ಧಾರವಾಡ: ಶಂಭಾ ಜೋಶಿ ಅವರು ಕನ್ನಡದ ನೆಲ, ಜಲ, ಸಂಸ್ಕೃತಿ ಬಗ್ಗೆ ಆಳವಾಗಿ ಅಧ್ಯಯನ ಮಾಡಿದ ಶ್ರೇಷ್ಠ ಕನ್ನಡ ಸಂಶೋಧಕರಾಗಿದ್ದರು ಎಂದು ಡಾ|ಹ. ವೆಂ.ಕಾಖಂಡಕಿ ಹೇಳಿದರು.
ಕನ್ನಡ ಭಾಷಾ ಸಂಶೋಧನಾ ದಿನ ಆಚರಣೆ ಪ್ರಯುಕ್ತ ದಿ.ಡಾ|ಶಂಭಾ ಜೋಶಿ ದತ್ತಿ ಅಂಗವಾಗಿ ನಗರದ ಕವಿಸಂನಲ್ಲಿ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಶಂಭಾ ಅವರ ಜೀವನ ಮತ್ತು ಸಾಧನೆ ವಿಷಯ ಕುರಿತು ಅವರು ಮಾತನಾಡಿದರು. ಶಂಭಾ ಕನ್ನಡ-ಇಂಗ್ಲಿಷ್-ಸಂಸ್ಕೃತ-ಮರಾಠಿ ಭಾಷೆಗಳ ಮೇಲೆ ಪ್ರಭುತ್ವ ಹೊಂದಿದವರಾಗಿದ್ದರು. ಅವುಗಳ ಮೇಲೆ ಅರಿವು ಮತ್ತು ಹರವು ಹೊಂದಿದ ಅವರು ನೂತನ ಆಯಾಮಗಳೊಂದಿಗೆ ಕನ್ನಡದ ಸಂಶೋಧನೆ ಕಾರ್ಯ ಮಾಡಿದ ಶ್ರೇಷ್ಠ ಸಾಹಿತಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರೊ|ಹರ್ಷ ಡಂಬಳ ಮಾತನಾಡಿ, ಶಂಭಾ ಅವರೊಬ್ಬ ಮೇರು ವ್ಯಕ್ತಿತ್ವದ ಸಂಶೋಧಕರಾಗಿ ಕಾರ್ಯ ಮಾಡಿದವರು. ಸಂಶೋಧನೆ ಅವರ ಉಸಿರಾಗಿತ್ತು. ಕನ್ನಡದ ನೆಲೆ ಕಾವೇರಿಯಿಂದ- ಗೋದಾವರಿವರೆಗೆ ಇರುವುದನ್ನು ತಮ್ಮ ಸಂಶೋಧನೆಯ ಮೂಲಕ ಅಂತಿಮ ಘಟ್ಟ ತಲುಪುವವರೆಗೂ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಅವರ “ದಾರಿಗೆ ಬುತ್ತಿ’ ಕೃತಿ ಜೀವನ ಮಾರ್ಗವನ್ನೇ ಕಟ್ಟಿಕೊಟ್ಟಿದೆ. ತಮ್ಮ ಬದುಕಿನ ಬಹುಭಾಗವನ್ನು ಬರವಣಿಗೆಗೆ ಮೀಸಲಿಟ್ಟಿದ್ದರು. ಇವರೊಬ್ಬ ಕನ್ನಡದ ಸತ್ಯ ಸಂಶೋಧಕರಾಗಿದ್ದವರು ಎಂದರು.
ಮಾನವ ಪ್ರತಿಷ್ಠಾನದ ಕಾರ್ಯದರ್ಶಿ ವಿ.ಜಿ.ಭಟ್ ಮಾತನಾಡಿದರು. ಶಂಕರ ಹಲಗತ್ತಿ, ಬಸವಪ್ರಭು ಹೊಸಕೇರಿ, ಶಿವಾನಂದ ಭಾವಿಕಟ್ಟಿ, ವೀರಣ್ಣ ಒಡ್ಡೀನ, ರಾಜೇಂದ್ರ ಸಾವಳಗಿ, ಪ್ರೊ|ರಮಾಕಾಂತ ಜೋಶಿ, ಮನೋಜ ಪಾಟೀಲ, ಎಂ.ಎಂ.ಚಿಕ್ಕಮಠ, ಲಕ್ಷ್ಮೀಕಾಂತ ಬೀಳಗಿ, ರುದ್ರಣ್ಣ ಚಿಲುಮಿ, ರಾಮಚಂದ್ರ ಧೋಂಗಡೆ, ನಾಡಿಗೇರ, ಉಲ್ಲಾಸ ರಾಯಭಾಗಕರ, ಚನ್ನಬಸಪ್ಪ ಅವರಾದಿ ಇದ್ದರು. ಶಂಕರ ಕುಂಬಿ ಸ್ವಾಗತಿಸಿದರು. ಗುರು ಹಿರೇಮಠ ನಿರೂಪಿಸಿದರು. ಡಾ|ಧನವಂತ ಹಾಜವಗೋಳ ವಂದಿಸಿದರು.