ಉಡುಪಿ: ಯುಎನ್ ಸಿನೆಮಾಸ್ ಬ್ಯಾನರ್‌ನಡಿ ನಿರ್ಮಾಣಗೊಂಡಿರುವ “ಶಕಲಕ ಬೂಂಬೂಂ’ ತುಳು ಚಲನಚಿತ್ರದ ಬಿಡುಗಡೆ ಕಾರ್ಯಕ್ರಮ ನಗರದ ಕಲ್ಪನಾ ಥಿಯೇಟರ್‌ನಲ್ಲಿ ಶುಕ್ರವಾರ ನಡೆಯಿತು.
ದೀಪ ಪ್ರಜ್ವಲಿಸಿ ಬಿಡುಗಡೆಗೊಳಿಸಿದ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್‌ಪಾಲ್ ಎ. ಸುವರ್ಣ ಮಾತನಾಡಿ, ತುಳು ಚಲನಚಿತ್ರದ ಮೂಲಕ ತುಳುನಾಡಿನ ಸಂಸ್ಕೃತಿಯನ್ನು ಹೊರ ಪ್ರಪಂಚಕ್ಕೆ ಪರಿಚಯಿಸುವ ಕೆಲಸವನ್ನು ತುಳುನಾಡಿನ ಚಿತ್ರ ತಂಡ ಅತ್ಯುತ್ತಮವಾಗಿ ನಿರ್ವಹಿಸಿದೆ.
ಬ್ಯಾಂಕಿಂಗ್, ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಉಡುಪಿ ಪ್ರಸ್ತುತ ಚಿತ್ರರಂಗದಲ್ಲಿಯೂ ಹೆಸರು ಗಳಿಸುತ್ತಿರುವುದು ಅಭಿನಂದನೀಯ. ಈ ಚಿತ್ರಕ್ಕೆ ವಿಶೇಷ ಜನಮನ್ನಣೆ ದೊರಕಿ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ರೋಟರಿ ವಲಯ 4ರ ಸಹಾಯಕ ಗವರ್ನರ್ ರಾಮಚಂದ್ರ ಉಪಾಧ್ಯಾಯ ಅವರು, ಪ್ರಸ್ತುತ ತುಳು ಸಿನೆಮಾ ಬಹಳಷ್ಟು ಪ್ರವರ್ಧಮಾನಕ್ಕೆ ಬರುತ್ತಿರುವುದು ಸಂತೋಷದ ವಿಚಾರ.
Related Articles
ತುಳುನಾಡಿನ ಆಚಾರ-ವಿಚಾರಗಳನ್ನು ತಿಳಿಸುವ ಪ್ರಯತ್ನದ ಈ ಸಿನೆಮಾ ನಿರ್ಮಿಸಿರುವುದು ಒಂದು ಸಾಹಸವಾಗಿದೆ. ಈ ಚಿತ್ರ ದೊಡ್ಡ ಮಟ್ಟದ ಹೆಸರುಗಳಿಸಲಿ ಹಾರೈಸಿದರು.
ನಿರ್ಮಾಪಕ ನಿತ್ಯಾನಂದ ನಾಯಕ್ ನರಸಿಂಗೆ ಪ್ರಾಸ್ತಾವಿಕ ಮಾತನಾಡಿ, ಈ ವರ್ಷದ ರೋಟರಿ ಧ್ಯೇಯವಾದ ಅಂಗಾಂಗ ದಾನ ಯೋಜನೆಗೆ ಒತ್ತು ನೀಡುವ ನಿಟ್ಟಿನಲ್ಲಿ ಇಡೀ ಚಿತ್ರ ತಂಡ ಅಂಗಾಂಗ ದಾನಕ್ಕೆ ಮುಂದಾಗಿದೆ. ಹೊಸ ಕಲ್ಪನೆಯನ್ನು ಇರಿಸಿಕೊಂಡು ಚಿತ್ರ ಪ್ರೇಮಿಗಳಿಗೆ ಹೊಸತನ್ನು ನೀಡುವ ಉದ್ದೇಶದಿಂದ ನಿರ್ಮಿಸಲಾದ ಚಿತ್ರವನ್ನು ವೀಕ್ಷಿಸಿ ಚಿತ್ರ ತಂಡವನ್ನು ಹರಸಬೇಕೆಂದು ಮನವಿ ಮಾಡಿಕೊಂಡರು.
ಎಂಜಿನಿಯರ್ ವಸಂತ ಪೈ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಶ್ರೀಶ ನಾಯಕ್ ಪೆರ್ಣಂಕಿಲ, ಚಿತ್ರದ ನಿರ್ಮಾಪಕ ಉಮೇಶ್ ಪ್ರಭು ಮಾಣಿಬೆಟ್ಟು, ನಿರ್ದೇಶಕ ಶ್ರೀಶ ಎಳ್ಳಾರೆ, ನಾಯಕ ನಟ ಗಾಡ್ವಿನ್ ಸ್ಪಾರ್ಕಲ್, ನಟರಾದ ರಾಜೇಶ್ವರಿ ಕುಲಾಲ್, ವಸಂತ್ ಮುನಿಯಾಲು, ಪ್ರವೀಣ್ ಜಿ. ಆಚಾರ್ಯ, ಪ್ರವೀಣ್ ಮರ್ಕಮೆ, ಬಾಲನಟಿ ತನಿಷಾ ಕಾರ್ಕಳ ಮೊದಲಾದವರು ಉಪಸ್ಥಿತರಿದ್ದರು.