Advertisement

ಬಾನು ಮುಷ್ತಾಕ್‌ಗೆ ಶಾಂತಲಾ ಪಾಟೀಲ್‌ ಪುರಸ್ಕಾರ

01:27 PM Sep 27, 2017 | |

ಧಾರವಾಡ: ಇಂಧುಮತಿ ಹಾಗೂ ಡಾ| ಪಾಟೀಲ ಪುಟ್ಟಪ್ಪ ಅವರ ಪುತ್ರಿ ಶಾಂತಲಾ ಪಾಟೀಲ ಸಾಹಿತ್ಯ ಪುರಸ್ಕಾರವನ್ನು ಸಾಹಿತಿ ಬಾನು ಮುಷ್ತಾಕ್‌ ಅವರಿಗೆ ನಗರದ ಕವಿಸಂನಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಯಿತು. 15 ಸಾವಿರ ನಗದು ಒಳಗೊಂಡ ಪುರಸ್ಕಾರ ಸ್ವೀಕರಿಸಿದ ಬಾನು ಮಾತನಾಡಿ, ಧರ್ಮ, ರಾಜಕಾರಣ ಮತ್ತು ಲೈಂಗಿಕ ಜೀವನಗಳಲ್ಲಿ ಮಹಿಳೆ ಇನ್ನೂ ಅಸ್ಪೃಶ್ಯಳು.

Advertisement

ತಮ್ಮ ಪತಿಯ ನಿರಂತರ ಸಹಕಾರ ಇಲ್ಲದೇ ಹೋಗಿದ್ದರೆ ತಾವು ಈಗಾಗಲೇ ಮೂಲಭೂತವಾದಿಗಳಿಂದ ಹೆಚ್ಚಿನ ಕಿರುಕುಳ ಅನುಭವಿಸಬಹುದಿತ್ತು ಎಂದು ಅವರು ಹೇಳಿದರು. ಬರಹ ನನ್ನ ಜೀವನದ ಏಕಮೇವ ಗುರಿಯಾಗಿತ್ತು. ನಾನು ಬರೆಯುವವರೆಗೆ ಲೇಖಕಿಯರು ಮಹಿಳೆಯರ ಕೇವಲ ಮೇಲ್ಪದರಿನ ಸಮಸ್ಯೆಗಳ ಬಗ್ಗೆ ವೈಭವೀಕರಿಸಿ ಬರೆಯುತ್ತಿದ್ದರು.

ಇಂಥ ಹಿನ್ನೆಲೆಯಲ್ಲಿ  ನಾನು ನನ್ನ ಸಮಾಜದಲ್ಲಿಯೇ ಇದ್ದ ಮಹಿಳೆಯರ ಬದುಕಿನ ಬವಣೆಯನ್ನು ಬರಹ ರೂಪದಲ್ಲಿ ಚಿತ್ರೀಕರಿಸಲು ಬಯಸಿದೆ. ಮಹಿಳೆಯರ ಕಷ್ಟಕೋಟಲೆ ಬಗ್ಗೆ ಎದೆಯಲ್ಲಿ ಉರಿ ಇತ್ತು. ಇದನ್ನು ಶಮನಿಸಿದಲ್ಲಿ ಪಟ್ಟಭದ್ರ ಹಿತಾಸಕ್ತಿಗಳು ನನ್ನ ವಿರುದ್ಧ ಬೆಂಕಿಯನ್ನೇ ಉಗುಳುತ್ತಿದ್ದರು. ಇಂತದರಲ್ಲಿಯೇ ನಾನು ದಿಟ್ಟತನದಿಂದ ನಮ್ಮದೇ ಸಮಾಜದ ಮಹಿಳೆಯರ ವಸ್ತುಸ್ಥಿತಿಯನ್ನು ಬಿಂಬಿಸುವ ಪ್ರಯತ್ನ ಮಾಡಿದೆ ಎಂದರು.

ಗೌರಿ ಲಂಕೇಶ ಮತ್ತು ಡಾ| ಕಲಬುರ್ಗಿ ಅವರ ಹತ್ಯೆಯನ್ನು ಪ್ರಸ್ತಾಪಿಸಿದ ಅವರು, ಇಂತಹ ದುರ್ಗತಿ ಅವರಿಗೆ ಸತ್ಯ ಹೇಳಿದ್ದರಿಂದಲೇ ಬಂತೇ ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು. ಅಧ್ಯಕ್ಷತೆ ವಹಿಸಿ ಪುರಸ್ಕಾರ ಪ್ರದಾನ ಮಾಡಿದ ಸಚಿವ ಎಚ್‌.ಕೆ. ಪಾಟೀಲ ಮಾತನಾಡಿ, ಬುದ್ಧಿಜೀವಿಗಳು, ಸಾಹಿತಿಗಳು ಹಾಗೂ  ಪತ್ರಕರ್ತರು ವಿವಾದಾತ್ಮಕ ವಿಷಯಗಳನ್ನು ಚರ್ಚಿಸುವ ಬದಲಾಗಿ ಜನಸಾಮಾನ್ಯರಿಗೆ ನೇರವಾಗಿ ಅಗತ್ಯವಿರುವ ವಿಷಯ, ವಸ್ತುಗಳ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಬೇಕು. 

ದೇಶದ ಇತಿಹಾಸದಲ್ಲಿ ಮಹಿಳೆ ಸೇರಿದಂತೆ ಯಾರೊಬ್ಬರಿಗೂ ರಾಜಕೀಯ ಅಸ್ಪೃಶ್ಯತೆ ಇಲ್ಲ ಎಂದರು. ಕವಿವಿ ಕನ್ನಡ ವಿಭಾಗದ ವಿಶ್ರಾಂತ ಪ್ರಾಧ್ಯಾಪಕರಾದ ಡಾ| ಶಾಂತಾ ಇಮ್ರಾಪುರ, ನಾಡೋಜ ಡಾ| ಪಾಟೀಲ ಪುಟ್ಟಪ್ಪ ಮಾತನಾಡಿದರು. ದತ್ತಿ ದಾನಿ ವಿಜಯಮಾಲಾ ಇದ್ದರು. ಸಂಘದ ಕಾರ್ಯಾಧ್ಯಕ್ಷ ಡಾ| ಡಿ.ಎಂ. ಹಿರೇಮಠ ಪ್ರಾಸ್ತಾವಿಕ ಮಾತನಾಡಿದರು.  ಮನೋಜ ಪಾಟೀಲ ನಿರೂಪಿಸಿದರು. ಶಂಕರ ಹಲಗತ್ತಿ ಸ್ವಾಗತಿಸಿದರು. ಶಿವಾನಂದ ಭಾವಿಕಟ್ಟಿ ವಂದಿಸಿದರು.  

Advertisement
Advertisement

Udayavani is now on Telegram. Click here to join our channel and stay updated with the latest news.

Next