ಶೃಂಗೇರಿ: ಶರನ್ನವರಾತ್ರಿ ಉತ್ಸವದ ಏಳನೇ ದಿನ ಶ್ರೀ ಶಾರದಾ ಪೀಠದಲ್ಲಿ ಶ್ರೀ ಶಾರದಾಂಬೆಗೆ ವೀಣಾಶಾರದಾಲಂಕಾರ ಮಾಡಲಾಗಿತ್ತು. ತಾಯಿ ಶಾರದೆಯು ಕರದಲ್ಲಿ ಪುಸ್ತಕ, ಜ್ಞಾನ ಮುದ್ರೆ, ಅಮೃತ ಕಲಶ, ವೀಣೆ ಹಿಡಿದು ಭಕ್ತರನ್ನು ಅನುಗ್ರಹಿಸಿದಳು. ಶ್ರೀ ಶಾರದೆಯ ಅಲಂಕಾರ ನಯನ ಮನೋಹರವಾಗಿತ್ತು. ಶ್ರೀಮಠದ ನರಸಿಂಹವನದ ಗುರುಭವನದಲ್ಲಿ ವಿಶ್ವದ ಬೃಹತ್ ವೀಣೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ನವರಾತ್ರಿಯ ಸಂದರ್ಭದಲ್ಲಿ ಉಭಯ ಜಗದ್ಗುರುಗಳು ಪ್ರಾತಃ ಕಾಲದ ಆಹಿ°ಕ ಅನುಷ್ಠಾನದ ನಂತರ ಗುರು ಪಾದುಕೆಗಳಿಗೂ ಹಾಗೂ ಶ್ರೀ ಚಕ್ರಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಜಗದ್ಗುರು ಶ್ರೀ ಭಾರತೀ ತೀರ್ಥ ಸ್ವಾಮೀಜಿಗಳು ಬೆಳಗ್ಗೆ ಗುರುನಿವಾಸದಿಂದ ಆಗಮಿಸಿ, ಶ್ರೀ ಮಠದ ಎಲ್ಲಾ ದೇವಸ್ಥಾನಗಳಿಗೂ ಭೇಟಿ ನೀಡಿ ಪೂಜೆ ಸಲ್ಲಿಸಿದರು. ನಂತರ ಶ್ರೀ ಶಾರದಾಂಬಾ ದೇಗುಲಕ್ಕೆ ತೆರಳಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಮಹಾಮಂಗಳಾರತಿ ನಂತರ ಭಕ್ತರಿಗೆ ಪ್ರಸಾದ ನೀಡಿದರು.
ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಗಳು ತುಂಗಾ ನದಿಯನ್ನು ದೋಣಿಯಲ್ಲಿ ದಾಟಿ, ಗಂಗಾ ಪೂಜೆ ನೆರವೇರಿಸಿದ ಬಳಿಕ ವಾದ್ಯ ಮೇಳದೊಂದಿಗೆ ಶ್ರೀ ಮಠದ ಹೊರ ಪ್ರಾಕಾರ ಮತ್ತು ಒಳ ಪ್ರಾಕಾರದ ದೇಗುಲಗಳಿಗೆ ಆಗಮಿಸಿ ಪೂಜೆ ಸಲ್ಲಿಸಿದರು. ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಅವರು ಮಂಗಳಾರತಿ ಸ್ವೀಕರಿಸಿದರು.
ಉಭಯ ಜಗದ್ಗುರುಗಳು ಶ್ರೀ ಶಾರದಾಂಬೆಗೆ ಪೂಜೆ ಸಲ್ಲಿಸಿದ ಬಳಿಕ ಶ್ರೀ ಶಾರದಾ ದೇಗುಲದಲ್ಲಿ ಶ್ರೀಮಠದ ಆಡಳಿತಾ ಧಿಕಾರಿ ಗೌರಿಶಂಕರ್ ಗುರು ಪಾದುಕೆ ಹಾಗೂ ಸರಸ್ವತಿ ಪೂಜೆ ಸಲ್ಲಿಸಿದರು. ಶ್ರೀಮಠದ ಪುರೋಹಿತ ಕೃಷ್ಣ ಭಟ್ ನೇತೃತ್ವದಲ್ಲಿ ಧಾರ್ಮಿಕ ಕಾರ್ಯ ನಡೆಯಿತು. ಆಶ್ವಯಜ ಶುಕ್ಲ ಸಪ್ತಮಿಯಂದು ಮೂಲಾ ನಕ್ಷತ್ರ ದಿನ ಸರಸ್ವತಿ ಪೂಜೆ ಇರುವುದರಿಂದ ವಿವಿಧ ಕಡೆಗಳಿಂದ ಆಗಮಿಸಿದ್ದ ಭಕ್ತರು ಮಕ್ಕಳಿಗೆ ಅಕ್ಷರಭ್ಯಾಸ ಮಾಡಿಸಿದರು.
ಧಾರ್ಮಿಕ ಕಾರ್ಯಕ್ರಮ: ನವರಾತ್ರಿ ಅಂಗವಾಗಿ ಶ್ರೀಮಠದ ಯಾಗಶಾಲೆಯಲ್ಲಿ ಹೋಮಾದಿಗಳು, ವಿವಿಧ ಪಾರಾಯಣ ನಡೆಯುತ್ತಿದೆ. ಸುಹಾಸಿನಿ ಪೂಜೆ ಸಹಿತ ಅನೇಕ ಧಾರ್ಮಿಕ ವಿಧಿ ವಿಧಾನಗಳು ಪ್ರತಿ ದಿನವೂ ನಡೆಯುತ್ತಿದೆ.