ಯಳಂದೂರು: ಪಟ್ಟಣ ಸೇರಿ ತಾಲೂಕಿನಲ್ಲಿ ಮಹಿಳೆಯರು ಸುಬ್ರಹ್ಮಣ್ಯ ಷಷ್ಠಿ ಹಬ್ಬದ ನಿಮಿತ್ತ ಬೆಳಗ್ಗೆಯಿಂದಲೇ ಈಶ್ವರ ದೇಗುಲ, ನಾಗರಕಲ್ಲುಗಳು, ಹುತ್ತಕ್ಕೆ ಹೂವು, ಹಣ್ಣು, ಹಾಲು ಎರೆದು ಪೂಜೆ ಸಲ್ಲಿಸಿದರು.
ಹಾಲಿನ ಜತೆ ಕೋಳಿ, ಮೊಟ್ಟೆ ಅರ್ಪಣೆ: ಕೆಲವೆಡೆ ಹುತ್ತದ ಬಾಯಿಗೆ ಭಕ್ತರು ಕೋಳಿಗಳನ್ನು ಬಲಿ ಕೊಟ್ಟು, ಅದರ ಕತ್ತುಗಳನ್ನು ಅದರೊಳಗೆ ಇಡುತ್ತಿದ್ದರೆ, ಕೆಲವರು ಮೊಟ್ಟೆಗಳನ್ನು ಹುತ್ತದೊಳಗೆ ಹಾಕುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಈ ಸಂಪ್ರದಾಯ ಚಾಮರಾಜನಗರ ಜಿಲ್ಲೆಯ ಕೆಲವೆಡೆ ಇನ್ನೂ ಆಚರಣೆಯಲ್ಲಿದೆ. ಬೇರೆ ಜಿಲ್ಲೆಗಳಲ್ಲಿ ಹಾವಿಗೆ ಹಾಲೆರೆದು ಹಣ್ಣು ಕಾಯಿ, ಅರಿಸಿಣ, ಕುಂಕುಮ, ಎಲೆ ಅಡಕೆ ಇಡುವುದು ಸಾಮಾನ್ಯ. ಆದರೆ, ಹುತ್ತದ ಬಾಯಿಗೆ ಕೋಳಿ ಮೊಟ್ಟೆ ಇಡುವುದು, ಕೋಳಿಗಳನ್ನು ಕೊಯ್ದು ಅದರ ರಕ್ತ, ಕತ್ತನ್ನು ಹುತ್ತದ ಬಾಯಿಗೆ ಹಾಕಿ, ರುಂಡವನ್ನು ಮನೆಗೆ ತೆಗೆದುಕೊಂಡು ಹೋಗಿ ಅಡುಗೆ ಮಾಡಿ ತಿನ್ನುತ್ತಾರೆ.
ಸುಬ್ರಹ್ಮಣ್ಯ ಷಷ್ಠಿಯ ನಿಮಿತ್ತ ಪಟ್ಟಣದ ಗೌರೇಶ್ವರ ದೇಗುಲ, ಅದರ ಬಳಿಯಲ್ಲೇ ಇರುವ ಮಂಟಪದ ನಾಗರಕಲ್ಲು, ತಾಲೂಕಿನ ಕಂದಹಳ್ಳಿ, ಸಂತೆಮರಹಳ್ಳಿಯ ಮಹದೇಶ್ವರ ದೇಗುಲದಲ್ಲಿ ಹಬ್ಬದ ನಿಮಿತ್ತ ನೂರಾರು ಭಕ್ತರು ಸ್ವಾಮಿಯ ದರ್ಶನ ಪಡೆದರು.