Advertisement
ಸರಕಾರಿ ಸೇವೆಯಲ್ಲಿ…ದಿಲ್ಲಿ ವಿ.ವಿ.ಯಲ್ಲಿ ನಾಲ್ಕು ವರ್ಷ ಪ್ರಾಧ್ಯಾಪಕರಾಗಿದ್ದ ಡಾ|ಶಾಂತಾರಾಮ್, ಜೀವಶಾಸ್ತ್ರದಲ್ಲಿ ಉನ್ನತ ಅಧ್ಯಯನ ಮಾಡಿದ ಕಾರಣ 1958ರಲ್ಲಿ ಮಲೇರಿಯಾ ನಿರ್ಮೂಲನ ಸಂಸ್ಥೆ ನಿರ್ದೇಶಕ ಕನ್ನಡಿಗ ಅನಂತಸ್ವಾಮಿ ರಾವ್ ಕರೆಗೆ ಓಗೊಟ್ಟು ಸರಕಾರಿ ಸೇವೆಗೆ ಸೇರಿದರು. ಕರ್ನಾಟಕ, ಕೇರಳ, ತಮಿಳುನಾಡು ರಾಜ್ಯಗಳನ್ನು ಒಳಗೊಂಡ ದಕ್ಷಿಣ ಭಾರತದ ಸಹಾಯಕ ನಿರ್ದೇಶಕರಾಗಿ ನಾಲ್ಕು ವರ್ಷ ಕೆಲಸ ಮಾಡಿದ ಡಾ|ಶಾಂತಾರಾಮರಿಗೆ ಮನಃಶಾಂತಿ ದೊರಕಲಿಲ್ಲ. ಆಗಲೂ ಈಗಿರುವಂತೆ ಮೇಲಾಧಿಕಾರಿಗಳಿಗೆ ಬೇಕಾದಂತೆ ವರದಿ ಮಾಡಬೇಕಿತ್ತೇ ವಿನಾ ವಾಸ್ತವದಲ್ಲಿರುವ ಕ್ಷೇತ್ರದ ಅನುಭವ ಅವರಿಗೆ ಬೇಕಾಗಿರಲಿಲ್ಲ. ಹೀಗಾಗಿ ವೃತ್ತಿ ಸಂತೃಪ್ತಿ ಕಾಣದ ಶಾಂತಾರಾಮರಿಗೆ ಪ್ರಾಧ್ಯಾಪಕ ವೃತ್ತಿ ಬಿಟ್ಟದ್ದು ತಪ್ಪು ಎಂದು ಅರಿವಾಯಿತು. ಆಗಲೇ ಮಣಿಪಾಲದಲ್ಲಿ ಸಂಸ್ಥೆಗಳನ್ನು ಕಟ್ಟುತ್ತಿದ್ದ ಡಾ|ಟಿ.ಎಂ.ಎ.ಪೈಯವರು ಕರೆದರು….
1960 ರ ದಶಕ. ತಿಂಗಳಿಗೆ 4,500 ರೂ. ವೇತನ ದೊರಕುತ್ತಿದ್ದ ಶಾಂತಾರಾಮ್ 450 ರೂ. ವೇತನಕ್ಕೆ ಮಣಿಪಾಲ ಕೆಎಂಸಿಯಲ್ಲಿ ಬೇಸಿಕ್ ಸೈನ್ಸ್ ಅಧ್ಯಾಪಕರಾಗಿ ಸೇರಿದರು. ಮನೆಮಂದಿ, ಸ್ನೇಹಿತರು ಟೀಕಿಸಿದರು. ಆದರೆ “ದುಡ್ಡು ಮುಖ್ಯವಲ್ಲ, ಮನಃಶಾಂತಿ ಮುಖ್ಯ. ಈಗಲೂ ನನಗೆ ತಪ್ಪು ಮಾಡಿಲ್ಲ ಎಂದೇ ಅನಿಸುತ್ತಿದೆ’ ಎನ್ನುತ್ತಾರೆ ಡಾ|ಶಾಂತಾರಾಮ್. ಕಾರಿಗೆ ಬೆಂಕಿ!
1962 ರಿಂದ 15 ವರ್ಷ ಕೆಎಂಸಿಯಲ್ಲಿ ಅಧ್ಯಾಪನ ಮಾಡಿದ ಡಾ|ಶಾಂತಾರಾಮರಿಗೆ ಕುಂದಾಪುರದ ಭಂಡಾರ್‌ಕಾರ್ ಕಾಲೇಜು ಕೈಬೀಸಿ ಕರೆಯಿತು. ಒಂದು ಹಂತದಲ್ಲಿ ವಿದ್ಯಾರ್ಥಿಗಳ ಘರ್ಷಣೆಯಿಂದ ಕಾಲೇಜನ್ನು ಮುಚ್ಚಬೇಕೋ ಎನಿಸುವಷ್ಟು ಪರಿಸ್ಥಿತಿ ಹದಗೆಟ್ಟಿತ್ತು. ಕುಂದಾಪುರದ ಸ್ಥಳೀಯರ ಒತ್ತಾಸೆಗೆ ಕಟ್ಟುಬಿದ್ದ ಶಾಂತಾರಾಮ್ ಪ್ರಾಂಶುಪಾಲರಾಗಿ ಒಂದು ವರ್ಷಕ್ಕಾಗಿ ಹೋದವರು ಆರು ವರ್ಷ ಮುಂದುವರಿದರು. ಅದೇನೂ ಸುಖದ ಸುಪ್ಪತ್ತಿಗೆಯಾಗಿರಲಿಲ್ಲ. ಒಂದು ಬಾರಿ ಇವರ ಕಾರಿಗೆ ಬೆಂಕಿಯನ್ನೂ ಹಾಕಿದ್ದರು. ಅವರು ಯಾರೆಂದು ಗೊತ್ತಿದ್ದರೂ ಅವರ ವಿರುದ್ಧ ಪೊಲೀಸ್ ಠಾಣೆಗೆ ದೂರು ಕೊಡಲಿಲ್ಲ. ಈಗಲೂ ಎಲ್ಲ ಕಡೆ ಭಾಷಣದಲ್ಲಿ ಅವರು “ನಾವು ವಿದ್ಯಾರ್ಥಿಗಳಾಗಿರುವಾಗ ಹೇಗಿದ್ದೆವೆಂದು ತಿಳಿದುಕೊಳ್ಳಿ’ ಎಂದು ಹೇಳುತ್ತಾರೆ.
Related Articles
ಕೆಲವು ವರ್ಷ ಮಣಿಪಾಲ ಅಕಾಡೆಮಿಯ ಆಡಳಿತಾಧಿಕಾರಿ ಜೊತೆ ಭಂಡಾರ್‌ಕಾರ್ ಕಾಲೇಜಿನ ಪ್ರಾಂಶುಪಾಲತ್ವವನ್ನೂ ನಿಭಾಯಿಸಿದರು. ಭಂಡಾರ್‌ಕಾರ್ ಕಾಲೇಜಿನ ವಿಶ್ವಸ್ತ ಮಂಡಳಿಗೂ ಸೇರಿದ ಶಾಂತಾರಾಮ್ ಕಾಲೇಜಿನಲ್ಲಿ ಈಗ ಕಾಣುವ ಪ್ರತಿ ಕಲ್ಲು, ಪ್ರತಿ ಕಟ್ಟಡವನ್ನು ಬಲ್ಲವರು. ಜೀವಶಾಸ್ತ್ರದ ಪ್ರಾಧ್ಯಾಪಕರಾಗಿದ್ದರೂ ಯಕ್ಷಗಾನ, ನಾಟಕ, ಗಮಕ ಇತ್ಯಾದಿ ಕ್ಷೇತ್ರಗಳಲ್ಲಿ ಕೈಯಾಡಿಸಿ ಇವೆಲ್ಲವನ್ನೂ ಕರ್ಮಭೂಮಿ ಭಂಡಾರ್‌ಕಾರ್ ಕಾಲೇಜಿನಲ್ಲಿ ಅಳವಡಿಸಿದರು. ಯಕ್ಷಗಾನದ ಹಿನ್ನೆಲೆಗೆ ತಂದೆಯವರ ಯಕ್ಷಗಾನ ಆಸಕ್ತಿ ಕಾರಣವಾಯಿತು. ಸಾಹಿತ್ಯಪ್ರವೃತ್ತಿಗೆ ಗುರುಗಳಾಗಿದ್ದ ಎಸ್.ವಿ. ಪರಮೇಶ್ವರ ಭಟ್, ಡಿ.ಎಲ್. ನರಸಿಂಹಾಚಾರ್, ಜಿ.ಪಿ. ರಾಜರತ್ನಂ ಮೊದಲಾದವರು ಕಾರಣ. ಈಗಲೂ ಮೂರ್‍ನಾಲ್ಕು ಗಂಟೆ ಓದುತ್ತಾರೆ. ಶಾಲಾ ಸಮಯದಿಂದಲೂ ಸ್ವತಃ ನಾಟಕ ಪಾತ್ರಧಾರಿಯಾಗಿ ಬೆಳೆದರು. ನಾಟಕದ ಸ್ತ್ರೀಪಾತ್ರದಲ್ಲಿ ಇವರು ಎತ್ತಿದಕೈ. ಉಡುಪಿಯ ರಂಗಭೂಮಿಯಲ್ಲಿ ತೊಡಗಿಕೊಂಡ ಶಾಂತಾರಾಮ್ ಭಂಡಾರ್‌ಕಾರ್ ಕಾಲೇಜಿನಲ್ಲಿ ರಂಗ ಅಧ್ಯಯನ ಕೇಂದ್ರವನ್ನು ಹುಟ್ಟುಹಾಕಿದರು. ಒಂದು ವರ್ಷದ ರಂಗ ಅಧ್ಯಯನ ಕೋರ್ಸ್‌ನ ಹಲವು ಪ್ರತಿಭಾವಂತ ತಂಡಗಳು ಹೊರಬಂದಿವೆ. ರಾಜ್ಯೋತ್ಸವದ ದಿನ ಆರಂಭಿಸಿದ ರಾತ್ರಿಯ ತಾಳಮದ್ದಲೆ ಈಗ ಹಗಲಿನಲ್ಲಿ ನಡೆಯುತ್ತಿದೆ. ಗಮಕ ವಾಚನವನ್ನು ಆಸ್ವಾದಿಸಿ ತೃಪ್ತಿ ಕಂಡುಕೊಂಡ ಶಾಂತಾರಾಮ್ ಈ ಎಲ್ಲಾ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ನೀಡಲು ಕಾಲೇಜಿನಲ್ಲಿ ದತ್ತಿನಿಧಿ ಸ್ಥಾಪಿಸಿದ್ದಾರೆ. “ಸ್ಥಳೀಯರು, ಸಮಾಜದ ಸಹಕಾರದಿಂದಲೇ ಇದೆಲ್ಲ ಸಾಧ್ಯವಾಯಿತು. ಒಬ್ಬರಿಂದಲೇ ಇದು ಸಾಧ್ಯವಿಲ್ಲ. ನಾನು ಕೇವಲ ಮಾರ್ಗದರ್ಶನ ಕೊಟ್ಟೆ, ನಾಯಕತ್ವ ಕೊಟ್ಟೆ’ ಎನ್ನುತ್ತಾರೆ ಡಾ|ಶಾಂತಾರಾಮ್.
Advertisement
ಭಂಡಾರ್‌ಕಾರ್ ಕಾಲೇಜಿನ ಪ್ರಾಂಶುಪಾಲರಾಗಿ ನಿರ್ವಹಿಸಿದ ಬಳಿಕ ಹಿಂದಿನಂತೆ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಶಾಂತಾರಾಮ್ ಒಂದು ವರ್ಷದ ಹಿಂದೆ ಕಾರ್ಯದರ್ಶಿಯಾಗಿಯೂ ಆಯ್ಕೆಯಾದರು. ಪ್ರಾಂಶುಪಾಲರ ಸಂಘದ ಅಧ್ಯಕ್ಷರಾಗಿದ್ದ ಶಾಂತಾರಾಮ್, ಈಗ ಮಂಗಳೂರು ವಿ.ವಿ. ವ್ಯಾಪ್ತಿಯ ಖಾಸಗಿ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಮಾರ್ಗದರ್ಶನ ಮಾಡುತ್ತಿದ್ದಾರೆ.
ಬಹುಮುಖ ಪ್ರತಿಭೆಜೀವಶಾಸ್ತ್ರದ ಪ್ರಾಧ್ಯಾಪಕರಾಗಿಯೂ ಯಕ್ಷಗಾನ, ಸಾಹಿತ್ಯ, ನಾಟಕರಂಗ, ಗಮಕ ಇತ್ಯಾದಿ ಕ್ಷೇತ್ರಗಳಲ್ಲಿ ಕೈಯಾಡಿಸಿರುವ ಡಾ|ಶಾಂತಾರಾಮ್ ಅಕಾಡೆಮಿ ವ್ಯಾಪ್ತಿಯ ಯಾವುದೇ ಶಾಲಾ ಕಾಲೇಜುಗಳಲ್ಲಿ ಯಾವುದೇ ವಿಷಯದ ಅಧ್ಯಾಪಕರ ನೇಮಕ ಮಾಡುವ ಸಂದರ್ಭ ಆಯಾ ವಿಷಯಗಳ ಕುರಿತು ಅಧಿಕೃತವಾಗಿ ಪ್ರಶ್ನಿಸುವ ಪ್ರತಿಭೆಯನ್ನು ಹೊಂದಿದ್ದಾರೆ. 90 ಇಳಿವಯಸ್ಸಿನಲ್ಲಿಯೂ ಪ್ರಾಥಮಿಕ ಶಾಲೆಯಿಂದ ಕಾಲೇಜಿನವರೆಗೆ ಕಾರ್ಯಕ್ರಮಗಳಲ್ಲಿ ಸಮಯಕ್ಕೆ ಸರಿಯಾಗಿ ಪಾಲ್ಗೊಂಡು ಚುಟುಕಾದ ಮಾತಿನಲ್ಲಿ ನೆರೆದವರನ್ನು ಮುದಗೊಳಿಸುತ್ತಾರೆ. ಕನ್ನಡ ಮಾತನಾಡಿದರೆ ಶುದ್ಧ ಕನ್ನಡ, ಇಂಗ್ಲಿಷ್‌ನಲ್ಲಿ ಮಾತನಾಡಿದರೆ ಶುದ್ಧ ಇಂಗ್ಲಿಷ್‌ನಲ್ಲಿ ಮಾತನಾಡುತ್ತಾರೆ. ಸುದೀರ್ಘ ಒಂಭತ್ತು ದಶಕಗಳನ್ನು ಕಂಡ ಅಪರೂಪದ ವ್ಯಕ್ತಿ ಡಾ| ಹಟ್ಟಿಯಂಗಡಿ ಶಾಂತಾರಾಮ್ ಎನ್ನುವುದಕ್ಕಿಂತ ಇದು ವರೆಗೆ ನಿವೃತ್ತಿಯನ್ನೇ ಕಾಣದ ಪ್ರವೃತ್ತಿಪ್ರಿಯ “ಶಾಂತಾ’ರಾಮ ಎಂದು ಬಣ್ಣಿಸಬಹುದು. 90ನೆಯ ಹುಟ್ಟುಹಬ್ಬದ ಸಡಗರದಲ್ಲಿ ಅವರನ್ನು ಅವರ ಕರ್ಮಭೂಮಿ ಕುಂದಾಪುರದ ಭಂಡಾರ್‌ಕಾರ್ ಕಾಲೇಜಿನಲ್ಲಿ ಆ. 12, ಉಡುಪಿ ಎಂಜಿಎಂ ಕಾಲೇಜಿನಲ್ಲಿ ಆ. 13 ಬೆಳಗ್ಗೆ 9.30 ಕ್ಕೆ ಅಭಿನಂದಿಸಲಾಗುತ್ತಿದೆ. ಮನುಷ್ಯರ ಒಟ್ಟು ಆಯುಷ್ಯ 120 ಎನ್ನುತ್ತಾರೆ. 60 ರವರೆಗೆ ಸ್ವಂತಕ್ಕಾಗಿ ದುಡಿಮೆ ಮಾಡಬೇಕು. ಅನಂತರ ಸಮಾಜಸೇವೆಗೆ ಜೀವನ ಮುಡಿಪಿಡಬೇಕು. ಎಲ್ಲಿಯತನಕ ಚೈತನ್ಯ ಇರುತ್ತದೋ ಅಲ್ಲಿಯವರೆಗೂ ಕ್ರಿಯಾಶೀಲರಾಗಿರಬೇಕೆಂಬುದು ಡಾ|ಶಾಂತಾರಾಮ್ ತಣ್ತೀ. ಪ್ರತಿಯೊಬ್ಬರಲ್ಲಿಯೂ ಇರುವ ಪ್ರವೃತ್ತಿಯನ್ನು 60 ರವರೆಗೂ ಪೋಷಿಸಿ ಅನಂತರ ಅದರಲ್ಲಿ ಸೇವಾ ಮನೋಭಾವನೆಯಿಂದ ತೊಡಗಿಕೊಳ್ಳಬೇಕು. ಅಂದರೆ ದುಡಿಮೆಗಾಗಿ ಅಲ್ಲ. ದುಡಿಮೆ ಏನಿದ್ದರೂ 60 ರ ವರೆಗೆ. ಆಗಲೇ ಜೀವನಕ್ಕೆ ಒಂದು ಅರ್ಥ ಬರುತ್ತದೆ. ಒಂದು ರೀತಿಯಲ್ಲಿ ಇದು ಆತ್ಮಾನಂದ. ಸರಕಾರ ಕೊಡುವ ನಿವೃತ್ತಿ ಪಿಂಚಣಿಯನ್ನು ನಿವೃತ್ತಿ ಬಳಿಕ ಹತ್ತು ವರ್ಷವೂ ಬಳಸಿಕೊಳ್ಳುವುದು ಕಡಿಮೆ ಆಗಿರುವುದಕ್ಕೆ ನಿವೃತ್ತಿ ಬಳಿಕ ಪ್ರವೃತ್ತಿಯಲ್ಲಿ ಸೇವಾ ಭಾವನೆಯಿಂದ ತೊಡಗದೆ ಇರುವುದು ಕಾರಣ.
– ಡಾ| ಎಚ್. ಶಾಂತಾರಾಮ್ – ಮಟಪಾಡಿ ಕುಮಾರಸ್ವಾಮಿ