ಕನ್ನಡ ಚಿತ್ರರಂಗದ ಮರೆಯಲಾರದ ಚಿತ್ರಗಳ ಪೈಕಿ “ಗುರು ಶಿಷ್ಯರು’ ಚಿತ್ರ ಕೂಡ ಒಂದು. 1981ರಲ್ಲಿ ತೆರೆಗೆ ಬಂದಿದ್ದ “ಗುರು ಶಿಷ್ಯರು’ ಚಿತ್ರ ಬಾಕ್ಸಾಫೀಸ್‌ನಲ್ಲಿ ಸೂಪರ್ ಹಿಟ್ ಆಗಿ ಸಿನಿ ಪ್ರಿಯರ ಮನಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಇಂದಿಗೂ “ಗುರು ಶಿಷ್ಯರು’ ಹಾಡುಗಳು, ಡೈಲಾಗ್‌ಗಳು ಆಗಾಗ್ಗೆ ಸಿನಿಪ್ರಿಯರ ಬಾಯಲ್ಲಿ ಹರಿದಾಡುತ್ತಲೇ ಇರುತ್ತವೆ. ಇಷ್ಟಕ್ಕೂ ನಾಲ್ಕು ದಶಕಗಳ ಹಿಂದೆ ಬಂದಿದ್ದ “ಗುರು ಶಿಷ್ಯರು’ ಚಿತ್ರದ ಬಗ್ಗೆ ಈಗೇಕೆ ಮಾತು ಅಂತೀರಾ? ಅದಕ್ಕೂ ಒಂದು ಕಾರಣವಿದೆ. ಅದೇನೆಂದರೆ, ಈಗ ಮತ್ತೆ ಕನ್ನಡದಲ್ಲಿ “ಗುರು ಶಿಷ್ಯರು’ ಹೆಸರಿನಲ್ಲಿ ಶರಣ್ ಅಭಿನಯದ ಹೊಸಚಿತ್ರ ಇಂದು ಸೆಟ್ಟೇರುತ್ತಿದೆ.
ಹೌದು, ನಾಲ್ಕು ದಶಕಗಳ ಹಿಂದೆ ಬಂದಿದ್ದ “ಗುರು ಶಿಷ್ಯರು’ ಚಿತ್ರವನ್ನು ನೆನಪಿಸುವಂಥ ಟೈಟಲ್ ಈ ಚಿತ್ರಕ್ಕೆ ಇಟ್ಟುಕೊಂಡಿ ದ್ದರೂ, ಈ ಚಿತ್ರಕ್ಕೂ, ಆ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಚಿತ್ರದ ಕಥೆ ಮತ್ತು ಸಬೆjಕ್ಟ್ಗೆ ಹೊಂದಾಣಿಕೆಯಾಗುತ್ತದೆ ಎಂಬ ಕಾರಣಕ್ಕೆ ಚಿತ್ರತಂಡ, “ಗುರು ಶಿಷ್ಯರು’ ಟೈಟಲ್ ಅನ್ನು ಈ ಚಿತ್ರದಲ್ಲಿ ಬಳಸಿಕೊಳ್ಳುತ್ತಿದೆಯಂತೆ. ಇನ್ನು ಶರಣ್ ಅವರೇ ನಿರ್ಮಿಸಿ, ನಟಿಸುತ್ತಿರುವ “ಗುರು ಶಿಷ್ಯರು’ ಚಿತ್ರದ ಮುಹೂರ್ತ ಸಮಾರಂಭ ಇಂದು ಸರಳವಾಗಿ ನಡೆಯಲಿದ್ದು, ಫೆಬ್ರವರಿಯಿಂದ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ.
ಇದನ್ನೂ ಓದಿ:ಸುದೀಪ್ ನಿರ್ದೇಶನದ ಚಿತ್ರಕ್ಕೆ ಸ್ಕ್ರಿಪ್ಟ್ ರೆಡಿ
ಇದೇ ವೇಳೆ “ಗುರು ಶಿಷ್ಯರು’ ಚಿತ್ರದ ಬಗ್ಗೆ ಮಾತನಾಡಿದ ನಟ ಶರಣ್, “ಇಲ್ಲಿಯವರೆಗೆ ನಾನು ಯಾವ ಸಿನಿಮಾಗಳಲ್ಲೂ ಕಾಣಿಸಿಕೊಂಡಿರದಂಥ ಹೊಸ ಅವತಾರವನ್ನ ಈ ಸಿನಿಮಾದಲ್ಲಿ ನೋಡಬಹುದು. ನನ್ನ ಸಿನಿಮಾ ಕೆರಿಯರ್‌ನಲ್ಲೇ ಫಸ್ಟ್ ಟೈಮ್ ನನ್ನ ಲುಕ್ ಕಂಪ್ಲೀಟ್ ವಿಭಿನ್ನವಾಗಿರಲಿದೆ. ಇನ್ನು ನನ್ನ ಇತರ ಸಿನಿಮಾಗಳಲ್ಲಿರುವಂತೆ, ಕಾಮಿಡಿ ಟ್ರ್ಯಾಕ್ ಈ ಸಿನಿಮಾದಲ್ಲೂ ಇರಲಿದ್ದು, ಅದರ ಜೊತೆಗೇ ಒಂದು ಹ್ಯೂಮರಸ್ ಆಗಿ ಒಂದು ವಿಶೇಷ ವಿಷಯವೊಂದನ್ನು ಈ ಸಿನಿಮಾದಲ್ಲಿ ಹೇಳುತ್ತಿದ್ದೇವೆ. ಚಿತ್ರದ ಕಥೆ ಮತ್ತು ಪಾತ್ರ ತುಂಬ ಕುತೂಹಲ ಇಟ್ಟುಕೊಂಡಿರುವುದರಿಂದ, ಈಗಲೇ ಅದರ ಬಗ್ಗೆ ಹೆಚ್ಚೇನೂ ಹೇಳಲಾರೆ’ ಎನ್ನುತ್ತಾರೆ ಶರಣ್. ಇನ್ನು “ಗುರು ಶಿಷ್ಯರು’ ಚಿತ್ರಕ್ಕೆ ಜಡೇಶ್ ಕುಮಾರ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.