Advertisement

ಹಕ್ಕು ಪತ್ರ ಕೊಡಲಾಗದವರಿಗೆ ನಾಚಿಕೆಯಾಗಬೇಕು: ಸಿಎಂ ಬೊಮ್ಮಾಯಿ

08:54 PM Mar 27, 2023 | Team Udayavani |

ಬೆಂಗಳೂರು: ಬಡವರ ಬಗ್ಗೆ ದೊಡ್ಡ ಭಾಷಣ ಮಾಡುವವರು, ಸಣ್ಣ ಹಕ್ಕುಪತ್ರ ಕೊಡಲು ಸಾಧ್ಯವಾಗದವರಿಗೆ ನಾಚಿಕೆ ಆಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

Advertisement

ಚಿಕ್ಕಬಳ್ಳಾಪುರದ ಅರೂರು ಗ್ರಾಮದಲ್ಲಿ ನಂದಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಲಂಬಾಣಿ ತಾಂಡಾಗಳಿಗೆ ಆಸ್ತಿ ನೋಂದಣಿ ಮಾಡಿಕೊಡಲಾಗಿದೆ. ಆದರೆ ಹಿಂದೆ ಆಡಳಿತದಲ್ಲಿದ್ದವರು ಕಡುಬು ತಿನ್ನುತ್ತಿದ್ದರಾ. ಇವರಿಗೆ ಬಡವರ ಬಗ್ಗೆ ಕಾಳಜಿ ಇತ್ತಾ ಎಂದು ಪ್ರಶ್ನಿಸಿದರು.

ಹಾವೇರಿ, ಚಿಕ್ಕಮಗಳೂರು, ಯಾದಗಿರಿ ಜಿಲ್ಲೆಗಳಲ್ಲೂ ಮೆಡಿಕಲ್‌ ಕಾಲೇಜು ನಿರ್ಮಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ನಿಯಮಗಳಲ್ಲಿ ಬದಲಾವಣೆ ತಂದು, ಸುಲಭವಾಗಿ ಹೊಸ ಮೆಡಿಕಲ್‌ ಕಾಲೇಜು ನಿರ್ಮಿಸಲು ಕಾರಣರಾಗಿದ್ದಾರೆ ಎಂದು ಹೇಳಿದರು.

ಸಮಾಜದಲ್ಲಿರುವ ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಕಲ್ಪಿಸಿ ಅವರ ಬದುಕು ಹಸನುಗೊಳಿಸಬೇಕೆಂಬುದೇ ಬಿಜೆಪಿಯ ಆಶಯವಾಗಿದ್ದು ಈ ನಿಟ್ಟಿನಲ್ಲಿ ದೃಢಸಂಕಲ್ಪದೊಂದಿಗೆ ಯಾವುದೇ ಹಿಂದಿನ ಸರ್ಕಾರಗಳು ಮಾಡದಂತಹ ಐತಿಹಾಸಿಕ ನಿರ್ಧಾರಗಳನ್ನು ತೆಗೆದುಕೊಂಡು ಪರಿಶಿಷ್ಟ ಜಾತಿ/ಪಂಗಡ, ಹಿಂದುಳಿದ ವರ್ಗಗಳಲ್ಲಿ ಮೀಸಲಾತಿ ಸೌಲಭ್ಯವನ್ನು ಒದಗಿಸಿ ಆತ್ಮವಿಶ್ವಾಸದಿಂದ ಬದುಕಲು ಅಸ್ತ್ರವನ್ನು ನೀಡಿದ್ದೇವೆ ಎಂದು ಮುಖ್ಯಮಂತ್ರಿ ಹೇಳಿದರು.

ರಾಜ್ಯದ ಜನರಿಗೆ ನೆರವಾಗಲು ಯಶಸ್ವಿನಿ ಯೋಜನೆ ತರಲಾಗಿದೆ. ವಿದ್ಯಾನಿಧಿಯನ್ನು ರೈತ ಕಾರ್ಮಿಕರು, ಮೀನುಗಾರರು, ಚಾಲಕರ ಮಕ್ಕಳಿಗೂ ವಿಸ್ತರಿಸಿ, ದುಡಿಯುವ ವರ್ಗಕ್ಕೆ ನೆರವು ನೀಡಲಾಗಿದೆ ಎಂದು ತಿಳಿಸಿದರು.

Advertisement

ಆಯುಷ್ಮತಿ ಕ್ಲಿನಿಕ್‌: ರಾಯಚೂರಿನ ಆಯುಷ್ಮತಿ ಕ್ಲಿನಿಕ್‌ನ ಸೇವೆ ಪಡೆದ ಶೋಭಾ ಅವರೊಂದಿಗೆ ಸಚಿವ ಡಾ.ಕೆ.ಸುಧಾಕರ್‌ ಆನ್‌ಲೈನ್‌ನಲ್ಲಿ ಮಾತನಾಡಿದರು. ಆಗ, ಈ ಕ್ಲಿನಿಕ್‌ನಿಂದ ಬಡವರಿಗೆ ಬಹಳ ನೆರವಾಗಿದೆ ಎಂದು ಶೋಭಾ ಹೇಳಿದರು. ಹಾವೇರಿಯ ಆಯುಷ್ಮತಿ ಕ್ಲಿನಿಕ್‌ನಿಂದ ರತ್ನ ಮಾತನಾಡಿ. ಉತ್ತಮ ಯೋಜನೆ ಎಂದು ಶ್ಲಾಘಿಸಿದರು.

ಮಹಿಳೆಯರಿಗಾಗಿ ಮೀಸಲಾದ ಮಹಿಳಾ ಸ್ವಾಸ್ಥ್ಯ ಕ್ಲಿನಿಕ್‌-ಆಯುಷ್ಮತಿ ಕ್ಲಿನಿಕ್‌ಗಳಿಗೆ ಚಾಲನೆ ದೊರೆತಿದ್ದು, ಎನ್‌ಎಚ್‌ಎಂ ಹಾಗೂ 15 ನೇ ಹಣಕಾಸು ಆಯೋಗದ ಕಾರ್ಯಕ್ರಮದಡಿ ಈ ಯೋಜನೆ ಜಾರಿಯಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 57 ಹಾಗೂ ಇತರೆ ಜಿಲ್ಲೆಗಳಲ್ಲಿ 71 ಸೇರಿದ ಒಟ್ಟು 128 ಕ್ಲಿನಿಕ್‌ಗಳು ಆರಂಭವಾಗಿವೆ. ತಜ್ಞ ವೈದ್ಯರ ಸೇವೆ, 30 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಕ್ಯಾನ್ಸರ್‌ ಮೊದಲಾದ ಅಸಾಂಕ್ರಾಮಿಕ ರೋಗಗಳ ತಪಾಸಣೆ, ಆಪ್ತ ಸಮಾಲೋಚನೆ, ಲ್ಯಾಬ್‌ ಪರೀಕ್ಷೆ, ಉಚಿತ ಔಷಧಿ, ಯೋಗ ಮತ್ತು ಧ್ಯಾನ, ರೆಫರಲ್‌ ಸೇವೆಗಳು ಉಚಿತವಾಗಿ ಲಭ್ಯವಿದೆ ಎಂದು ಸಚಿವ ಸುಧಾಕರ್‌ ಹೇಳಿದರು.

ನಂದಿ ಬೆಟ್ಟ ರೋಪ್‌ ವೇ ನಿರ್ಮಾಣಕ್ಕೆ ಭೂಮಿ ಪೂಜೆ
ಚಿಕ್ಕಬಳ್ಳಾಪುರ: ವಿಶ್ವ ವಿಖ್ಯಾತ ನಂದಿ ಬೆಟ್ಟಕ್ಕೆ ಪ್ಯಾಸೆಂಜರ್‌ ರೋಪ್‌ವೇ ನಿರ್ಮಾಣ ಮಾಡುವ ಕಾಮಗಾರಿಗೆ ಸೋಮವಾರ ಸಿಎಂ ಬಸವರಾಜ ಎಸ್‌. ಬೊಮ್ಮಾಯಿ ಅವರು ಭೂಮಿಪೂಜೆ ನೆರವೇರಿಸಿದರು.

ಈ ವೇಳೆ ಮಾತನಾಡಿದ ಅವರು, ಅಸಂಖ್ಯಾತ ಪ್ರವಾಸಿಗರ ಬಹು ದಶಕಗಳ ಕನಸನ್ನು ನನಸಾಗಿಸುವ ಕಾರ್ಯಕ್ಕೆ ಇಂದು ಚಾಲನೆ ದೊರೆತಿದ್ದು, ಖ್ಯಾತ ಕನ್ನಡ ಚಲನಚಿತ್ರ ನಟ ಶಂಕರ್‌ ನಾಗ್‌ ಅವರ ಕನಸನ್ನು ಈಡೇರಿಸಲಾಗುವುದು ಎಂದರು.

ರೋಪ್‌ವೇ ಅಭಿವೃದ್ಧಿಪಡಿಸುವ ಈ ಯೋಜನೆಗೆ 93.40 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ. ಸುಮಾರು 2.93 ಕಿ.ಮೀ. ದೂರದ ರೋಪ್‌ವೇ ಅಭಿವೃದ್ಧಿಪಡಿಸಲಾಗುತ್ತದೆ. ಡೆ„ನಾಮಿಕ್‌ ರೋಪ್‌ವೇ ಪ್ರŒ„ವೇಟ್‌ ಲಿಮಿಟೆಡ್‌ 30 ವರ್ಷಗಳ ರಿಯಾಯಿತಿ ಅವಧಿಯೊಂದಿಗೆ ನಿರ್ಮಾಣ, ವಿನ್ಯಾಸ, ಹಣಕಾಸು, ಕಾರ್ಯಾಚರಣೆ ಮತ್ತು ವರ್ಗಾವಣೆ (ಡಿಬಿಎಫ್‌ಒಟಿ) ಚೌಕಟ್ಟಿನ ಮೇಲೆ ಯೋಜನೆ ಕಾರ್ಯರೂಪಕ್ಕೆ ಬರಲಿದೆ ಎಂದು ತಿಳಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next