ಬಂಟ್ವಾಳ: ಪುತ್ರಿಯ ಚಿಕಿತ್ಸೆಗೆ ಹಣ ಹೊಂದಿಸಲು ಸಾಧ್ಯವಾಗುತ್ತಿಲ್ಲ ಎಂದು ನೊಂದುಕೊಳ್ಳುತ್ತಿದ್ದ ಶಂಭೂರು ಗ್ರಾಮದ ಮಜಿಬೈಲು ನಿವಾಸಿ ಕೂಲಿ ಕಾರ್ಮಿಕನೋರ್ವ ಮನೆಯ ಪಕ್ಕದ ಗುಡ್ಡದಲ್ಲಿ ನೇಣು ಬಿಗಿದುಕೊಂಡು ಆತ್ಯಹತ್ಯೆ ಮಾಡಿಕೊಂಡ ಘಟನೆ ಮೇ 18ರಂದು ಬೆಳಕಿಗೆ ಬಂದಿದೆ.
ಮಜಿಬೈಲು ನಿವಾಸಿ ಕೃಷ್ಣಪ್ಪ ಮೂಲ್ಯ (52) ಆತ್ಮಹತ್ಯೆ ಮಾಡಿಕೊಂಡವರು. ಅವರ ಪತ್ನಿ ಯೋಗಿನಿ ಅವರು ತನ್ನ ತಾಯಿ ಮನೆ ಬೇಂಕ್ಯದಲ್ಲಿ ವಾಸವಾಗಿದ್ದು, ಅವರ 2ನೇ ಪುತ್ರಿಗೆ ಅನಾರೋಗ್ಯವಿದ್ದು, ಚಿಕಿತ್ಸೆಗೆ ಹಣವಿಲ್ಲ ಎಂದು ಬೇಸರಿಸಿಕೊಳ್ಳುತ್ತಿದ್ದರು. ಸುರತ್ಕಲ್‌ನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಕೃಷ್ಣಪ್ಪ ಅವರು ಮೇ 16ರಂದು ಪತ್ನಿಯ ತಾಯಿ ಮನೆಗೆ ತೆರಳಿ ಮರುದಿನ ಸುರತ್ಕಲ್‌ಗೆ ಹೋಗುವುದಾಗಿ ತೆರಳಿದ್ದರು.
ಆದರೆ ಅವರು ನೇರವಾಗಿ ಶಂಭೂರಿಗೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತ್ನಿ ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.