ಬೆಂಗಳೂರು: ಶರಾವತಿ ಮೂಲ ಸಂತ್ರಸ್ತರ ಸಮಸ್ಯೆ ಬಗೆಹರಿಸುವುದಕ್ಕೆ ಸಂಬಂಧಪಟ್ಟಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಅಧ್ಯಕ್ಷತೆಯಲ್ಲಿ ಗುರುವಾರ ಉನ್ನತ ಮಟ್ಟದ ಸಭೆ ನಡೆದಿದ್ದು, 9 ಸಾವಿರ ಎಕರೆ ಜಮೀನು ಹಕ್ಕುಪತ್ರವನ್ನು ಸಂತ್ರಸ್ತರಿಗೆ ನೀಡುವ ಪ್ರಸ್ತಾವನೆಯನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಲು ನಿರ್ಧರಿಸಲಾಗಿದೆ.
ಈ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಶಾಸಕರುಗಳಾದ ಹರತಾಳು ಹಾಲಪ್ಪ, ಅಶೋಕ್ ನಾಯಕ್ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಅನಂತರ ಈ ನಿಯೋಗ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮನವಿಯನ್ನು ಸಲ್ಲಿಸಿದೆ.
ಪುನರ್ವಸತಿಗೆ ಬಿಡುಗಡೆಯಾದ 9,119 ಎಕರೆ ಪ್ರದೇಶಕ್ಕೆ ಕೇಂದ್ರ ಸರಕಾರದಿಂದ ಆದೇಶ ಲಭಿಸಬೇಕು. ಸರಕಾರಿ ಆದೇಶಗಳಲ್ಲಿ ಬಿಡುಗಡೆಯಾಗಿರುವ ವಿಸ್ತೀರ್ಣಕ್ಕಿಂತ ಅಂದಾಜು 1,196 ಎಕರೆ ಹೆಚ್ಚು ವಿಸ್ತೀರ್ಣ ಪ್ರಸ್ತಾವನೆಗಳಲ್ಲಿ ಬಂದಿದ್ದು ಈ ಬಗ್ಗೆ ಸರಕಾರ ಗಮನ ಹರಿಸಬೇಕು. ಈಗಾಗಲೇ 15ರಿಂದ 20 ಗ್ರಾಮಗಳಲ್ಲಿ ಸರ್ವೆ ಮಾಡಬೇಕೆಂದು ಹೊಸದಾಗಿ ಅರ್ಜಿಗಳು ಬಂದಿದೆ. ಮುಂದೆಯೂ ಸಹ ಹೊಸ ಅರ್ಜಿಗಳು ಬರುವ ಸಂಭವವಿದ್ದು, ಈ ಬಗ್ಗೆ ಹೊಸದಾಗಿ ನಿರ್ಣಯ ಕೈಗೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.