ಕಲಬುರಗಿ: ಸಣ್ಣ ಖಾತೆ-ದೊಡ್ಡ ಖಾತೆ ಏನೆಂಬುದಿಲ್ಲ. ಆಸಕ್ತಿಯಿಂದ ಸಣ್ಣ ಖಾತೆಯಲ್ಲೂ ದೊಡ್ಡ ಕೆಲಸ ಮಾಡಬಹುದು ಎಂದು ಸಣ್ಣ ಕೈಗಾರಿಕಾ ಹಾಗೂ ಸಾರ್ವಜನಿಕ ಉದ್ದಿಮೆ ಖಾತೆ ನೂತನ ಸಚಿವ ಶರಣಬಸಪ್ಪ ಗೌಡ ದರ್ಶನಾಪುರ ತಿಳಿಸಿದರು.
ಸಚಿವರಾದ ನಂತರ ಕಲಬುರಗಿಗೆ ಪ್ರಥಮವಾಗಿ ಆಗಮಿಸಿದ ಅವರು ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಕರೆಯಲಾದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
ಈ ಹಿಂದೆ ಇಂಧನ ಖಾತೆ ಸಚಿವರಾಗಿ ಕೆಲಸ ಮಾಡಿರಬಹುದು. ಈಗ ಸಣ್ಣ ಕೈಗಾರಿಕಾ ಸಚಿವರಾಗಿದ್ದೇನೆ. ಆದರೆ ತಮಗೆ ದೊಡ್ಡದು- ಸಣ್ಣದು ಎಂಬುದಿಲ್ಲ. ಕಂದಾಯ ಖಾತೆಯೇನು ದೊಡ್ಡದಾ? ಯಾವ ಖಾತೆಯಾದರೇನು? ಕೆಲಸ ಮಾಡುವ ಮೂಲಕ ಹೆಸರು ತರಬೇಕೆಂದು ಮಾರ್ಮಿಕವಾಗಿ ದರ್ಶನಾಪುರ ಹೇಳಿದರು.
ಕಲ್ಯಾಣ ಕರ್ನಾಟಕದಲ್ಲಿ ಸಣ್ಣ ಕೈಗಾರಿಕೆಗಳ ಸ್ಥಾಪನೆಗೆ ಇರುವ ಅವಕಾಶಗಳು ಹಾಗೂ ಸೌಲಭ್ಯಗಳು ಕುರಿತಾಗಿ ನಾಲ್ಕೈದು ದಿನದೊಳಗೆ ಬೆಂಗಳೂರಿನಲ್ಲಿ ಇಲಾಖಾಧಿಕಾರಿಗಳೊಂದಿಗೆ ಸಭೆ ನಡೆಸಿ ಪರಾಮರ್ಶಿಸಲಾಗುವುದು ಎಂದು ಸಚಿವರು ಹೇಳಿದರು.
ಕಲ್ಯಾಣ ಕರ್ನಾಟಕ ಪ್ರಣಾಳಿಕೆ ಜಾರಿಗೆ ಬದ್ದ: ಕಲ್ಯಾಣ ಕರ್ನಾಟಕದ ಭಾಗದ ಸಮಗ್ರ ಅಭಿವೃದ್ಧಿ ನಿಟ್ಟಿನಲ್ಲಿ ರೂಪಿಸಲಾದ ಪ್ರಣಾಳಿಕೆ ಜಾರಿಗೆ ಸರ್ಕಾರ ಬದ್ದವಿದೆ ಎಂದು ಸಣ್ಣ ಕೈಗಾರಿಕಾ ಸಚಿವ ಶರಣಬಸಪ್ಪ ದರ್ಶನಾಪುರ ಇದೇ ಸಂದರ್ಭದಲ್ಲಿ ಹೇಳಿದರು.
371 ಜೆ ಜಾರಿಯಲ್ಲಿನ ನ್ಯೂ ನತೆಗಳ ಸರಿಪಡಿಸುವಿಕೆ, ಕಕ ಭಾಗದ ಖಾಲಿ ಹುದ್ದೆಗಳ ಭರ್ತಿ, ಕಲ್ಯಾಣ ಕರ್ನಾಟಕದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಆದ್ಯತೆ, ಸಮಗ್ರ ಅಭಿವೃದ್ಧಿ ಗೆ ನೀಲ ನಕ್ಷೆ ರೂಪಿಸುವುದು ಸೇರಿದಂತೆ ಇತರ ಬೇಡಿಕೆಗಳ ಸಾಕಾರಕ್ಕೆ ಬದ್ದತೆ ಹೊಂದಲಾಗಿದೆ ಎಂದು ಸ್ಪಷ್ಟ ಪಡಿಸಿದರು
ಶಾಸಕ ಅಲ್ಲಮಪ್ರಭು ಪಾಟೀಲ್ ನೆಲೋಗಿ, ಮಾಜಿ ಶಾಸಕ ತಿಪ್ಪಣ್ಣಪ್ಪ ಕಮಕನೂರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ, ಮುಖಂಡರಾದ ಸುಭಾಷ ರಾಠೋಡ, ಸೋಮಶೇಖರ ಗೋನಾಯಕ, ಡಾ. ಕಿರಣ ದೇಶಮುಖ ಸೇರಿದಂತೆ ಮುಂತಾದವರಿದ್ದರು.