ಶಶಾಂಕ್ ನಿರ್ದೇಶನದ “ಲವ್ 360′ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. “ಲವ್ 360′ ಸಿನಿಮಾದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಈಗಾಗಲೇ ಚಿತ್ರದ ಟ್ರೇಲರ್ ಮತ್ತು ಎರಡು ಹಾಡುಗಳನ್ನು ಬಿಡುಗಡೆ ಮಾಡಿದೆ.
ಸದ್ಯ “ಲವ್ 360’ಯ ಹಾಡುಗಳು ಕೇಳುಗರ ಗಮನ ಸೆಳೆಯಲು ಯಶಸ್ವಿಯಾಗಿದ್ದು, ಟ್ರೇಲರ್‌ಗೂ ಸೋಶಿಯಲ್ ಮೀಡಿಯಾದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇನ್ನು ಇತ್ತೀಚೆಗಷ್ಟೇ “ಲವ್ 360′ ಸಿನಿಮಾವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ “ಯು/ಎ’ ಪ್ರಮಾಣಪತ್ರ ನೀಡಿ ಬಿಡುಗಡೆಗೆ ಅಸ್ತು ಎಂದಿದೆ.
ಇದೇ ಖುಷಿಯಲ್ಲಿರುವ ಚಿತ್ರತಂಡ, ಇದೀಗ “ಭೋರ್ಗರೆದು ಕೇಳಿದೆ ಕಡಲು…’ ಎಂಬ “ಲವ್ 360′ ಸಿನಿಮಾದ ಥೀಮ್ ಸಾಂಗ್ ಅನ್ನು ಬಿಡುಗಡೆ ಮಾಡಿದೆ. ನಿರ್ದೇಶಕ ಶಶಾಂಕ್ ಸಾಹಿತ್ಯವಿರುವ ಈ ಹಾಡಿಗೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದು, ಥೀಮ್ ಸಾಂಗ್‌ನಲ್ಲಿ ಸಿನಿಮಾದಲ್ಲಿ ಹೇಳಲಾಗಿರುವ ವಿಷಯಗಳ ಸಣ್ಣ ಝಲಕ್ ಅನ್ನು ತೆರೆಮೇಲೆ ತರಲಾಗಿದೆ.
ಇದೇ ವೇಳೆ “ಲವ್ 360′ ಸಿನಿಮಾದ ಥೀಮ್ ಸಾಂಗ್ ಬಗ್ಗೆ ಮಾತನಾಡಿದ ನಿರ್ದೇಶಕ ಶಶಾಂಕ್, “ಈಗಾಗಲೇ ನಮ್ಮ ಸಿನಿಮಾದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಸಿನಿಮಾ ಬಿಡುಗಡೆಯ ಹಂತಕ್ಕೆ ಬಂದು ನಿಂತಿದೆ. ಇತ್ತೀಚೆಗಷ್ಟೇ ಸಿನಿಮಾದ ಸೆನ್ಸಾರ್ ಕೂಡ ಆಗಿದ್ದು, ಆದಷ್ಟು ಬೇಗ ದಿನಾಂಕವನು ನೋಡಿಕೊಂಡು ಸಿನಿಮಾವನ್ನು ತೆರೆಗೆ ತರಲಿದ್ದೇವೆ. ಇದೊಂದು ಇಂಟೆನ್ಸ್ ಲವ್‌ಸ್ಟೋರಿ ಸಿನಿಮಾ. ಜೊತೆಗೆ ಕ್ರೈಂ ಎಳೆಯೊಂದು ಸಿನಿಮಾದ ಕಥೆಯಲ್ಲಿ ಸಾಗುತ್ತದೆ. ಈ ಸಿನಿಮಾದ ಮೂಲಕ ಪ್ರವೀಣ್ ಎಂಬ ನೂತನ ಪ್ರತಿಭೆಯನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದೇವೆ. ಸುಮಾರು 14 ವರ್ಷಗಳ ನಂತರ ಬಹುತೇಕ ಹೊಸಬರೊಂದಿಗೆ ಕೆಲಸ ಮಾಡಿದ ಸಿನಿಮಾ ಇದು. ಈಗಾಗಲೇ ಬಿಡುಗಡೆಯಾಗಿರುವ ಸಿನಿಮಾದ ಟ್ರೇಲರ್ ಮತ್ತು ಹಾಡಿನಲ್ಲಿ ಸಿನಿಮಾದ ಒಂದಷ್ಟು ವಿಷಯಗಳನ್ನು ಹೇಳಿದ್ದೇವೆ. ಹತ್ತರ ಜೊತೆಗೆ ಹನ್ನೊಂದು ಎನ್ನುವಂಥ ಲವ್‌ಸ್ಟೋರಿಯ ಸಿನಿಮಾ ಇದಲ್ಲ. ಸಿನಿಮಾದ ಕಥೆಯ ಅಂತರಾಳವನ್ನು (ಸೋಲ್) ಈ ಥೀಮ್ ಸಾಂಗ್‌ನಲ್ಲಿ ಹೇಳಿದ್ದೇವೆ’ ಎಂದು ಗೀತೆಯ ವಿಶೇಷತೆ ತಿಳಿಸಿದರು.
ನಾಯಕ ಪ್ರವೀಣ್, ನಾಯಕಿ ರಚನಾ ಇಂದರ್, ಛಾಯಾಗ್ರಹಕ ಅಭಿಲಾಶ್ ಕಲಾತಿ ಚಿತ್ರದ ಬಗ್ಗೆ ಮಾತನಾಡಿದರು. “ಶಶಾಂಕ್ ಸಿನಿಮಾಸ್’ ಬ್ಯಾನರ್‌ನಲ್ಲಿ ಶಶಾಂಕ್ ಮತ್ತು ಡಾ. ಮಂಜುಳಾ ಮೂರ್ತಿ ನಿರ್ಮಿಸಿರುವ “ಲವ್ 360′ ಚಿತ್ರದ ಹಾಡುಗಳಿಗೆ ಅರ್ಜುನ್ ಜನ್ಯಾ ಸಂಗೀತ ಸಂಯೋಜಿಸಿದ್ದಾರೆ. ಸಿದ್ಧ್ ಶ್ರೀರಾಮ್, ಸಂಚಿತ್ ಹೆಗ್ಡೆ ಮೊದಲಾದ ಗಾಯಕರು ಚಿತ್ರದ ಹಾಡುಗಳಿಗೆ ಧ್ವನಿಯಾಗಿದ್ದಾರೆ.
ಇದನ್ನೂ ಓದಿ:ಕಿರುತೆರೆ ನಟಿ, ಸ್ಯಾಂಡಲ್ ಬೆಡಗಿ ಅಂಕಿತ ಅಮರ್ ಬ್ಯೂಟಿಫುಲ್ ಫೋಟೋ ಗ್ಯಾಲರಿ
ಚಿತ್ರಕ್ಕೆ ಅಭಿಲಾಶ್ ಕಲಾತಿ ಛಾಯಾಗ್ರಹಣ, ಗಿರಿ ಮಹೇಶ್ ಸಂಕಲನವಿದೆ. “ಲವ್ 360′ ಸಿನಿಮಾದಲ್ಲಿ ಪ್ರವೀಣ್, ರಚನಾ ಇಂದರ್ ಜೊತೆಗೆ ಗೋಪಾಲಕೃಷ್ಣ ದೇಶಪಾಂಡೆ, ಡ್ಯಾನಿ ಕುಟ್ಟಪ್ಪ, ಕಾವ್ಯಾ ಶಾಸ್ತ್ರೀ ಮೊದಲಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಮೊಗ್ಗಿನ ಮನಸ್ಸಿಗೆ 14 ವರ್ಷದ ಖುಷಿ: ಇನ್ನು ಶಶಾಂಕ್ ನಿರ್ದೇಶನದ “ಮೊಗ್ಗಿನ ಮನಸ್ಸು’ ಸಿನಿಮಾ ಬಿಡುಗಡೆಯಾಗಿ 14 ವರ್ಷವಾಗಿದೆ. ಇದೇ ಖುಷಿಯನ್ನು ನಿರ್ದೇಶಕ ಶಶಾಂಕ್, ಕಾರ್ಯಕಾರಿ ನಿರ್ಮಾಪಕ ಜಿ. ಗಂಗಾಧರ್ ಹಂಚಿಕೊಂಡರು.
“ಮೊಗ್ಗಿನ ಮನಸ್ಸು’ ಸಿನಿಮಾದ ಮೂಲಕ ಅನೇಕ ಹೊಸ ಪ್ರತಿಭೆಗಳು ಚಿತ್ರರಂಗಕ್ಕೆ ಪರಿಚಯವಾದರು. 2008ರಲ್ಲಿ ಬಂದ ಹದಿಹರೆಯದ ಮನಸ್ಸುಗಳ ತಮುಲ-ತಲ್ಲಣದ ಕಥಾಹಂದರದ “ಮೊಗ್ಗಿನ ಮನಸ್ಸು’ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಹೊಸ ಪ್ರತಿಭೆಗಳ ಜೊತೆಗೆ ಕೆಲಸ ಮಾಡುವುದು ಯಾವಾಗಲೂ ನನಗೆ ಖುಷಿ ಕೊಡುತ್ತದೆ’ ಎಂದಿರುವ ನಿರ್ದೇಶಕ ಶಶಾಂಕ್ ಎಲ್ಲ ಅಂದು ಕೊಂಡಂತೆ ನಡೆದರೆ ಭವಿಷ್ಯದಲ್ಲಿ ಮೊಗ್ಗಿನ ಮನಸ್ಸು-2 ಸಿನಿಮಾ ಮಾಡುವ ಆಶಯವನ್ನೂ ತೆರೆಗೆ ವ್ಯಕ್ತಪಡಿಸಿದರು.