Advertisement

ಸ್ಮಾರ್ಟ್‌ ಸಿಟಿಯಲ್ಲೊಂದು ಸವಿರುಚಿ ತಾಣ

11:30 AM Jun 25, 2019 | Sriram |

ಆಧುನಿಕತೆಯ ಭರಾಟೆಯಲ್ಲಿ ಏನೇನೆಲ್ಲಾ ಬದಲಾವಣೆ ಆಗಿದ್ದರೂ, ದಾವಣಗೆರೆ ಮಹಾನಗರವು ತನ್ನ ಈ ನಗರ ಆಹಾರ ಸಂಸ್ಕೃತಿಯನ್ನು ಹಾಗಯೇ ಉಳಿಸಿಕೊಂಡಿದೆ. ನಿಜ. ದಾವಣಗೆರೆ ಎಂದರೆ ಮಿರ್ಚಿ-ಮಂಡಕ್ಕಿ, ಬೆಣ್ಣೆದೋಸೆಗೆ ಫೇಮಸ್‌. ಹಾಗೆಯೇ, ಜೋಳದ ರೊಟ್ಟಿ, ಬಾಯಿ ಚಪ್ಪರಿಸುವ ಪಲ್ಯ. ಬಗೆ ಬಗೆಯ ಚಟ್ನಿ, ಉಪ್ಪಿನಕಾಯಿ ಹೀಗೆ ಸ್ವಾದಿಷ್ಟಕರ ಆಹಾರಕ್ಕೆ ಇಲ್ಲಿನ ಶ್ರೀ ಶರಭೇಶ್ವರ ಹೋಟೆಲ್‌ ಹೆಸರಾಗಿದೆ.

Advertisement

1976ರಲ್ಲಿ ನಗರದ ಬಿ.ಟಿ.ಗಲ್ಲಿ ಯರೆಕುಪ್ಪಿ ಹಿರೇಮಠದ ಶಿವಪ್ಪಯ್ಯನವರು ಕುಟುಂಬ ನಿರ್ವಹಣೆಗಾಗಿ ಪ್ರಾರಂಭಿಸಿದ ಶ್ರೀವೀರಭದ್ರೇಶ್ವರ ಪ್ರಸ್ತುತ ಶ್ರೀಶರಭೇಶ್ವರ ಊಟದ ಹೋಟೆಲ್‌ ಆಗಿ ಬದಲಾಗಿದೆ. ಆರಂಭದಲ್ಲಿ ಕೇವಲ ಒಂದೂವರೆ ರೂಪಾಯಿಗೆ ಹೊಟ್ಟೆ ತುಂಬುವಷ್ಟು ಊಟ ನೀಡುತ್ತಿದ್ದ ಹೋಟೆಲ್‌ ಈಗ ಆಧುನಿಕ ಸ್ಪರ್ಶ ಪಡೆದಿದೆ. ಪಿಬಿ ರಸ್ತೆಯಲ್ಲಿ ಹೋಟೆಲ್‌ ಆರಂಭಿಸಿ, ಅದೇ ರಸ್ತೆಯ ಮಹಾತ್ಮ ಗಾಂಧಿ ಸರ್ಕಲ್‌ ಬಳಿಯ ನೀಲಗುಂದ ಕಾಂಪ್ಲೆಕ್ಸ್‌ಗೆ 1998ರಲ್ಲಿ ಸ್ಥಳಾಂತರಗೊಂಡು ಸ್ಮಾರ್ಟ್‌ಸಿಟಿಗೆ ತಕ್ಕಂತೆ ಬೆಳೆದಿರುವ ಈ ಹೋಟೆಲ್‌, ಬರೀ ದಾವಣಗೆರೆ ಮಂದಿಗಲ್ಲ, ರಾಜಕಾರಣಿಗಳು, ಉದ್ಯಮಿಗಳು, ಅಧಿಕಾರಿಗಳು, ಸೆಲಿಬ್ರಿಟಿಗಳಿಗೂ ಅಚ್ಚು ಮೆಚ್ಚಿನ ಊಟದ ತಾಣವಾಗಿದೆ.

ಬಿಸಿ ಬಿಸಿ ರೊಟ್ಟಿ
ಬಿಸಿ ಬಿಸಿ ರೊಟ್ಟಿ ಅಥವಾ ಚಪಾತಿ ಜೊತೆಗೆ ಗುರೆಳ್ಳು, ಶೇಂಗಾ, ಕೆಂಪು ಚಟ್ನಿ, ಕಾಳು, ತರಕಾರಿ, ಬೇಳೆ ಪಲ್ಯ, ಪಾಯಸ, ರಾಗಿ ಅಂಬಲಿ, ಅನ್ನ, ಚಿತ್ರಾನ್ನ, ರಸಂ, ಸಾಂಬಾರು, ಸೌತೆಕಾಯಿ-ಮೆಂತ್ಯ ಸೊಪ್ಪು³,ಉಪ್ಪಿನಕಾಯಿ, ಮೊಸರು, ಮಜ್ಜಿಗೆ… ಇದು ಹೋಟೆಲ್‌ನ ಮೆನು. ಪ್ರತಿದಿನವೂ ವೈವಿದ್ಯಮಯ ಆಹಾರ ತಯಾರಿಸಿ, ಹೊಟ್ಟೆ ಬಿರಿಯುವಷ್ಟು ಬಡಿಸುವ ಪರಿಪಾಠವಿದೆ. ಪ್ರತಿ ಸೋಮವಾರ ಹೋಳಿಗೆ ಊಟ ಈ ಹೋಟೆಲ್‌ನ ವಿಶೇಷ. ತಮ್ಮ ತಂದೆ ಶಿವಪ್ಪಯ್ಯನವರು ಜೀವನೋಪಾಯಕ್ಕೆ ಆರಂಭಿಸಿದ ಕಾಯಕವನ್ನೇ ಮುಂದುವರಿಸಿರುವ ಎಚ್‌.ಎಂ.ಬಸವರಾಜಯ್ಯ ಹೋಟೆಲ್‌ನ ಉಸ್ತುವಾರಿ ನೋಡಿಕೊಂಡರೆ, ಅವರಿಗೆ ಬೆನ್ನೆಲುಬಾಗಿ ನಿಂತಿರುವ ಪತ್ನಿ ಭಾರತಿ ಊಟದ ರುಚಿ ಕೆಡದಂತೆ ಎಚ್ಚರವಹಿಸುತ್ತಾರೆ. ಹಾಗಾಗಿಯೇ ಹೋಟೆಲ್‌ ಊಟ ಮನೆರುಚಿಯಂತಿರುತ್ತದೆ. ಶುಚಿ, ರುಚಿ, ಗುಣಮಟ್ಟದ ಊಟಕ್ಕೆ ಈ ಹೋಟೆಲ್‌ನಲ್ಲಿ ಆದ್ಯತೆ. ಗ್ರಾಹಕರ ಕಾಳಜಿ, ಆತೀ¾ಯ ನಡವಳಿಕೆಯಿಂದಾಗಿಯೇ ಗ್ರಾಹಕರಿಗೆ ಹೋಟೆಲ್‌ ಬಗ್ಗೆ ಅಭಿಮಾನ ಒಂದಿಷ್ಟು ಹೆಚ್ಚು.

ತಂದೆ-ತಾಯಿ ತೋರಿಸಿದ ಮಾರ್ಗ-ಕಾಯಕದಲ್ಲಿ ತೊಡಗಿಕೊಂಡಿದ್ದೇನೆ. ಮುಖ್ಯವಾಗಿ, ಗ್ರಾಹಕರ ಸಂತೃಪ್ತಿಯೇ ನಮ್ಮ ಉದ್ದೇಶ. ಅವರು ಸಂತಸದಿಂದ ಊಟ ಸವಿದರೆ ನಮಗದೇ ತೃಪ್ತಿ ಎನ್ನುತ್ತಾರೆ ಹೋಟೆಲ್‌ ಮಾಲೀಕ ಎಚ್‌.ಎಂ.ಬಸವರಾಜಯ್ಯ.

ವಿದೇಶದಲ್ಲೂ ಸವಿರುಚಿ
ಎಚ್‌.ಎಂ.ಬಸವರಾಜಯ್ಯ-ಭಾರತಿ ದಂಪತಿಗೆ ನಾಲ್ವರು ಮಕ್ಕಳು. ಹಿರಿಯ ಪುತ್ರಿ ಎಚ್‌.ಎಂ.ಶಿವರಂಜನಿ ಅಮೇರಿಕ ಕ್ಯಾಲಿಫೋರ್ನಿಯಾದ ಸ್ಯಾನ್‌ ಜೋಸ್‌ ನಗರದಲ್ಲಿದ್ದಾರೆ. ಅವರು ಸುಗ್ಗಿ ಊಟ ಹೆಸರಲ್ಲಿ ಆನ್‌ಲೈನ್‌ ಮೂಲಕ ಉತ್ತರ ಹಾಗೂ ದಕ್ಷಿಣ ಭಾರತದ ಆಹಾರ ಸಿದ್ದಪಡಿಸಿ, ಗ್ರಾಹಕರಿಗೆ ಪೂರೈಸುತ್ತಿದ್ದಾರೆ. ಆ ಕೆಲಸಕ್ಕೆ ಪತಿ ವೀರೇಶ್‌ ಕಲ್ಮಠ ಸಾಥ್‌ ನೀಡುತ್ತಿದ್ದಾರೆ. ಶಿಕ್ಷಕಿಯಾಗಿರುವ ಮತ್ತೋರ್ವ ಪುತ್ರಿ ಪ್ರಿಯಾಂಕ ಕತಾರ್‌ನಲ್ಲಿದ್ದಾರೆ. ಮೂರನೇ ಪುತ್ರಿ ದರ್ಶಿನಿ ದಾವಣಗೆರೆಯಲ್ಲಿದ್ದಾರೆ. ಪುತ್ರ ಅಭಿಷೇಕ್‌ ಆರ್ಕಿಟೆಕ್‌ ಆಗಿದ್ದರೂ ತಮ್ಮ ತಂದೆಯಂತೆ ಹೋಟೆಲ್‌ ಉದ್ಯಮದಲ್ಲೇ ಆಸಕ್ತಿ ಹೊಂದಿದ್ದಾರೆ.

Advertisement

ಶರಬೇಶ್ವರ ಫುಡ್‌ ಪ್ರೊಡಕ್ಟ್
ಶ್ರೀಶರಭೇಶ್ವರ ಹೋಟೆಲ್‌ ಬರೀ ಸ್ವಾದಿಷ್ಟಕರ ಊಟಕ್ಕಷ್ಟೇ ಸಿಮೀತವಾಗಿಲ್ಲ. ಶರಭೇಶ್ವರ ಫುಡ್‌ ಪ್ರಾಡಕ್ಟ್ ಹೆಸರಲ್ಲಿ ಸಾಂಬಾರ್‌ ಪುಡಿ, ರಸಂ ಪುಡಿ. ಶೇಂಗಾ ಪುಡಿ. ಹೋಳಿಗೆ ಸಾರಿನ ಮಸಾಲ ಪುಡಿ, ಕಡ್ಲೆ ಪುಡಿ, ಅಗಸಿ ಪುಡಿ….ಹೀಗೆ ಬಗೆ ಬಗೆಯ ಚಟ್ನಿ ಪುಡಿ ಸಿದ್ದಪಡಿಸಿ, ಮಾರುಕಟ್ಟೆ ಮಾಡಲಾಗುತ್ತಿದೆ.

-ಎಚ್‌.ಕೆ. ನಟರಾಜ್‌
ಚಿತ್ರಗಳು- ವಿಜಯ್‌ಕುಮಾರ್‌ ಜೈನ್‌

Advertisement

Udayavani is now on Telegram. Click here to join our channel and stay updated with the latest news.

Next