Advertisement

ಮುಂಬಯಿಗೆ ಮಲ್ಲಿಗೆ ಸರಬರಾಜಿಗೆ ತೊಡಕು; ಕಾರ್ಗೊ ವಿಮಾನವಿಲ್ಲದೆ ಶಂಕರಪುರ ಮಲ್ಲಿಗೆ ಬಾಕಿ

12:54 AM Feb 15, 2022 | Team Udayavani |

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಡೊಮೆಸ್ಟಿಕ್‌ ಕಾರ್ಗೋ ಸೇವೆ ಸ್ಥಗಿತಗೊಂಡಿರುವುದರ ದುಷ್ಪರಿಣಾಮ ಜಿಐ ಟ್ಯಾಗ್‌ ಹೊಂದಿರುವ ಶಂಕರಪುರ ಮಲ್ಲಿಗೆಯ ಮೇಲೂ ಉಂಟಾಗಿದೆ. ಮಲ್ಲಿಗೆಯನ್ನು ದೂರದ ಮುಂಬಯಿಗೆ ಕಳುಹಿಸಲು ಸಾಧ್ಯವಾಗದೆ ಸ್ಥಳೀಯ ಮಾರುಕಟ್ಟೆಯನ್ನೇ ನೆಚ್ಚಿಕೊಳ್ಳುವಂತಾಗಿದೆ. ಬೆಳೆ ಗಾರರಿಗೂ ಉತ್ತಮ ಬೆಲೆ ಸಿಗುವ ಅವಕಾಶ ತಪ್ಪಿದೆ.

Advertisement

ಉಡುಪಿ ಜಿಲ್ಲೆಯ ಶಂಕರಪುರ ಮತ್ತು ಪರಿಸರದಿಂದ ದಿನವೊಂದಕ್ಕೆ 300ರಿಂದ 500 ಅಟ್ಟೆ (1,200ರಿಂದ 1,500 ಚೆಂಡು) ಮಲ್ಲಿಗೆ ಹೂ ಮುಂಬಯಿಗೆ, ಕೆಲವೊಮ್ಮೆ ಅಲ್ಲಿಂದ ವಿದೇಶಕ್ಕೂ ಹೋಗುತ್ತಿತ್ತು. ಆದರೆ ಎರಡು ವರ್ಷಗಳಿಂದ ಕೊರೊನಾ ಹಿನ್ನೆಲೆಯಲ್ಲಿ ವಿಮಾನಯಾನ ಬಾಧಿತವಾಗಿದ್ದು, ಶಂಕರಪುರ ಮಲ್ಲಿಗೆಯೂ ರಾಜ್ಯ ಬಿಟ್ಟು ಹೊರಹೋಗದ ಸ್ಥಿತಿ ನಿರ್ಮಾಣವಾಗಿದೆ. ಇತ್ತೀಚೆಗೆ ಅಂತಾರಾಷ್ಟ್ರೀಯ ಕಾರ್ಗೊ ಸೇವೆ ಆರಂಭಗೊಂಡಿದೆಯಾದರೂ ಆಂತರಿಕ ಕಾರ್ಗೊ ಆರಂಭಗೊಂಡಿಲ್ಲ.

ಮಲ್ಲಿಗೆ ಬೇಗನೇ ಹಾಳಾಗುತ್ತದೆಯಾದ್ದರಿಂದ ವಿಮಾನದಲ್ಲಿ ಕಳುಹಿಸುವುದು ಅನಿವಾರ್ಯ. ಉಡುಪಿಯಿಂದ ಮಂಗಳೂರು ಮೂಲಕ ಒಂದು ಅಥವಾ ಎರಡು ತಾಸುಗಳಲ್ಲಿ ಮುಂಬಯಿಗೆ ವಿಮಾನದಲ್ಲೇ ಮಲ್ಲಿಗೆ ಸರಬರಾಜು ಆಗುತ್ತಿತ್ತು.

ಇದನ್ನೂ ಓದಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 7 ಹೊಸ ಸರ್ಕಾರಿ ಆಸ್ಪತ್ರೆ

ಬೇಡಿಕೆ ಏರಿಕೆ
ಮುಂಬಯಿಯಲ್ಲಿ ಶಂಕರಪುರ ಮಲ್ಲಿಗೆಗೆ ಬೇಡಿಕೆ ಇದೆ. ಕೆಲವೊಮ್ಮೆ ವಿದೇಶಕ್ಕೆ ರವಾನೆಯಾಗುತ್ತದೆ. ಈಗ ಮಲ್ಲಿಗೆಗೆ ಮುಂಬಯಿ ಮಾರಾಟಗಾರರಿಂದ ಬೇಡಿಕೆ ಬರುತ್ತಿದೆ. ಆದರೆ ಪೂರೈಕೆ ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಮಲ್ಲಿಗೆ ಪೂರೈಕೆದಾರರು.

Advertisement

ಹೂವು, ತರಕಾರಿಗೂ ಅಡ್ಡಿ
ಮಲ್ಲಿಗೆ ಮಾತ್ರವಲ್ಲದೆ ಇತರ ಹೂವುಗಳು, ಆಲಂಕಾರಿಕ ಪುಷ್ಪಗಳು ಕೂಡ ಮಂಗಳೂರು ಮೂಲಕ ಮುಂಬಯಿ ಮತ್ತು ಇತರೆಡೆಗೆ ಕಾರ್ಗೊ ಮೂಲಕ ಸರಬರಾಜಾಗುತ್ತಿದ್ದವು. ಅಣಬೆ ಸಹಿತ ವಿವಿಧ ತರಕಾರಿಗಳು, ಊರಿನ ವಿಶೇಷ ತರಕಾರಿಗಳ ಸಾಗಣೆಯೂ ನಡೆಯುತ್ತಿತ್ತು. ಇದೆಲ್ಲದಕ್ಕೂ ಈಗ ತಡೆ ಬಿದ್ದಿದೆ. ಆದರೆ ಅಂತಾರಾಷ್ಟ್ರೀಯ ಕಾರ್ಗೊ ಸೇವೆ ಆರಂಭವಾಗಿರುವುದರಿಂದ ಮೀನು ರಫ್ತಿಗೆ ತೊಂದರೆ ಆಗಿಲ್ಲ.

ಅಂತಾರಾಷ್ಟ್ರೀಯ ಕಾರ್ಗೊ ಸೇವೆ ನಡೆಯುತ್ತಿದೆ. ಡೊಮೆಸ್ಟಿಕ್‌ ಕಾರ್ಗೊ ಸೇವೆ ಪುನರಾರಂಭಕ್ಕೆ ಬ್ಯೂರೋ ಆಫ್‌ ಸಿವಿಲ್‌ ಏವಿಯೇಶನ್‌ ಸೆಕ್ಯೂರಿಟಿ ಅನುಮತಿ ಪಡೆದುಕೊಳ್ಳಲಾಗಿದ್ದು, ಸ್ಕ್ರೀನರ್‌ಗಳ ನೇಮಕಾತಿ ಪ್ರಕ್ರಿಯೆ ನಡೆದಿದೆ. ಶೀಘ್ರದಲ್ಲೇ ಅವರು ಸೇವೆಗೆ ಲಭ್ಯವಾಗಲಿದ್ದಾರೆ. ಮಂಗಳೂರಿಗೆ ಬರುವ ಕಾರ್ಗೊವನ್ನು ಸದ್ಯ ಟ್ರಕ್‌ಗಳ ಮೂಲಕ ನಿರ್ವಹಿಸಲಾಗುತ್ತಿದೆ. ಮಂಗಳೂರಿನಿಂದ ದೇಶದ ವಿವಿಧೆಡೆಗೆ ಶೀಘ್ರ ಕಾರ್ಗೊ ಸೇವೆ ಪುನರಾರಂಭಿಸಲಾಗುವುದು.
– ಸೆಲ್ವಮಣಿ, ಕಾರ್ಗೊ ವಿಭಾಗ,
ಮಂಗಳೂರು ವಿಮಾನ ನಿಲ್ದಾಣ

ನಾವು ಐದಾರು ಮಂದಿ 15 ವರ್ಷಗಳಿಂದ ಪ್ರತಿನಿತ್ಯ ವಿಮಾನದಲ್ಲಿ ಮುಂಬಯಿಗೆ ಮಲ್ಲಿಗೆ ರವಾನಿಸುತ್ತಿದ್ದೆವು. ಆದರೆ 2 ವರ್ಷಗಳಿಂದ ಮಂಗಳೂರು ವಿಮಾನ ನಿಲ್ದಾಣದಿಂದ ಡೊಮೆಸ್ಟಿಕ್‌ ಕಾರ್ಗೊ ಇಲ್ಲದ ಕಾರಣ ವ್ಯವಹಾರ ಅಸಾಧ್ಯವಾಗಿದೆ. ಸ್ಥಳೀಯ ಮಾರುಕಟ್ಟೆಯಲ್ಲಿ ಮಲ್ಲಿಗೆಗೆ ಉತ್ತಮ ಬೆಲೆ ಬರುವುದಕ್ಕೂ ಅಡ್ಡಿಯಾಗಿದೆ.
– ಯಶವಂತ್‌, ಶಂಕರಪುರ ಮಲ್ಲಿಗೆ
ಪೂರೈಕೆದಾರರು, ಉಡುಪಿ

– ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next