ನವದೆಹಲಿ: ಅಮೆರಿಕದ ಹೂಸ್ಟನ್ ನಲ್ಲಿ ನಡೆದ ಹೌಡಿ ಮೋದಿ ಕಾರ್ಯಕ್ರಮದ ವಿಶ್ವದ ಗಮನ ಸೆಳೆದಿರುವ ನಡುವೆಯೇ ಕಾಂಗ್ರೆಸ್ ಹಿರಿಯ ಮುಖಂಡ, ತಿರುವನಂತಪುರಂ ಸಂಸದ ಶಶಿ ತರೂರ್ ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಮತ್ತು ಇಂದಿರಾ ಗಾಂಧಿ 1954ರಲ್ಲಿ ಅಮೆರಿಕಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ನೆರೆದ ಜನಸ್ತೋಮ ಗಮನಿಸಿ ಎಂಬರ್ಥದಲ್ಲಿ ಟ್ವೀಟ್ ಮಾಡಿ ಇದೀಗ ಟ್ರೋಲ್ ಗೆ ಒಳಗಾಗಿದ್ದಾರೆ!
ಹೌಡಿ ಮೋದಿ ಕಾರ್ಯಕ್ರಮಕ್ಕೆ ತಿರುಗೇಟು ನೀಡಲು ಹೋಗಿ ಶಶಿ ತರೂರ್ ಎರಡು ವಿಚಾರದಲ್ಲಿ ಟ್ರೋಲ್ ಗೆ ಗುರಿಯಾಗಿದ್ದಾರೆ.
1954ರಲ್ಲಿ ನೆಹರು ಮತ್ತು ಇಂಡಿಯಾ(!) ಗಾಂಧಿ ಇನ್ ಅಮೆರಿಕ ಎಂದು ಟ್ವೀಟ್ ಮಾಡಿದ್ದರು. ಗಮನಿಸಿ ಯಾವುದೇ ವಿಶೇಷ ಸಾರ್ವಜನಿಕ ಪ್ರಚಾರ ಇಲ್ಲದೆ ಅಮೆರಿಕದ ನೆಲದಲ್ಲಿ ಭಾರೀ ಪ್ರಮಾಣದಲ್ಲಿ ಸುತ್ತುವರಿದ ಜನಸಮೂಹ ಎಂದು ಉಲ್ಲೇಖಿಸಿದ್ದರು.
ಹಾಲಿ ಸಂಸದರ ಶಶಿ ತರೂರ್ ಈ ರೀತಿ ಟ್ವೀಟ್ ಮಾಡಿದ್ದ ನಂತರ 3,400 ರೀ ಟ್ವೀಟ್ ಹಾಗೂ 15 ಸಾವಿರಕ್ಕೂ ಅಧಿಕ ಲೈಕ್ಸ್ ಗಿಟ್ಟಿಸಿಕೊಂಡಿತ್ತು. ಜತೆಗೆ ತರೂರ್ ಅವರನ್ನು ಟ್ರೋಲ್ ಮಾಡಿ ಇತಿಹಾಸದ ಸತ್ಯವನ್ನು ಅನಾವರಣಗೊಳಿಸಿದ್ದಾರೆ!
ನಿಜಕ್ಕೂ ಆ ಫೋಟೋ ಅಮೆರಿಕದ್ದೇ ?
ಜವಾಹರಲಾಲ್ ನೆಹರು ಮತ್ತು ಇಂದಿರಾ ಗಾಂಧಿ ಅವರು ಅಮೆರಿಕಕ್ಕೆ ಹೋಗಿದ್ದಾಗ ನೆರೆದ ಜನಸಮೂಹವಲ್ಲ, ಇದು 1956ರಲ್ಲಿ ಮಾಸ್ಕೋಗೆ ಭೇಟಿ ನೀಡಿದ ಸಂದರ್ಭವಾಗಿತ್ತು. ತರೂರ್ ತಪ್ಪನ್ನು ಹಿರಿಯ ಪತ್ರಕರ್ತ ಆರ್ ಜಗನ್ನಾಥನ್ ಟ್ವೀಟ್ ಮಾಡಿ ಎಚ್ಚರಿಸಿದ್ದರು. ಇದು ಅಮೆರಿಕ ಅಲ್ಲ, 1956ರ ಮಾಸ್ಕೋದಲ್ಲಿ ತೆಗೆದ ಫೋಟೋ ಎಂಬುದಾಗಿ!
ಹೀಗೆ ಜಗನ್ನಾಥನ್ ಅವರು ರೀ ಟ್ವೀಟ್ ಮಾಡುತ್ತಿದ್ದಂತೆಯೇ ನೆಟಿಜೆನ್ಸ್ ಶಶಿ ತರೂರ್ ಅವರ ತಪ್ಪನ್ನು ಟ್ರೋಲ್ ಮಾಡಿದ್ದರು.
ಹೂ ಇಸ್ ಇಂಡಿಯಾ ಗಾಂಧಿ? ಇಂಡಿಯಾ ಗಾಂಧಿ..ಏನಿದು ನೀವು ಇದನ್ನು ವಿವರಿಸುತ್ತೀರಾ? ಎಂದು ಟ್ವೀಟಿಗರು ಪ್ರಶ್ನಿಸಿದ್ದರು. ಸುಜಯ್ ರಾಜ್ ಎಂಬ ಟ್ವೀಟ್ ನಲ್ಲಿ , ಈ ಫೋಟೋ ಅಮೆರಿಕದ್ದಲ್ಲ, ಇದು ಮಾಸ್ಕೋನಲ್ಲಿ ತೆಗೆದದ್ದು, 1954 ಅಲ್ಲ, 1956ರಲ್ಲಿ ತೆಗೆದದ್ದು, ಆಕೆ ಇಂಡಿಯಾ ಗಾಂಧಿ ಅಲ್ಲ, ಇಂದಿರಾ ಗಾಂಧಿ ಎಂಬುದಾಗಿ ಉಲ್ಲೇಖಿಸಿದ್ದರು.
ಹೀಗೆ ತಮ್ಮ ತಪ್ಪನ್ನು ಶಶಿ ತರೂರ್ ಟ್ವೀಟ್ ನಲ್ಲಿ ಸರಿ ಪಡಿಸುವುದರೊಳಗೆ ನೆಟ್ಟಿಗರು ಭಾರೀ ಪ್ರಮಾಣದಲ್ಲಿ ಟ್ರೋಲ್ ಮಾಡಿಬಿಟ್ಟಿದ್ದರು!