ಕೊಪ್ಪಳ: ಸುಮಾರು 40 ವರ್ಷಗಳಿಂದ ಬಯಲಾಟ ಕಲೆಗಾಗಿ ತಮ್ಮ ಜೀವನ ಮುಡಿಪಾಗಿಟ್ಟು ಕಲೆ ಪ್ರೋತ್ಸಾಹಿಸಿ 2022ನೇ ಸಾಲಿನ ಕರ್ನಾಟಕ ಪ್ರಶಸ್ತಿಗೆ ಭಾಜನರಾಗಿದ್ದ ತಾಲೂಕಿನ ಮೋರನಾಳ ಗ್ರಾಮದ ಬಯಲಾಟ ಕಲಾವಿದ ಶಂಕರಪ್ಪ ಹೊರಪೇಟೆ (63) ಅವರು ಶನಿವಾರ ಹೃದಯಾಘಾತದಿಂದ ಹುಬ್ಬಳ್ಳಿಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮೃತರ ಅಗಲಿಕೆಗೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.
ಮೃತ ಶಂಕರಪ್ಪ ಹೊರಪೇಟೆ ಅವರು ಪತ್ನಿ, ಪುತ್ರ ಹಾಗೂ ಪುತ್ರಿ ಅಗಲಿದ್ದಾರೆ. ಇವರು ಅನಾರೋಗ್ಯದ ಕಾರಣದಿಂದ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ದಾಖಲಾಗಿದ್ದರು. ಆದರೆ ಕೊನೆ ಉಸಿರು ಚಲ್ಲಿದ್ದಾರೆ. ಫೆ.12 ರಂದು ಮಧ್ಯಾಹ್ನ ಸ್ವಗ್ರಾಮ ಮೋರನಾಳದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.
ಶಂಕರಪ್ಪ ಹಾರ್ಮೋನಿಯಂ ಕಲಾವಿದರೂ ಆಗಿದ್ದರು. ಬಯಲಾಟದಲ್ಲಿ ವಿವಿಧ ಪಾತ್ರಗಳನ್ನು ಅಭಿನಯಿಸಿ ಎಲ್ಲರ ಗಮನ ಸೆಳೆದಿದ್ದರು.
ಕಲಾವಿದ ಶಂಕ್ರಪ್ಪ ಅವರು ಓದಿದ್ದು ನಾಲ್ಕನೇ ತರಗತಿಯಾದರೂ ಕೊಪ್ಪಳ ತಾಲೂಕಿನ ವಿವಿಧ ಹಳ್ಳಿಯಲ್ಲಿ ಸೈಕಲ್ ನಲ್ಲಿ ಸುತ್ತಾಟ ನಡೆಸಿ ಬಯಲಾಟ ಕಲಿಸಿ ಮಾಸ್ತಾರ ಎಂದೆನಿಸಿ ನೂರಾರು ಬಯಲಾಟ ಪ್ರದರ್ಶನ ಮಾಡಿಸಿದ್ದರು. ಯುವ ಕಲಾವಿದರಿಗೆ ಪ್ರೋತ್ಸಾಹ ನೀಡಿದ್ದರು. 69ರ ಇಳಿ ವಯಸ್ಸಿನಲ್ಲೂ ಅವರ ಅವಿರತ ಕಲಾ ಸೇವೆ ಗುರುತಿಸಿ ಬಯಲಾಟ ಅಕಾಡೆಮಿ ಸೇರಿದಂತೆ ನಾನಾ ಸಂಘ-ಸಂಸ್ಥೆಗಳು ಇವರನ್ನು ಗುರುತಿಸಿ ಸನ್ಮಾನಿಸಿ ಗೌರವಿಸಿದ್ದವು. 2022ರಲ್ಲಿ ಕೊಪ್ಪಳ ಜಿಲ್ಲೆಯಡಿ ಬಯಲಾಟ ಕ್ಷೇತ್ರದಡಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿತ್ತು. ಖುಷಿಯಿಂದಲೇ ಪ್ರಶಸ್ತಿಯನ್ನು ಸ್ವೀಕರಿಸಿ ಕಲೆ ಉಳಿಸಿ ಬೆಳೆಸಬೇಕು.
ಯುವ ಸಮೂಹ ಕಲೆಗೆ ಒತ್ತು ಕೊಡಬೇಕೆನ್ನುವ ಸಂದೇಶವನ್ನು ಇವರು ನೀಡಿದ್ದರು. ಆದರೆ ಇಹಲೋಕ ತ್ಯಜಿಸಿದ್ದಾರೆ. ಶಂಕ್ರಪ್ಪ ಹೊರಪೇಟೆ ಅವರ ನಿಧನಕ್ಕೆ ಗಣ್ಯರು ಕಂಬನಿ ಮಿಡಿದಿದ್ದಾರೆ.
ಇದನ್ನೂ ಓದಿ: ಚಿಕ್ಕಮಗಳೂರು : ಟ್ರ್ಯಾಕ್ಟರ್ ಪಲ್ಟಿಯಾಗಿ ರಾಡ್ ಗಳ ಅಡಿ ಸಿಲುಕಿ ವ್ಯಕ್ತಿ ಮೃತ್ಯು