Advertisement

ಶರಣು ಶರಣು ಎನ್ನಿ ಅಪ್ಪಾವ್ರ ಗದ್ದುಗೆಗೆ 

12:30 AM Mar 23, 2019 | |

ಕಲುಬುರ್ಗಿನಗರದ ಮಾರ್ಕೆಟ್‌ ರಸ್ತೆಯಲ್ಲಿ ಶರಣಬಸವೇಶ್ವರ ಗದ್ದುಗೆ ಇದೆ. ಲೋಕ ಪ್ರಸಿದ್ಧ ಈ ಗದ್ದುಗೆಯಲ್ಲಿ ಸದಾ ಭಕ್ತರ ದಂಡು ನೆರೆದಿರುತ್ತದೆ. ಅಪ್ಪಾ ಅವರ ದರ್ಶನ ಮಾಡಿದರೆ ಸಕಲ ಸಮಸ್ಯೆ ನಿವಾರಣೆಯಾಗುತ್ತದೆ ಎಂದೇ ನಾಡಿನ ನಾನಾ ಭಾಗದಿಂದ ಭಕ್ತಾದಿಗಳು ಪಾದ ಯಾತ್ರೆ ಬರುವುದು ಉಂಟು. ಅದರಲ್ಲೂ ಜಾತ್ರೆಯ ಸಂದರ್ಭದಲ್ಲಿ  ರಾಯಚೂರು, ಬಿಜಾಪುರ, ಬಾಗಲಕೋಟೆ ಅಷ್ಟೇ ಏಕೆ, ಮಹಾರಾಷ್ಟ್ರದ ಸೊಲ್ಲಾಪುರದಿಂದಲೂ ನಡಿಗೆಯಲ್ಲೇ ಗದ್ದುಗೆ ತಲುಪುವವರಿದ್ದಾರೆ. 

Advertisement

 ಯಾರು ಈ ಶರಣಬಸವೇಶ್ವರರು ಅನ್ನೋದಕ್ಕೆ ರೋಚಕ ಇತಿಹಾಸವೇ ಇದೆ. 
   ಶ್ರೀ ಶರಣಬಸವೇಶ್ವರರು ಕ್ರಿ.ಶ 1746ರಲ್ಲಿ ಕಲಬುರಗಿಯ ಜೇವರ್ಗಿ ತಾಲೂಕಿನ ಅರಳಗುಂಡಗಿ  ಗ್ರಾಮದಲ್ಲಿ ಜನಿಸಿದರು.  ಶರಣಬಸವೇಶ್ವರರು ಕಲಿಕೆಯ ದಿನಗಳಲ್ಲಿ ಅಧ್ಯಾತ್ಮದ ಕಡೆಗೆ ಹೆಚ್ಚಿನ ಒಲವು ತೋರಿದರು. ಇವರು ಚಿಕ್ಕವಯಸ್ಸಿನಲ್ಲಿಯೇ ವಿಭೂತಿ, ರುದ್ರಾಕ್ಷಿ$, ಲಿಂಗ, ಗುರು, ಜಂಗಮ, ದಾಸೋಹ ಹಾಗೂ ಕಾಯಕ… ಈ ಎಲ್ಲದರಹಿರಿಮೆಯನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡಿದ್ದರು. ಕಾಯಕ ದಾಸೋಹ , ಲಿಂಗಾಯತ ತತ್ವಗಳ ಬೋಧನೆ ಮಾಡುತ್ತಾ ಜಿಲ್ಲೆಯಾದ್ಯಂತ ಸಂಚರಿಸಿದರು.

ಶರಣಬಸವೇಶ್ವರರು ಮಹಾದೇವಿಯವರನ್ನು ಮದುವೆಯಾದರು. ನಂತರವೂ ದಾಸೋಹ, ಕಾಯಕ, ಲಿಂಗಪೂಜೆ, ಬಡವರಿಗೆ, ರೋಗಿಗಳಿಗೆ ಸೇವೆ ಮಾಡುವುದನ್ನು ಬಿಡಲಿಲ್ಲ.   ಮನೆಯಲ್ಲಿ ಅಣ್ಣತಮ್ಮಂದಿರಿಗೆ ಇವರ ಸೇವೆ ಇಷ್ಟವಾಗಲಿಲ್ಲ. ಹೀಗಾಗಿ,  ಕುಟುಂಬದ ಆಸ್ತಿಯಲ್ಲಿ ತಮ್ಮ ಪಾಲು ಪಡೆದು, ಅದರಿಂದ ಬಂದ ಹಣವನ್ನೆಲ್ಲಾ ದಾಸೋಹಕ್ಕೇ ಬಳಸಿದರು. ಇವರ ದಾಸೋಹ ಕಾಯಕ ಮನುಷ್ಯರಿಗೆ ಮಾತ್ರವಲ್ಲದೆ ಪ್ರಾಣಿ-ಪಕ್ಷಿಗಳಿಗೂ ನಡೆಯುತ್ತಿತ್ತು.

 ಶರಣಬಸವೇಶ್ವರರ ಒಳ್ಳೆಯ ಆಚಾರಗಳಿಂದ ಹಾಗೂ ಬೋಧನೆಯಿಂದ ಪ್ರಭಾವಿತರಾದವರು ಕಳ್ಳತನ, ಮೋಸ ಮತ್ತು ವಂಚನೆ ಮಾಡುವುದನ್ನು ಬಿಟ್ಟು ಕಾಯಕದಲ್ಲಿ ತೊಡಗಿದವರು. ಎಷ್ಟೋ ಮಂದಿ ಲಿಂಗ ದೀಕ್ಷೆ  ಪಡೆದು ಶರಣರಾಗಿ ಬದಲಾದರು.

  ಹೀಗಿರುವಾಗ ಶರಣಬಸವೇಶ್ವರರ ಹೆಂಡತಿ ಮತ್ತು ಮಗು ಅಕಾಲಿಕ ಮರಣಹೊಂದಿದರು. ಬಳಿಕ ಅರಳಗುಂಡಗಿಯ ಗ್ರಾಮದ ಋಣವು ತೀರಿತೆಂದು ಹಣೆಯ ಮೇಲೆ ವಿಭೂತಿ, ಹೆಗಲ ಮೆಲೆ ಒಂದು ಕಂಬಳ, ಕೊರಳಲ್ಲಿ ರುದ್ರಾಕ್ಷಿ$ ಹಾಗೂ ಶಿವನ ಮಂತ್ರವನ್ನು ಜಪಿಸುತ್ತಾ ಕಲುºರ್ಗಿಯ ಕಡೆ ಪ್ರಯಾಣ ಬೆಳೆಸಿದರು.

Advertisement

 ಅವರು ದಾರಿಯುದ್ದಕ್ಕೂ ಹಲವಾರು ಪವಾಡಗಳನ್ನು ಮಾಡಿ, ದಾಸೋಹವನ್ನು ನಡೆಸಿದರು.  ಔರಾದ್‌ನ ದಂಡರಾಯರು ಕೂಡ ಇವರ ದಾಸೋಹಕ್ಕೆ  ಕೈ ಜೋಡಿಸಿದರು. ಒಂದು ದಿನ ಹೈದ್ರಾಬಾದಿನ ರಾಜನು ತನ್ನ ಸೇನಾನಿಗಳೊಂದಿಗೆ ಕಂದಾಯ ಕರವನ್ನು ಕೇಳಲು ಬಂದರು. ಆಗ ಶರಣರ ದಾಸೋಹವನ್ನು ಕಂಡು ಬೆರಗಾಗಿ ಪಾದಗಳಿಗೆ ನಮಿಸಿ ಬರಿಗೈಯಲ್ಲಿ ಹೊರಟು ಹೋದರಂತೆ. ಈ ಕಾಯಕದಿಂದ ಶರಣರ ಹೆಸರು ಎಲ್ಲಡೆ ಹರಡಿತು. ಇದನ್ನು ಗಮನಿಸಿದ ಕಲುºರ್ಗಿಯ ದೊಡ್ಡಪ್ಪಗೌಡರು ಶರಣಬಸವೇಶ್ವರರನ್ನು ಕಲಬುರಗಿಗೆ ಆಹ್ವಾನಿಸಿ, ದಾಸೋಹ ನಡೆಸಲು ಮತ್ತು ಅವರು ನೆಲೆಸಲು ಜಾಗವನ್ನು ನೀಡಿದರು. ಅನ್ನ, ಜ್ಞಾನ ದಾಸೋಹ ಮಾಡುತ್ತಲೇ ಬೆಳಕಾದ ಶರಣಬಸವೇಶ್ವರರು 1824ರಲ್ಲಿ ಅನಾರೋಗ್ಯದಿಂದಾಗಿ ಲಿಂಗೈಕ್ಯರಾದರು. ನಂತರ ಅಲ್ಲಿ ಸಮಾಧಿ ನಿರ್ಮಾಣವಾಯಿತು. ಗೋಪುರ ಬಂತು. ಅದುವೇ ಇಂದು ಪವಿತ್ರವಾದ ಶ್ರೀ ಶರಣಬಸವೇಶ್ವರ ದೇವಸ್ಥಾನವಾಗಿದೆ. ಪ್ರತಿ ನಿತ್ಯ ಬೆಳಗ್ಗೆ, ಸಂಜೆ ಪೂಜೆ, ವರ್ಷದ 365 ದಿನಗಳೂ ಅನ್ನದಾಸೋಹ ನಡೆಯುತ್ತಿರುತ್ತದೆ.   ಹೋಳಿ ಹುಣ್ಣಿಮೆ ಮುಗಿದ ಐದನೇ ದಿನಕ್ಕೆ (ಈ ಸಲ ಮಾರ್ಚ್‌ 25) ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಭವ್ಯ 
ರಥೋತ್ಸವ ಜರಗುತ್ತದೆ. 

 ಮಲ್ಲಿಕಾರ್ಜುನ ಮೇತ್ರಿ, ಹಿಂಚಗೇರಾ                                                               
 

Advertisement

Udayavani is now on Telegram. Click here to join our channel and stay updated with the latest news.

Next