ಬಂಟ್ವಾಳ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವದ ಪ್ರಯುಕ್ತ ಸೋಮವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸೇರಿದಂತೆ ಬೆಳ್ಳಿ ರಥೋತ್ಸವ ಹಾಗೂ ಸಣ್ಣ ರಥೋತ್ಸವ ನಡೆಯಿತು.
ಷಷ್ಠಿಯ ಹಿನ್ನೆಲೆಯಲ್ಲಿ ಕ್ಷೇತ್ರಕ್ಕೆ ಬೆಳಗ್ಗಿನಿಂದಲೇ ಹೆಚ್ಚಿನ ಸಂಖ್ಯೆಯ ಭಕ್ತರು ಭೇಟಿ ನೀಡಿದರು. ದೇಗುಲ ಅಲಂಕಾರ ಕ್ಷೇತ್ರವನ್ನು ವಿಶೇಷ ಹೂವಿನಿಂದ ಸಿಂಗರಿಸಲಾಗಿತ್ತು. ದೇಗುಲದ ತಂತ್ರಿಗಳಾದ ಸುಬ್ರಹ್ಮಣ್ಯ ತಂತ್ರಿ, ವೆಂಕಟೇಶ್ ತಂತ್ರಿ ಅವರು ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದ ಬಳಿಕ ಸುಬ್ರಹ್ಮಣ್ಯ ದೇವರ ಬಲಿ ಉತ್ಸವ ನಡೆದು ದೇವರಿಗೆ ಬೆಳ್ಳಿ ರಥ ಹಾಗೂ ಷಷ್ಠಿ ರಥದಲ್ಲಿ ಪೂಜೆಯ ಬಳಿಕ ದೇಗುಲದ ಅಂಗಣದಲ್ಲಿ ಭಕ್ತರು ರಥವನ್ನು ಎಳೆದರು.
ಬಂಟ್ವಾಳ ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ| ಎಂ. ಎನ್. ರಾಜೇಂದ್ರಕುಮಾರ್ ಮೊದಲಾದ ಗಣ್ಯರು ಕ್ಷೇತ್ರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.
ದೇಗುಲದ ಅರ್ಚಕರಾದ ಪಿ. ಮಾಧವ ಭಟ್, ನಾರಾಯಣ ಭಟ್, ರಾಮ ಭಟ್, ಪರಮೇಶ್ವರ ಭಟ್, ಅನಂತ ಭಟ್, ಪದ್ಮನಾಭ ಭಟ್ ವಿಷ್ಣುಮೂರ್ತಿ ನಟ್ಟೋಜ, ಮಾಧವ ಮಯ್ಯ ಅವರು ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು. ದೇಗುಲದ ಆಡಳಿತ ಮೊಕ್ತೇಸರ ಡಾ| ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು, ಆನುವಂಶಿಕ ಮೊಕ್ತೇಸರ ಚೇರ ಸೂರ್ಯನಾರಾಯಣ ರಾವ್, ಸಾವಿರ ಸೀಮೆಯ ಭಕ್ತರು ಉಪಸ್ಥಿತರಿದ್ದರು.