ವಿಜಯಪುರ: ಧರ್ಮ ಒಡೆಯಲು ಮುಂದಾದ ಮಾಜಿ ಸಚಿವ ವಿನಯ ಕುಲಕರ್ಣಿ ಸೋತು ಸುಣ್ಣವಾಗಿದ್ದಾರೆ ಎಂದು ಶಾಮನೂರು ಶಿವಶಂಕರಪ್ಪ ಟೀಕಿಸಿದ್ದಾರೆ. ಆದರೆ, ಧರ್ಮ ರಕ್ಷಕ ಶಾಮನೂರ ಶಿವಶಂಕರಪ್ಪನವರ ಮಗ ಮಲ್ಲಿಕಾರ್ಜುನ ಕೂಡ ಸೋತಿರುವುದು ಅವರಿಗೆ ಮರೆತಂತಿದೆ. ಹೀಗಾಗಿ, ಅವರಿಗೆ ವಯೋಸಹಜ ಅರಳು-ಮರಳು ಕಾಡುತ್ತಿದೆ ಎಂದು ಶಾಸಕ ಎಂ.ಬಿ. ಪಾಟೀಲ ತಿರುಗೇಟು ನೀಡಿದರು.
ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಶಿವಶಂಕರಪ್ಪನವರ ವಯಸ್ಸಿಗೆ ಮರ್ಯಾದೆ ಕೊಡುತ್ತಿದ್ದೇನೆ. ಆದರೆ, ಇದನ್ನೇ ದುರ್ಬಳಕೆ ಮಾಡಿಕೊಳ್ಳುತ್ತಿರುವ ಅವರು ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆಗೆ ಹೋರಾಡುತ್ತಿರುವ ನನ್ನ ಮೇಲೆ ಕಾಂಗ್ರೆಸ್ ಹೈಕಮಾಂಡ್‌ಗೆ ದೂರು ನೀಡುವುದಾಗಿ ಹೇಳುತ್ತಿದ್ದಾರೆ.
ಅವರ ಗೊಡ್ಡು ಬೆದರಿಕೆಗೆ ನಾನು ಜಗ್ಗುವವನಲ್ಲ. ಕಾಂಗ್ರೆಸ್ ಪಕ್ಷದ ಸೋಲಿಗೆ ಬಹಿರಂಗವಾಗಿ ಶ್ರಮಿಸಿ, ಪಂಚಪೀಠಾಧಿಧೀಶರೊಂದಿಗೆ ಶಿವಶಂಕರಪ್ಪನವರು ಕೈ ಜೋಡಿಸಿದ್ದು ಬಹಿರಂಗ ಸತ್ಯ. ಇದನ್ನು ಮರೆಮಾಚಲು ನನ್ನ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ನನ್ನನ್ನು ದುಡ್ಡಿನ ಮದದಿಂದ ಮೆರೆಯುತ್ತಿರುವ ವ್ಯಕ್ತಿ ಎಂದು ಟೀಕಿಸುತ್ತಾರೆ. ನನ್ನ ಬಳಿ ಒಂದು ರೂ. ಇದ್ದರೆ, ಶಿವಶಂಕರಪ್ಪನವರಲ್ಲಿ ನೂರು ರೂ.ಇದೆ. ಹೀಗಾಗಿ ಅವರಿಗೆ ಹಣದ ಮದ ಏರಿದೆ. ದೇಶದ ಪ್ರಧಾನಿ ನರೇಂದ್ರ ಮೋದಿಯವರೇ ನನ್ನ ಕ್ಷೇತ್ರಕ್ಕೆ ಬಂದು ಭಾಷಣ ಮಾಡಿದರೂ ನಾನು ಭಾರೀ ಅಂತರದ ಮತಗಳಿಂದ ವಿಜಯ ಸಾಧಿ ಸಿದ್ದೇನೆ. ಶರಣಪ್ರಕಾಶ ಪಾಟೀಲ, ವಿನಯ ಕುಲಕರ್ಣಿ ಇವರ ಸೋಲಿಗೆ ಇತರ ಕಾರಣಗಳಿವೆ ಎಂದರು.
ಸಚಿವ ಡಿ.ಕೆ.ಶಿವಕುಮಾರ ಅವರು, ರಂಭಾಪುರಿ ಪೀಠದ ಸ್ವಾಮಿಗಳನ್ನು ಓಲೈಸಲು ಲಿಂಗಾಯತ ಸ್ವತಂತ್ರ ಧರ್ಮದ ವಿಚಾರದಲ್ಲಿ ಸಿದ್ದರಾಮಯ್ಯ ಸರ್ಕಾರ ತಪ್ಪು³ ಮಾಡಿದೆ ಎಂದು ಕ್ಷಮೆಯಾಚಿಸಿದ್ದಾರೆ. ಈ ಕುರಿತು ನಾನು ಈಗಾಗಲೇ ಪ್ರತಿಕ್ರಿಯಿಸಿದ್ದೇನೆ. ಸದ್ಯ ರಾಜ್ಯದಲ್ಲಿ ಉಪ ಚುನಾವಣೆ ನಡೆಯುತ್ತಿರುವ ಕಾರಣ ಪಕ್ಷದ ವರ್ಚಸ್ಸಿಗೆ ಧಕ್ಕೆ ಆಗುವ ರೀತಿ ನಾನು ಪ್ರತಿಕ್ರಿಯಿಸಲಾರೆ. ಈ ಬಗ್ಗೆ ಇನ್ನು ಪಕ್ಷದ ವೇದಿಕೆಯಲ್ಲಿ ಚರ್ಚಿಸುವ ಮೂಲಕ ನಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತೇನೆ ಎಂದರು.