ಬೆಂಗಳೂರು: ರಾಜ್ಯದ ನೂತನ ಮುಖ್ಯ ಕಾರ್ಯದರ್ಶಿಯಾಗಿ ಶಾಲಿನಿ ರಜನೀಶ್ ಅವರನ್ನು ನೇಮಕ ಮಾಡಲು ರಾಜ್ಯ ಸರಕಾರ ನಿರ್ಧಾರ ತೆಗೆದುಕೊಂಡಿದೆ.
ಸಂಪುಟ ಸಭೆಯಲ್ಲಿ ನಿರ್ಣಯ
ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಶುಕ್ರವಾರ ಈ ನಿರ್ಣಯ ತೆಗೆದುಕೊಳ್ಳಲಾಗಿದೆ. ಇದುವರೆಗೆ ರಾಜ್ಯದ ಮುಖ್ಯ ಕಾರ್ಯದರ್ಶಿಯಾಗಿದ್ದ ಶಾಲಿನಿ ರಜನೀಶ್ ಅವರ ಪತಿ ರಜನೀಶ್ ಗೋಯಲ್ ಜುಲೈ 31ರಂದು ಸೇವಾ ನಿವೃತ್ತಿ ಹೊಂದುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ.
ಸಂಪುಟ ಸಭೆಯಲ್ಲಿ ರಜನೀಶ್ ಗೋಯಲ್ ಅವರಿಗೆ ಬೀಳ್ಕೊಡುಗೆಯನ್ನೂ ನೀಡಲಾಗಿದೆ. ಇದುವರೆಗೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತೆಯಾಗಿದ್ದ ಶಾಲಿನಿ ರಜನೀಶ್ ನೇಮಕದ ಬಗ್ಗೆ ಸರಕಾರ ಶುಕ್ರವಾರ ಸಂಜೆ ಅಧಿಕೃತ ಆದೇಶವನ್ನೂ ಹೊರಡಿಸಿದ್ದು, ಅವರು ಸುಮಾರು ಎರಡೂವರೆ ವರ್ಷಗಳ ಕಾಲ ಮುಖ್ಯ ಕಾರ್ಯದರ್ಶಿ ಹುದ್ದೆಯಲ್ಲಿ ಇರಲಿದ್ದಾರೆ.
ಮೂರನೇ ದಂಪತಿ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿದ ಮೂರನೇ ದಂಪತಿ ರಜನೀಶ್ ಗೋಯಲ್ ಹಾಗೂ ಶಾಲಿನಿ ರಜನೀಶ್ ಆಗಲಿದ್ದಾರೆ. ಈ ಹಿಂದೆ 1965ರಲ್ಲಿ ಬಿ.ಕೆ.ಭಟ್ಟಾಚಾರ್ಯ ನಿವೃತ್ತಿಯ ಬಳಿಕ ತೆರೇಸಾ ಭಟ್ಟಾಚಾರ್ಯ ಕರ್ನಾಟಕದ ಮುಖ್ಯ ಕಾರ್ಯದರ್ಶಿಯಾಗಿದ್ದರು. ಅದಾದ ಬಳಿಕ 2006ರಲ್ಲಿ ಬಿ.ಕೆ.ದಾಸ್ ನಿವೃತ್ತಿಯ ಬಳಿಕ ಅವರ ಪತ್ನಿ ಮಾಲತಿ ದಾಸ್ ಕಿರು ಅವಧಿಗೆ ರಾಜ್ಯದ ಮುಖ್ಯ ಕಾರ್ಯದರ್ಶಿಯಾಗಿದ್ದರು.