Advertisement

ಶಂಕರಾಚಾರ್ಯರು ಪರಶಿವನ ಅವತಾರಿ

12:43 PM May 19, 2019 | Team Udayavani |

ರಾಣಿಬೆನ್ನೂರ: ಲೋಕ ಕಲ್ಯಾಣಾರ್ಥ ಪರಶಿವನು ಭೂ ಲೋಕಕ್ಕೆ ಆದಿಗುರು ಶಂಕರಾಚಾರ್ಯರ ಅವತಾರ ತಾಳಿ ಬಂದವರು. ಅವರು ಜನರಲ್ಲಿ ಅಡಗಿರುವ ಅಜ್ಞಾನ ತೊಳೆದು ಸುಜ್ಞಾನದೆಡೆ ಕರೆ ತಂದವರು ಎಂದು ಕಾರವಾರದ ಶಿವಮೂರ್ತಿ ಜೊಯ್ಸ ಹೇಳಿದರು.

Advertisement

ಶನಿವಾರ ನಗರದ ಬನಶಂಕರಿ ಸಭಾಭವನದಲ್ಲಿ ಏರ್ಪಡಿಸಿದ್ದ ಶತಮಾತೋತ್ಸವದ ಸಮಿತಿ ವತಿಯಿಂದ ಆದಿಗುರು ಶಂಕರಾಚಾರ್ಯರ ಜಯಂತ್ಯುತ್ಸವದ ಅಂಗವಾಗಿ ಐದು ದಿನ ನಡೆದ ಗಣಪತಿ ಪೂಜೆ, ಪುಣ್ಯಹ, ಕೃಚ್ಛಾಚರಣೆ, ಪ್ರಾಯಶ್ಚಿತ್‌, ಯಂತ್ರ, ಕಳಶ ಸ್ಥಾಪನೆ, ಅಂಕುರಾರ್ಪ ಮಹಾರುದ್ರಯಾಗ, ಶತಚಂಡಿ ಪಾರಾಯಣ, ವೇದ ಪಾರಾಯಣ, ಶಂಕರ ಭಾಷ್ಯ ಪಾರಾಯಣ, ಗಣಪತಿ ಹೋಮ, ನವಗ್ರಹ ಹೋಮ, ಮಹಾಮೃತ್ಯುಂಜಯ ಹೋಮ ಹಾಗೂ ಪೂರ್ಣಾಹುತಿ ಧಾರ್ಮಿಕ ವಿಧಿ ವಿಧಾನಗಳು ನಡೆದ ನಂತರ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಪ್ರಪಂಚದ ಇತಿಹಾಸದಲ್ಲಿ ಶಾಶ್ವತವಾಗಿ ಉಳಿಯಲು ಅದ್ವೈತ ತತ್ವವನ್ನು ಪ್ರತಿಪಾದಿಸಿದ ಕೀರ್ತಿ ಆದಿಗುರು ಶಂಕರಾಚಾರ್ಯರಿಗೆ ಸಲ್ಲುತ್ತದೆ. ಅಹಂ ಬ್ರಹ್ಮಾಸಿಂ ಎಂಬುದು ನನ್ನಲ್ಲಿಯೇ ಪರಶಿವನಿದ್ದಾನೆ ಎಂದು ತೋರಿಸಿ ಕೊಟ್ಟವರು. ಭಾರತೀಯ ಸಂಸ್ಕೃತಿಯನ್ನು ಹಾಗೂ ಸನಾತನ ಧರ್ಮವನ್ನು ಪ್ರಚಾರ ಹಾಗೂ ಸಂರಕ್ಷಣೆ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.

ಶಾಸಕ ಆರ್‌.ಶಂಕರ ಮಾತನಾಡಿ, ಭಾರತೀಯ ಸಂಸ್ಕೃತಿ ಸನಾತವಾದುದು, ಪ್ರಪಂಚವೇ ಇಷ್ಟ ಪಡುವ ದೇಶ ಭಾರತ, ದ್ವೇಶವನ್ನು ಕಾಣದಂತೆ ಜನರಲ್ಲಿ ಸತ್ಯ ಮಾರ್ಗವನ್ನು ಋಷಿ ಮುನಿಗಳು ತೋರಿಸಿ ಕೊಟ್ಟಿದ್ದಾರೆ. ಅಂತವರಲ್ಲಿ ಶಂಕರಾಚಾರ್ಯರೂ ಒಬ್ಬರು. ಹೀಗಾಗಿ ಭಾರತ ವಿಶ್ವಕ್ಕೆ ಗುರುವಾಗಿ ಕಾಣುತ್ತದೆ. ಇದನ್ನರಿತ ಭಾರತೀಯರು ಅದರ ಉಳಿವಿಗಾಗಿ ಶ್ರಮಿಸುವ ಅಗತ್ಯ ಇದೆ ಎಂದರು.

ಡಾ| ಬಸವರಾಜ ಕೇಲಗಾರ ಮಾತನಾಡಿ, ಕೇರಳದ ಕಾಲಡಿಯಲ್ಲಿ ಈಶ್ವರನ ಕೃಪಾ ಕಟಾಕ್ಷದಿಂದ ಶಿವಗುರು ಆರ್ಯಾಂಬೆಯ ಪುತ್ರನಾಗಿ ವಿಭವನಾಮ ಸಂವತ್ಸರದ ವೈಶಾಖ ಶುದ್ಧ ಪಂಚಮಿ ಪುನರ್ವಸು ನಕ್ಷತ್ರದಲ್ಲಿ ಜನಿಸಿದ ಶಂಕರ ಆಡುವ ವಯಸ್ಸಿನಲ್ಲಿಯೇ ಕಾವ್ಯ, ಛಂದಸ್ಸು, ಅಲಂಕಾರ, ಕೋಷ್ಠ ಸ್ತೋತ್ರವನ್ನು ಕಲಿತವರು. ತಾವು ಸನ್ಯಾಸಿಯಾಗಬೇಕೆಂಬ ಉದ್ದೇಶದಿಂದ ಮೊಸಳೆ ಬಾಯಿಯಿಂದ ತಪ್ಪಿಸಲು ನೀನು ನನಗೆ ಸನ್ಯಾಸಿಯಾಗಲು ಅನುಮತಿ ನೀಡಿದರೆ ಮಾತ್ರ ನಾನು ಬದುಕಲು ಸಾಧ್ಯ ಎಂದಾಗ ತಾಯಿಯು ವಿಧಿಯಿಲ್ಲದೇ ಸನ್ಯಾಸಕ್ಕೆ ಅನುಮತಿ ನೀಡಬೇಕಾಯಿತು ಎಂದರು.

Advertisement

ನರ್ಮದಾ ನದಿಯ ಗುಹೆಯಲ್ಲಿದ್ದ ಶ್ರೀ ಗೋವಿಂದಾ ಭಗವತ್ಪಾದರು ಶಂಕರಾಚಾರ್ಯರನ್ನು ಶಿಷ್ಯನನ್ನಾಗಿ ಸ್ವೀಕರಿಸಿ ಬ್ರಹ್ಮೋಪದೇಶ ನೀಡಿದರು, ಅವರಿಂದ ಎಲ್ಲಾ ಜೀವರಾಶಿಗಳಿಗೂ ಒಂದೇ, ಅವುಗಳಲ್ಲಿ ಯಾವ ಭೇದವೂ ಇಲ್ಲ. ಅವೆಲ್ಲವೂ ಪರಮಾತ್ಮನ ಸ್ವರೂಪ ಎಂಬ ಉನ್ನತ ತಾತ್ವಿಕ ತತ್ವದ ಸತ್ಯವನ್ನು ತಿಳಿದುಕೊಂಡರು, ನಶ್ವರವಾದ ಈ ಸಂಸಾರದ ಬಗ್ಗೆ ವ್ಯಾಮೋಹ ಬಿಟ್ಟು ಸದ್ಗತಿಯ ಕಡೆಗೆ ಮನಸ್ಸನ್ನು ಹರಿದಾಡುವಂತೆ ಮಾಡಬೇಕೆಂದು ಜಗತøಸಿದ್ದ ಭಜಗೋವಿಂದಂ ಸ್ತೋತ್ರವನ್ನು ಬರೆದರು. ಬ್ರಹ್ಮಸೂತ್ರ ಭಗವದ್ಗೀತೆ ಹಾಗೂ ಉಪನಿಷತ್ತುಗಳ ಮೇಲೆ ಭಾಷ್ಯಗಳನ್ನು ಬರೆದರು ಎಂದರು.

ಶತಮಾತೋತ್ಸವ ಸಮಿತಿ ಅಧ್ಯಕ್ಷ ಡಾ| ಸಂಜಯ ನಾಯಕ, ಎ.ಎಂ.ನಾಯಕ, ಡಿ.ಸಿ.ಕುಲಕರ್ಣಿ, ಬ್ಯಾಡಗಿಯ ಡಾ| ಶಶಿಧರ ವೈದ್ಯ ಮಾತನಾಡಿದರು. ಭೀಮರಾವ ಕುಲಕರ್ಣಿ, ಗುರುರಾಜ ನಾಡಿಗೇರ, ಅರುಣ ಮುದ್ರಿ, ಶ್ರೀಪಾದ ಕುಲಕರ್ಣಿ, ಚಿದಂಬರ ಜೋಷಿ, ನಾಗರಾಜ ಕುಲಕರ್ಣಿ, ವಿನಾಯಕ ಜೋಷಿ, ರವಿಂದ್ರ ವರಗಿರಿ ಹಾಗೂ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next