವಾಗಿ ನಿರ್ವಹಿಸಿ, ಗೆದ್ದವರು ಶಾಸ್ತ್ರೀಜಿಯವರು. ಸುಖಾಸುಮ್ಮನೆ ಜಗಳಕ್ಕೆ ಬಂದ ನೆರೆ ರಾಷ್ಟ್ರ ಪಾಕಿಸ್ಥಾನದ ಮೇಲೆ ಯುದ್ಧ ಸಾರಿ, ಗೆದ್ದವರು. ಅಮೆರಿಕದಿಂದ ಆಮದಾಗುತ್ತಿದ್ದ ಕಳಪೆ ಮಟ್ಟದ ಗೋಧಿಯನ್ನು ನಿಷೇಧಿಸಿ, ನಮ್ಮದೇ ದೇಶದ ರೈತರಿಗೆ ಬೆಳೆ ಬೆಳೆಯಲು ಹುರಿದುಂಬಿಸಿ “ಜೈ ಜವಾನ್‌, ಜೈ ಕಿಸಾನ್‌” ಎಂದು ಕರೆ ನೀಡಿ, ಆಹಾರ ವಸ್ತುಗಳಲ್ಲಿ ಸ್ವಾವಲಂಬಿ ದೇಶವನ್ನಾಗಿ ಮಾಡಹೊರಟ ಹೋರಾಟಗಾರ.
ಇಂತಹ ಆದರ್ಶಪ್ರಾಯ ವ್ಯಕ್ತಿಗಳು ಇಂದು ಕಣ್ಣಿಗೂ ಕಾಣದಂತಿರುವುದು, ಇವರ ಆದರ್ಶ­ಗಳನ್ನು ಕೇವಲ ಜನ್ಮದಿನಾಚರಣೆ ದಿನ ನೆನೆದು ಮತ್ತೆ ಮರೆತುಬಿಟ್ಟು, ಅಪ್ರಾಮಾಣಿಕತೆ, ಭ್ರಷ್ಟಾ­ಚಾರ, ಆರಾಜಕತೆಗಳ ಕೂಪದಲ್ಲಿಯೇ ಮುಳು­ಗೇಳು­ತ್ತಿರುವುದು ಇಂದಿನ ಅನೇಕ ನಾಯಕರ ದಿನಚರಿಯಾಗಿದೆ. ಇನ್ನಾದರೂ ಶಾಸ್ತ್ರೀಜಿಯವರ ಆದರ್ಶ ನಮ್ಮ ನಾಯಕರ ಮೈಮನಗಳಲ್ಲಿ ಒಡಮೂಡಿ, ಎದ್ದು ನಿಂತರೆ ಭಾರತದ ಭ್ರಷ್ಟಾಚಾರ, ಅಪ್ರಾಮಾಣಿಕತೆಗಳು ತೊಲಗಿ, ಭಾರತವು ವಿಶ್ವಗುರುವಾಗಬಹುದು.

ರಾಘವೇಂದ್ರ ಈ ಹೊರಬೈಲು

Advertisement

Udayavani is now on Telegram. Click here to join our channel and stay updated with the latest news.

Next