Advertisement

ಬಡವರು-ಶೋಷಿತರಿಗೆ ಮೀಸಲು ಸಿಗಲಿ

03:50 PM Mar 01, 2021 | Team Udayavani |

ಹೊಸದುರ್ಗ: ಬಡವರ, ನಿರ್ಗತಿಕರ, ಶೋಷಿತರ ಪಾಲಾಗಬೇಕಿದ್ದ ಮೀಸಲಾತಿ ಉಳ್ಳವರ ಪಾಲಾಗಿದೆ. ನೀತಿ ಮೇಲೆ ಮೀಸಲಾತಿ ನೀಡಿ. ಏಕೆಂದರೆ ಎಲ್ಲಾ ಸಮಾಜದಲ್ಲೂ ಬಡವರು, ನಿರ್ಗತಿಕರು ಇದ್ದಾರೆ ಎಂದು ಕುಂಚಿಟಿಗ ಮಹಾಸಂಸ್ಥಾನದ ಜಗದ್ಗುರು ಡಾ| ಶಾಂತವೀರ ಸ್ವಾಮೀಜಿ ಹೇಳಿದರು.

Advertisement

ಪಟ್ಟಣದ ಕುಂಚಿಟಿಗ ಮಹಾಸಂಸ್ಥಾನದ ಸಭಾಂಗಣದಲ್ಲಿ ಆಯೋಜಿಸಿದ್ದ 31 ನೇ ವರ್ಷದ ವಿಜಯರಾಯ ಸಂಗಮೇಶ್ವರ ಜಯಂತಿ ಹಾಗೂ ಬನುಮಯ್ಯನವರ ಪ್ರತಿಮೆ ಪ್ರತಿಷ್ಠಾಪನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು. ಮೀಸಲಾತಿ ಏರಿಸುವ ಅಥವಾ ಇಳಿಸುವ ಅವಶ್ಯಕತೆ ಇಲ್ಲ. ಜಾಗೃತ ಮನುಸ್ಸುಗಳು ಹೋರಾಟ ಮನೋಭಾವ ಹೊಂದಿವೆ. ಆದರೆ ಸಂದಿಗ್ಧ ಹಾಗೂ ಸಂಕಷ್ಟ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಹಾಗಾಗಿ ಹೋರಾಟದಲ್ಲಿ ಸಂವೇದನಾಶೀಲತೆ ಇರಬೇಕು ಎಂದರು.

ಕುಂಚಿಟಿಗರ ಕುಲಶಾಸ್ತ್ರ ಅಧ್ಯಯನ ಪೂರ್ಣಗೊಂಡಿದ್ದು, ಬುಡಕಟ್ಟಿನ ಸಂಸ್ಕೃತಿ ಕುಂಚಿಟಿಗರಲ್ಲಿದೆ. ಪ್ರವರ್ಗ1 ಮೀಸಲಾತಿಗೆ ಪ್ರಾದೇಶಿಕ ಅಸಮಾನತೆ ಸರಿಪಡಿಸಬೇಕು. ರಾಜಕೀಯ ಸ್ಥಾನಮಾನ ಮಾನದಂಡದ ಮೇಲೆ 1994ರಲ್ಲಿ ಅನ್ಯಾಯವಾಗಿದೆ. ಸಾಮಾಜಿಕವಾಗಿ ನಾವೆಲ್ಲರೂ ಒಂದೇ ಎಂಬ ಒಗ್ಗಟ್ಟಿನ ಮನೋಭಾವ ನಮ್ಮ ಧ್ಯೇಯವಾಗಬೇಕು ಎಂದು ಕರೆ ನೀಡಿದರು.

ಮೀಸಲಾತಿ ಒದಗಿಸಬೇಕಾಗಿರುವುದು ಧಾರ್ಮಿಕ, ರಾಜಕೀಯ, ಸಾಮಾಜಿಕ ಮುಖಂಡರ ಜವಾಬ್ದಾರಿ. ಮಧ್ಯದಲ್ಲಿ ಬಂದ ಲಿಂಗಾಯತ ಒಕ್ಕಲಿಗ ಕಮಾಟಿ ನಾಮಧಾರೆ ಪದನಾಮದ ಜಾತಿ ಬಿಟ್ಟು ಅಖಂಡ ಕುಂಚಿಟಿಗರೆಲ್ಲರೂ ಒಂದೇ. ಶೈಕ್ಷಣಿಕ, ಔದ್ಯೋಗಿಕ ಸ್ಥಾನಮಾನಕ್ಕೆ ಪ್ರವರ್ಗ1 ಹಾಗೂ ಕೇಂದ್ರದ ಒಬಿಸಿ ಪಟ್ಟಿಯಲ್ಲಿ ಮೀಸಲಾತಿ ಪಡೆಯಬೇಕು ಎಂದರು. ಶಾಸಕ ಗೂಳಿಹಟ್ಟಿ ಶೇಖರ್‌ ಮಾತನಾಡಿ, ಶಾಂತವೀರ ಶ್ರೀಗಳು ಜನಪರ ಕಾಳಜಿ ಹೊಂದಿದ್ದಾರೆ. ಸರ್ವ ಸಮಾಜಕ್ಕೂ ಸೇವೆ ಮಾಡುವ ಅಪರೂಪದ ವ್ಯಕ್ತಿತ್ವದವರಾಗಿದ್ದಾರೆ. ನಾನು ಶಾಸಕ ನಾಗಲು ಶಾಂತವೀರ ಶ್ರೀಗಳ ಆಶೀರ್ವಾದ ಹಾಗೂ ಲಿಂಗಮೂರ್ತಿಯವರ ತ್ಯಾಗವೇ ಕಾರಣ ಎಂದರು.

ಕೋವಿಡ್‌ ಸಂದರ್ಭದಲ್ಲೂ ಹೊಸದುರ್ಗ ಕ್ಷೇತ್ರದ ಅಭಿವೃದ್ಧಿಗೆ ಅತ್ಯಂತ ಹೆಚ್ಚು ಅನುದಾನ ತಂದಿದ್ದೇನೆ. ವಿವಿ ಸಾಗರದ ಹಿನ್ನೀರಿನಿಂದ ತೊಂದರೆ ಅನುಭವಿಸುವ ಗ್ರಾಮಗಳ ಅಭಿವೃದ್ಧಿಗೆ 85 ಕೋಟಿ ರೂ. ಅನುದಾನ ಬಿಡುಗಡೆ ಮಾಡಿಸಿದ್ದೇನೆ. ಕುಂಚಿಟಿಗ ಗುರುಪೀಠದ ಆವರಣದಲ್ಲಿರುವ ವೆಂಕಟೇಶ್ವರ ದೇವಾಲಯ ನಿರ್ಮಾಣ ಕಾಮಗಾರಿಯನ್ನು ಹೆಚ್ಚಿನ ಅನುದಾನ ಹಾಗೂ ವೈಯಕ್ತಿಕವಾಗಿಯೂ ನೆರವು ನೀಡಿ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದರು.

Advertisement

ರಜ್ಯ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಹಾಗೂ ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ ಮಾತನಾಡಿ, ಕುಂಚಿಟಿಗ ಸಮಾಜದ ಋಣ ನನ್ನ ಮೇಲಿದೆ. ಈ ಋಣ ತೀರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಸಮಾಜಕ್ಕೆ ಹೊಳಲ್ಕೆರೆ ನಗರದಲ್ಲಿ ಎರಡು ಎಕರೆ ಜಮೀನು ನೀಡುತ್ತೇನೆ ಎಂದರು.

ಖನಿಜ ನಿಗಮದ ಅಧ್ಯಕ್ಷ ಲಿಂಗಮೂರ್ತಿ ಮಾತನಾಡಿ, ಐತಿಹಾಸಿಕ ಹಾಗೂ ಸಾಂಸ್ಕೃತಿಕ ಹಿನ್ನೆಲೆಯುಳ್ಳ ಹಾಗೂ ಹರಿದು ಹಂಚಿಹೋಗಿದ್ದಕುಂಚಿಟಿಗ ಸಮಾಜವನ್ನು ಸಂಘಟಿಸಿದ ಕೀರ್ತಿ ಶಾಂತವೀರ ಶ್ರೀಗಳಿಗೆ ಸಲ್ಲುತ್ತದೆ. ಅವರ ಆಶೀರ್ವಾದದಿಂದ ರಾಜಕೀಯ ಸ್ಥಾನಮಾನ ಸಿಕ್ಕಿದೆ ಎಂದು ಹೇಳಿದರು.

ಕೌಶಲ್ಯ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪ ಮಾತನಾಡಿ, ಮುಖ್ಯಮಂತ್ರಿ ಯಡಿಯೂರಪ್ಪನವರು ಶಿರಾ ಉಪ ಚುನಾವಣೆಯಲ್ಲಿ ವಾಗ್ಧಾನ ಮಾಡಿದಂತೆ ಪ್ರವರ್ಗ 1ಕ್ಕೆ ಕುಂಚಿಟಿಗ ಸಮಾಜವನ್ನು ಸೇರ್ಪಡೆಗೊಳಿಸಬೇಕುಎಂದು ಒತ್ತಾಯಿಸಿದರು.

ಮಾನಕವಾಡ ಶ್ರೀಗಳು, ಶಿವಭದ್ರಯ್ಯ, ಸಿದ್ದಪ್ಪ ಮಾತನಾಡಿದರು. ಭಗೀರಥ ಪೀಠದ ಶ್ರೀ ಪುರುಷೋತ್ತಮಾನಂದ ಸ್ವಾಮೀಜಿ, ಭೋವಿ ಗುರು ಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಶ್ರೀ ಬಸವಮಾಚಿದೇವ ಸ್ವಾಮೀಜಿ, ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ, ಭಾರತಿ ಅಣ್ಣಪ್ಪ ಶ್ರೀಗಳು, ಕೊರಟಗೆರೆ ಮಹಲಿಂಗ ಶ್ರೀಗಳು, ಹಾವೇರಿಯ ಚಂದ್ರಶೇಖರ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು.

ಬಿಬಿಎಂಪಿ ಸದಸ್ಯ ಲಗ್ಗೆರೆ ನಾರಾಯಣಸ್ವಾಮಿ, ಕಲ್ಲೇಶಣ್ಣ, ಶಾಂತ ಗುರೂಜಿ, ರವಿ ಗೌಡ, ರಂಗೇಗೌಡ, ಶ್ರೀನಿವಾಸ ರೆಡ್ಡಿ, ಪುರಸಭಾಧ್ಯಕ್ಷ ಶ್ರೀನಿವಾಸ ಬೈರೇಶ್‌ ಮೊದಲಾದವರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next