Advertisement
ಜಿಲ್ಲೆಯ ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇಗಾಲ, ಹನೂರು, ಯಳಂದೂರು ಪಟ್ಟಣಗಳಿಂದ ಹಾಗೂ ಬೇಗೂರು, ತೆರಕಣಾಂಬಿ, ಸಂತೇಮರಹಳ್ಳಿ ಹಾಗೂ ಇತರೆ ಹೋಬಳಿ ಕೇಂದ್ರಗಳಿಂದ ಹೊರಡುವ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಮಹಿಳೆಯರೇ ಹೆಚ್ಚಿನ ಸಂಖೆಯಲ್ಲಿ ಪ್ರಯಾಣಿಸುತ್ತಿದ್ದಾರೆ. ಬಸ್ ನಿಲ್ದಾಣಗಳಲ್ಲಿಯೇ ಬೆಳಗ್ಗೆ ಹಾಗೂ ಸಂಜೆ ವೇಳೆಯಲ್ಲಿ ಹೆಚ್ಚು ಮಹಿಳೆಯರು ಬಸ್ ಹತ್ತುತ್ತಾರೆ. ನಂತರ ಮಾರ್ಗದ 3-4 ಗ್ರಾಮಗಳ ನಿಲ್ದಾಣಗಳಲ್ಲಿ ಪ್ರಯಾಣಿಕರು ಬಸ್‌ಗಳಿಗೆ ಹತ್ತುತ್ತಾರೆ. ಈ ವೇಳೆಗೆ ಬಸ್ ಕಿಕ್ಕಿರಿದು ತುಂಬಿರುತ್ತದೆ. ಹಾಗಾಗಿ ಬಳಿಕ ಮುಂದಿನ ಗ್ರಾಮಗಳ ನಿಲ್ದಾಣಗಳಲ್ಲಿ ಪ್ರಯಾಣಿಕರು, ವಿದ್ಯಾರ್ಥಿಗಳಿಗೆ ಬಸ್ ನಿಲ್ಲಿಸುವುದೇ ಇಲ್ಲ.
Related Articles
Advertisement
ನಿರ್ವಾಹಕ, ಚಾಲಕರ ಕೊರತೆ: ಈ ಬಗ್ಗೆ ಪ್ರತಿಕ್ರಿಯಿಸಿದ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ್ ಅವರು, ಹೆಚ್ಚುವರಿ ಬಸ್‌ಗಳನ್ನು ಓಡಿಸಲು ನಿರ್ವಾಹಕ, ಚಾಲಕರ ಕೊರತೆಯಿದೆ. ಕೋವಿಡ್-19 ನಂತರ ಹೊಸ ಬಸ್‌ಗಳನ್ನು ನೀಡಲಾಗಿಲ್ಲ. ನಮ್ಮ ವಿಭಾಗಕ್ಕೆ ಇನ್ನೂ 50 ಚಾಲಕರು ಹಾಗೂ ನಿರ್ವಾಹಕರು ಬೇಕಿದೆ. ಈ ಸಮಸ್ಯೆ ಬಗೆಹರಿಸಲು ತಾತ್ಕಾಲಿಕವಾಗಿ ದೂರ ಮಾರ್ಗಕ್ಕೆ ತೆರಳುವ ಬಸ್‌ಗಳನ್ನು ಸಮಸ್ಯೆ ಇರುವ ಮಾರ್ಗಗಳಿಗೆ ಕಾರ್ಯಾಚರಿಸಲು ಚಿಂತನೆ ನಡೆಸಲಾಗಿದೆ ಎಂದರು.
ಬೆಳಗ್ಗೆ ಸಂಜೆ ಹೆಚ್ಚು ಬಸ್‌ಗಳನ್ನು ಬಿಡಿ : ಹಣ ನೀಡಿ ಟಿಕಟ್ ಪಡೆದರೂ ಸೀಟ್ ಸಿಗುತ್ತಿಲ್ಲ ಎಂದು ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪುರುಷ ಪ್ರಯಾಣಿಕರು ಅಲ್ಲಲ್ಲಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಬೆಳಗ್ಗೆ, ಸಂಜೆ ವೇಳೆ ಹೆಚ್ಚುವರಿ ಬಸ್ ಓಡಿಸಿದರೆ ಈ ಸಮಸ್ಯೆ ನಿವಾರಣೆ ಆಗಲಿದೆ. ಈ ನಿಟ್ಟಿನಲ್ಲಿ ಸಾರಿಗೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.
ಶಕ್ತಿ ಯೋಜನೆಯ ಬಳಿಕ ಕೆಎಸ್‌ಆರ್ ಟಿಸಿ ಬಸ್‌ಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭರ್ತಿಯಾಗಿ ಬಸ್‌ಗಳಲ್ಲಿ ಜಾಗವಿಲ್ಲದೇ, ಮಾರ್ಗಮಧ್ಯ ನಿಲ್ಲಿಸದೇ ಹೋದ ಕಾರಣ, ವಿದ್ಯಾರ್ಥಿಗಳು ಹಾಗೂ ಪುರುಷ ಪ್ರಯಾಣಿಕರಿಗೆ ತೊಂದರೆ ಆಗುತ್ತಿರುವ ಪ್ರಕರಣಗಳು ನಡೆದಿವೆ. ಯೋಜನೆ ಹೊಸದಾಗಿ ಜಾರಿಯಾಗಿರುವುದರಿಂದ ಈಗ ಹೆಚ್ಚು ರಶ್ ಇದೆ. ಮುಂದಿನ ದಿನಗಳಲ್ಲಿ ಇದು ಸಹಜ ಸ್ಥಿತಿಗೆ ಬರುವ ನಿರೀಕ್ಷೆಯಿದೆ. – ಶ್ರೀನಿವಾಸ್, ಚಾ.ನಗರ ಸಾರಿಗೆ ವಿಭಾಗೀಯ, ನಿಯಂತ್ರಣಾಧಿಕಾರಿ
-ಕೆ.ಎಸ್.ಬನಶಂಕರ ಆರಾಧ್ಯ