Advertisement
ಬುಧವಾರ ನಡೆದ ಪಕ್ಷದ ಶಾಸಕಾಂಗ ಸಭೆಯಲ್ಲಿ ಹನೂರು ಶಾಸಕ ನರೇಂದ್ರ, ಪಕ್ಷದ ಹಿರಿಯ ನಾಯಕರಾದ ಜನಾರ್ದನ ಪೂಜಾರಿ, ಎಚ್. ವಿಶ್ವನಾಥ್ ಹಾಗೂ ಸಿ.ಕೆ. ಜಾಫರ್ ಷರೀಫ್ ಅವರು ಪಕ್ಷ ಹಾಗೂ ಸರ್ಕಾರದ ಬಗ್ಗೆ ಬಹಿರಂಗವಾಗಿ ಮಾತನಾಡುತ್ತಿದ್ದಾರೆ. ಇದರಿಂದ ಪಕ್ಷಕ್ಕೆ ಸಾಕಷ್ಟು ಮುಜುಗರವಾಗುತ್ತಿದೆ. ಅದನ್ನು ನಿಲ್ಲಿಸಬೇಕು ಎಂದು ಸಭೆಯಲ್ಲಿ ಆಗ್ರಹಿಸಿದರು. . ಅವರ ಮಾತಿಗೆ ಬಹುತೇಕ ಶಾಸಕರು ಬೆಂಬಲ ವ್ಯಕ್ತಪಡಿಸಿದರು.
ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ವಿರುದ್ಧ ಬಹುತೇಕ ಶಾಸಕರು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. ಗಂಗಾ ಕಲ್ಯಾಣ ಯೋಜನೆಯಲ್ಲಿ ಬೋರ್‌ವೆಲ್ ಕೊರೆಸಲು ಅನುಮತಿ ನೀಡಿ, ಕೊರೆದಿರುವ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸದೇ ಹಾಗೇ ಬಿಡಲಾಗಿದೆ. ಇದರಿಂದ ರೈತರಿಗೆ ಬೋರ್ ಕೊರೆಸಿದರೂ ಬಳಕೆ ಮಾಡಿಕೊಳ್ಳದಂತಾಗಿದೆ ಎಂದು ಬಹುತೇಕ ಶಾಸಕರು ಸಚಿವ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ.
Related Articles
Advertisement
ಏಪ್ರಿಲ್‌ನಿಂದ ಪ್ರತಿ ಬಿಪಿಎಲ್ ಕುಟುಂಬಕ್ಕೂ ಪ್ರತಿಯೊಬ್ಬರಿಗೂ ಐದು ಕೆಜಿ ಬದಲು ಎಂಟು ಕೆಜಿ ಅಕ್ಕಿ ನೀಡುವುದಾಗಿ ಮುಖ್ಯಮಂತ್ರಿಯವರು ತಿಳಿಸಿದ್ದಾರೆ, ಬಜೆಟ್‌ನಲ್ಲಿ ಅಧಿಕೃತ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಸದನಕ್ಕೆ ಶಾಸಕರು ಹೆಚ್ಚಿನ ಸಂಖ್ಯೆಯಲ್ಲಿ ಗೈರು ಹಾಜರಾಗುತ್ತಿರುವ ಬಗ್ಗೆ ಮುಖ್ಯಮಂತ್ರಿ ಅಸಮಾಧಾನ ವ್ಯಕ್ತಪಡಿಸಿ, ಸಚಿವರು ಕಡ್ಡಾಯ ಹಾಜರಾಗಲು ಸೂಚಿಸಿದ್ದು, ಪ್ರತಿಪಕ್ಷಗಳ ವಾಗ್ಧಾಳಿಗೆ ಎದುರಿಸಲು ಎಲ್ಲ ಶಾಸಕರು ಒಗ್ಗಟ್ಟು ಪ್ರದರ್ಶಿಸುವಂತೆ ಮುಖ್ಯಮಂತ್ರಿ ಸೂಚಿಸಿದ್ದಾರೆ ಎನ್ನಲಾಗಿದೆ.
ಶಾಸಕಾಂಗ ಪಕ್ಷದ ಸಭೆ ನಂತರ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ಜನಾರ್ದನ ಪೂಜಾರಿ, ಸಿ.ಕೆ. ಜಾಫರ್ ಷರೀಫ್ ಹಾಗೂ ಎಚ್. ವಿಶ್ವನಾಥ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಮೂವರು ನಾಯಕರ ವಿರುದ್ಧ ನೋಟಿಸ್ ನೀಡಿ ಕ್ರಮ ಕೈಗೊಳ್ಳುವಂತೆ ಕೇಂದ್ರ ಸಮಿತಿಗೆ ತಿಳಿಸಲಾಗುವುದು ಎಂದು ಅವರು ಹೇಳಿದರು. ಇಂದಿನ ಶಾಸಕಾಂಗ ಪಕ್ಷದ ಸಭೆಯಲ್ಲಿಯೂ ಬಹುತೇಕ ಶಾಸಕರು ಗೈರು ಹಾಜರಾಗಿದ್ದು ಎದ್ದು ಕಾಣುತ್ತಿತ್ತು.