ಬೆಂಗಳೂರು: ರಾಮಚಂದ್ರಾಪುರ ಮಠದ ಗಿರಿನಗರ ಶಾಖೆಯಲ್ಲಿ ನಿರ್ಮಾಣ ಮಾಡುತ್ತಿದ್ದ ಕಟ್ಟಡದ ನಕ್ಷೆ ಮಂಜೂರಾತಿ ರದ್ದುಪಡಿಸಲು ಬಿಬಿಎಂಪಿಗೆ ಪತ್ರ ಬರೆಯಲು ಬಿಡಿಎ ಹಿಂದಿನ ಆಯುಕ್ತ ಶ್ಯಾಂಭಟ್ ಅವರ ಮೌಖೀಕ ಸೂಚನೆಯಿತ್ತು ಎಂದು ಬಿಡಿಎ ನಿವೃತ್ತ ಕಾರ್ಯಕಾರಿ ಎಂಜಿನಿಯರ್ ರಾಜಗೋಪಾಲ್ ಹೈಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದ್ದಾರೆ.
ನಕ್ಷೆ ರದ್ದುಪಡಿಸಿದ ಬಿಬಿಎಂಪಿ ಕ್ರಮ ಪ್ರಶ್ನಿಸಿ ರಾಮಚಂದ್ರಾಪುರ ಮಠ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಶುಕ್ರವಾರ ನ್ಯಾಯಮೂರ್ತಿ ವಿನೀತ್ ಕೊಠಾರಿ ಅವರಿದ್ದ ಏಕಸದಸ್ಯ ಪೀಠದ ಮುಂದೆ ರಾಜಗೋಪಾಲ್ ಅವರು ತಮಗೆ ಶ್ಯಾಂಭಟ್ ಮೌಖೀಕ ಸೂಚನೆ ನೀಡಿದ ಬಗ್ಗೆ ಪ್ರಮಾಣಪತ್ರ ಸಲ್ಲಿಸಿದರು.
ವಿಚಾರಣೆ ವೇಳೆ ಬಿಬಿಎಂಪಿ ಪರ ವಕೀಲರು ವಾದ ಮಂಡಿಸಿ, ಈಗಾಗಲೇ ಮಠದ ಕಟ್ಟಡದ ನಕ್ಷೆ ಮಂಜೂರಾತಿ ರದ್ದುಪಡಿಸಿದ್ದ ಆದೇಶವನ್ನು ಬಿಬಿಎಂಪಿ ಹಿಂಪಡೆದಿದೆ. ಅಲ್ಲದೆ ಮಠಕ್ಕೆ ನೀಡಿರುವ ಸಿ.ಎ ನಿವೇಶನ ಸಂಬಂಧ ಹೊಸದಾಗಿ ತನಿಖೆ ನಡೆಸುವುದಾಗಿ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ವಿವಾದಿತ ನಿವೇಶನ ಹಂಚಿಕೆ ಸಂಬಂಧ ಮರು ಪರಿಶೀಲನೆ ತನಿಖೆ ನಡೆಸುವುದಾದರೆ ಅರ್ಜಿದಾರರಿಗೆ ಮೊದಲು ನೋಟಿಸ್ ನೀಡಬೇಕು. ಈ ವಿಚಾರದಲ್ಲಿ ಯಾವುದೇ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳಬಾರದು ಎಂದು ನಿರ್ದೇಶಿಸಿತು. ಜತೆಗೆ ಈಗಾಗಲೇ ಕಟ್ಟಡ ಮಂಜೂರಾತಿ ರದ್ದು ಆದೇಶ ಹಿಂಪಡೆದಿರುವುದರಿಂದ ಈ ಅರ್ಜಿ ವಿಚಾರಣೆ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ ಅರ್ಜಿ ಇತ್ಯರ್ಥಗೊಳಿಸಿತು.
ದಂಡ ವಾಪಾಸ್: ಈ ಮಧ್ಯೆ ಪ್ರಕರಣದಲ್ಲಿ ಕರ್ತವ್ಯಲೋಪ ಎಸಗಿದ ಸಂಬಂಧ ತಲಾ 50 ಸಾವಿರ ರೂ. ದಂಡ ಪಾವತಿಯಿಂದ ವಿನಾಯಿತಿ ನೀಡುವಂತೆ ರಾಜಗೋಪಾಲ್, ಬಿಬಿಎಂಪಿ ದಕ್ಷಿಣ ವಲಯದ ನಗರ ಯೋಜನಾ ಸಹಾಯಕ ನಿರ್ದೇಶಕ ಸಯ್ಯದ್ ಮುಬಾಸಿರ್ ಅಹ್ಮದ್, ಮುಖ್ಯ ಎಂಜಿನಿಯರ್ ಎಚ್.ಟಿ.ಬೆಟ್ಟೇಗೌಡ, ಜಂಟಿ ನಿರ್ದೇಶಕ ಎ.ಜೆ.ಹೇಮಚಂದ್ರ ಅವರು ನ್ಯಾಯಪೀಠಕ್ಕೆ ಮನವಿ ಸಲ್ಲಿಸಿದರು. ಮನವಿ ಪುರಸ್ಕರಿಸಿದ ನ್ಯಾಯಪೀಠ, ಹೈಕೋರ್ಟ್ ರಿಜಿಸ್ಟ್ರಾರ್ ಬಳಿ ಠೇವಣಿಯಿಟ್ಟ 50 ಸಾವಿರ ಹಣವನ್ನು ಹಿಂಪಡೆಯಲು ಅವಕಾಶ ಕಲ್ಪಿಸಿತು.