ಕಡೂರು: ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಶಕುನ ರಂಗನಾಥಸ್ವಾಮಿ ರಥೋತ್ಸವ ಅದ್ದೂರಿಯಾಗಿ ಗುರುವಾರ ರಾತ್ರಿ ನಡೆಯಿತು. ಕಳೆದ ಮೂರು ದಿನಗಳಿಂದ ವಿವಿಧ ಧಾರ್ಮಿಕ ಆಚರಣೆಗಳನ್ನು ನಡೆಸಿಕೊಂಡು ಪ್ರತಿದಿನ ಪಂಚಾಮೃತ ಅಭಿಷೇಕ, ಮೊಲಬಿಡುವ ಸೇವೆ ಮತ್ತು ಉತ್ಸವಾದಿಗಳೊಂದಿಗೆ ಜನಮನ ಸೂರೆಗೊಂಡಿತು. ಗುರುವಾರ ಮಧ್ಯಾಹ್ನ ಶ್ರೀ ರಂಗನಾಥಸ್ವಾಮಿ ಉತ್ಸವವನ್ನು ಮೆರವಣಿಗೆಯಲ್ಲಿ ಗ್ರಾಮದ ಬಿಡದಿ ಮನೆಗೆ ಕರೆತಂದು ಪ್ರತಿಷ್ಠಾಪಿಸಲಾಯಿತು.
ಗುರುವಾರ ರಾತ್ರಿ 9.30 ಕ್ಕೆ ರಂಗನಾಥಸ್ವಾಮಿ ದೇವಾಲಯದಿಂದ ಶ್ರೀದೇವಿ ಮತ್ತು ಭೂದೇವಿ ಉತ್ಸವ ಮೂರ್ತಿಗಳನ್ನು ಬಿಡದಿ ಮನೆ ಸಮೀಪಕ್ಕೆ ಮೆರವಣಿಗೆಯಲ್ಲಿ ಕರೆತರಲಾಯಿತು. ನಂತರ ಶ್ರೀದೇವಿ ಭೂದೇವಿಯವರಗಳನ್ನು ಎದುರುಗೊಂಡ ಅರ್ಚಕರು ಶ್ರೀದೇವಿ ಮತ್ತು ರಂಗನಾಥಸ್ವಾಮಿಗೆ ಭಕ್ತರ ನಡುವೆ ಕಲ್ಯಾಣೋತ್ಸವ ನೆರವೇರಿಸಿದರು.
ಉತ್ಸವದಲ್ಲಿ ಬಿಡದಿ ಮನೆಗೆ ತೆರಳಿದ ನಂತರ ವಿಗ್ರಹಗಳಿಗೆ ಪೂಜೆ ಸಲ್ಲಿಸಲಾಯಿತು. ಅಲಂಕಾರ ಮಾಡಿದ ರಥದಲ್ಲಿ ಶ್ರೀ ರಂಗನಾಥಸ್ವಾಮಿ ಮತ್ತು ಶ್ರೀದೇವಿ ಹಾಗೂ ಭೂದೇವಿಯವರ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಇದೇ ವೇಳೆ ಬಲಿಪೂಜೆ ನೆರವೇರಿತು. ನಾಡಿನ ಮೂಲೆ ಮೂಲೆಗಳಿಂದ ಆಗಮಿಸಿದ ದಾಸಯ್ಯಗಳು ಶಂಕು, ಜಾಗಟೆಗಳ ಸದ್ದು ಎಲ್ಲೆಲ್ಲೂ ಕೇಳಿಸುತ್ತಿತ್ತು. ನಾದಸ್ವರ ಮತ್ತು ಹಳ್ಳಿವಾದ್ಯಗಳ ಅಬ್ಬರ ಮುಗಿಲು ಮುಟ್ಟಿತ್ತು. ವಿವಿಧ ಬಣ್ಣದ ಸಿಡಿ ಮದ್ದುಗಳು ಬೆಳಕಿನ ಹಬ್ಬವನ್ನೇ ಸೃಷ್ಟಿಸಿದ್ದವು. ಭಕ್ತರ ಗೋವಿಂದ ಗೋವಿಂದ ನಡುವೆ ರಾತ್ರಿ 11.30 ಕ್ಕೆ ಮಹಾರಥವನ್ನು ಎಳೆಯಲಾಯಿತು. ಭಕ್ತರು ಬಾಳೆಹಣ್ಣುಗಳನ್ನು ರಥದ ಮೇಲೆ ಎಸೆದು ಸಂಭ್ರಮಿಸಿದರು.
ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ, ಜಿ.ಪಂ. ಸದಸ್ಯೆ ಶಕುಂತಲಾ ಮಲ್ಲಪ್ಪ, ತಾ.ಪಂ. ಸದಸ್ಯ ಆನಂದ ನಾಯ್ಕ, ಗ್ರಾ.ಪಂ. ವತಿಯಿಂದ ಅಧ್ಯಕ್ಷ ಎಸ್.ಆರ್.ಯೋಗೀಂದ್ರ ಮತ್ತಿತರರು ಇದ್ದರು.