ಕಲಬುರಗಿ: ಅಕಾಲಿಕ ನಿಧನರಾದ ನೆರೆಯ ಬಸವಕಲ್ಯಾಣ ಕ್ಷೇತ್ರದ ಶಾಸಕರಾಗಿದ್ದ ಬಿ. ನಾರಾಯಣರಾವ್ ಅವರಿಗೆ ನಗರದ ಜಿಲ್ಲಾ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಪಕ್ಷದ ವತಿಯಿಂದ ಸಂತಾಪ ಸೂಚಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಮಾಜಿ ಸಚಿವ ಡಾ| ಶರಣಪ್ರಕಾಶ ಪಾಟೀಲ್ ಹಾಗೂ ಮಾಜಿ ಶಾಸಕ ತಿಪ್ಪಣ್ಣಪ್ಪ ಕಮಕನೂರ ಮಾತನಾಡಿ, ಅತ್ಯಂತ ಸರಳ ಹಾಗೂ ಸಮಾಜ ಜೀವಿಯಾಗಿದ್ದ ನಾರಾಯಣರಾವ್ ಅವರ ನಿಧನವು ಪಕ್ಷಕ್ಕೆ ಹಾಗೂ ಸಮಾಜಕ್ಕೆ ದೊಡ್ಡ ಹಾನಿಯಾಗಿದೆ ಎಂದರು.
ಮೃತರ ನಿಧನವು ದಿಗ್ಭ್ರಮೆ ಮೂಡಿಸಿದೆ. ಅವರ ನಿಧನವು ಸಹಿಸುವ ಶಕ್ತಿ ಅವರ ಕುಟುಂಬ ವರ್ಗದವರಿಗೆ ಹಾಗೂ ಅಭಿಮಾನಿಗಳಿಗೆ ನೀಡಲು ಎಂದು ಪ್ರಾರ್ಥಿಸಿದರು. ಶ್ರದ್ಧಾಂಜಲಿ ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಶರಣಪ್ಪ ಮಾನೇಗಾರ ಮಾತನಾಡಿದರು. ಶ್ರದ್ಧಾಂಜಲಿ ಸಭೆಯಲ್ಲಿ
ಮುಖಂಡರಾದ ಭೀಮಣ್ಣ ಸಾಲಿ, ದಿಲೀಪ ಪಾಟೀಲ, ಬಾಬು ಒಂಟಿ, ಹಣಮಂತರಾವ ಜವಳಿ, ಭೀಮಾಶಂಕರ ವತನದಾರ, ಚಂದ್ರಿಕಾ ಪರಮೇಶ್ವರ, ಪರಮೇಶ್ವರ ಖಾನಾಪುರ, ಅಲ್ಲಂಪ್ರಭು ಪಾಟೀಲ್, ಹಣಮಂತರಾವ ಜವಳಿ, ರಮೇಶ ನಾಟೀಕಾರ, ಸಿದ್ದು ಬಾನರ, ವಿಜಯಕುಮಾರ ಹದಗಲ್ ಇದ್ದರು.
ಬಿ.ನಾರಾಯಣರಾವ ಸಾವು ಬರಸಿಡಿಲಿನಂತೆ ಎರಗಿದೆ. ಜನಪರ ಕಾಳಜಿಯೊಂದಿಗೆ ಕೆಲಸ ಮಾಡುತ್ತಿದ್ದರು. ಕಾಂಗ್ರೆಸ್ ಪಕ್ಷಕ್ಕಾಗಿ ಶ್ರಮಪಟ್ಟಿದ್ದರು. ಕೆಳಮಟ್ಟದಿಂದ ಕೆಲಸ ಮಾಡಿಕೊಂಡು ಬಂದು ಶಾಸಕರಾಗಿದ್ದರು. ಇವರ ಅಗಲುವಿಕೆಯಿಂದ ಕ್ಷೇತ್ರಕ್ಕೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ತುಂಬಲಾಗದ ನಷ್ಟವಾಗಿದೆ.
– ಡಾ| ಮಲ್ಲಿಕಾರ್ಜುನ ಖರ್ಗೆ, ರಾಜ್ಯಸಭಾ ಸದಸ್ಯ
ಸರಳ ವ್ಯಕ್ತಿತ್ವದ ಹಿರಿಯ ರಾಜಕಾರಣಿಗಳಾದ ಬಸವಕಲ್ಯಾಣದ ಶಾಸಕರಾಗಿದ್ದ ಬಿ.ನಾರಾಯಣ ಅವರು ಅನಿರೀಕ್ಷಿತವಾಗಿ ಮೃತಪಟ್ಟಿರುವುದು ತೀವ್ರ ಆಘಾತ ತಂದಿದೆ. ತಮ್ಮ ತಂದೆ ಧರ್ಮಸಿಂಗ್ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ದೇವರು ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಮತ್ತು ಆತ್ಮಕ್ಕೆ ಚಿರಶಾಂತಿ ಸಿಗಲಿ.
– ಡಾ| ಅಜಯ ಸಿಂಗ್, ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ