Advertisement

Shahapur; 10ನೇ ತರಗತಿ ವಿದ್ಯಾರ್ಥಿ ಹಠಾತ್‌ ಕುಸಿದು ಬಿದ್ದು ಸಾ*ವು

05:56 PM Sep 19, 2024 | Team Udayavani |

ಶಹಾಪುರ: 10ನೇ ತರಗತಿ ವಿದ್ಯಾರ್ಥಿಯೊಬ್ಬ ಶಾಲೆಯಲ್ಲಿ ಕುಸಿದು ಬಿದ್ದು ಮೃತಪಟ್ಟ ಘಟನೆ ನಗರದ ಪ್ರತಿಷ್ಠಿತ ಖಾಸಗಿ ಶಾಲೆಯೊಂದರಲ್ಲಿ ಬುಧವಾರ ನಡೆದಿದೆ.

Advertisement

ತಾಲೂಕಿನ ಕರ್ಕಳ್ಳಿ ತಾಂಡಾದ ರಾಮುಲು ರಾಠೊಡ ಎಂಬುವರ ಪುತ್ರ ಚೇತನ್‌ ಮೃತಪಟ್ಟ ಬಾಲಕ. ನನ್ನ ಮಗನಿಗೆ ಆಸ್ಪತ್ರೆಗೆ ಕರೆದುಕೊಂಡು ಹೋಗದ ಕಾರಣ ಮಗ ಚೇತನ ಮೃತಪಟ್ಟಿದ್ದಾನೆ. ಶಾಲಾ ಮಂಡಳಿ ಅಥವಾ ಶಿಕ್ಷಕರ ನಿರ್ಲಕ್ಷ್ಯವೇ ಕಾರಣವೆಂದು ಪಾಲಕರು ಆರೋಪಿಸಿದ್ದಾರೆ. ಮಗ ಆರಾಮವಿಲ್ಲವೆಂದು ಬೇಡಿಕೊಂಡರೂ, ವಾಂತಿ ಆದರೂ ವಿದ್ಯಾರ್ಥಿಗೆ ಹಿಂದಿನ ಬೆಂಚ್‌ ಮೇಲೆ ಮಲಗಲು ಸೂಚಿಸಿದ್ದಾರೆ. ಮಗ ಮಲಗಿದ್ದಲೇ ಜೀವ ಬಿಟ್ಟಿದ್ದಾನೆ. ಇದು ಶಿಕ್ಷಕರ ಮತ್ತು ಆಡಳಿತ ಮಂಡಳಿ ನಿರ್ಲಕ್ಷವೇ ಕಾರಣ ಎಂದು ಪಾಲಕರು ಆರೋಪಿಸಿದ್ದಾರೆ. ಮೃತ ದೇಹವನ್ನೇ ಬೈಕ್‌ ಮೇಲೆ ಕೂಡಿಸಿಕೊಂಡು ಸರ್ಕಾರಿ ಆಸ್ಪತ್ರೆಗೆ ತಂದು ಹಾಕಿದ್ದಾರೆ ಎಂದು ಮೃತ ಚೇತನ್‌ ತಂದೆ ರಾಮುಲು ರಾಠೊಡ ಆರೋಪಿಸಿದ್ದಾರೆ.

ಶಿಕ್ಷಕರು ಹೇಳುವುದೇ ಬೇರೆ..
ಚೇತನ ಎರಡ್ಮೂರು ದಿನದಿಂದ ಶಾಲೆಗೆ ಬಂದಿರಲಿಲ್ಲ. ಪಾಲಕರನ್ನು ವಿಚಾರಿಸಲಾಗಿ ಆತನಿಗೆ ಜ್ವರ ಬಂದಿವೆ. ಆರಾಮ ಆದ ತಕ್ಷಣ ಕರೆದುಕೊಂಡು ಬರುತ್ತೇವೆಂದು ತಿಳಿಸಿದ್ದಾರೆ. ಇಂದು ಅವರ ಪಾಲಕರೇ ಶಾಲೆಗೆ ಬಂದು ಚೇತನನನ್ನು ಬಿಟ್ಟು ಹೋಗಿದ್ದಾರೆ. ಒಂದು ವಿಷಯದ ಸಮಯ ಆಗುತ್ತಿದ್ದಂತೆ ಬೆಂಚಿನ ಮೇಲೆ ಮಲಗಿದ್ದಾನೆ. ಅದನ್ನು ಕಂಡ ಶಿಕ್ಷಕರು ಪರೀಕ್ಷಿಸಿ ತಡ ಮಾಡದೆ ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದೆ. ಈತ ಏಕಾಏಕಿ ಮೃತಪಟ್ಟಿರೋದು ನಮಗೂ ಆಘಾತ ತಂದಿದೆ ಎಂದು ಶಾಲೆಯ ಮುಖ್ಯ ಗುರುಗಳು ಪತ್ರಿಕೆಗೆ ತಿಳಿಸಿದ್ದಾರೆ. ಈ ಕುರಿತು ಶಹಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಗುವನ್ನು ಮರಣೋತ್ತರ ಪರೀಕ್ಷೆಗೊಳಪಡಿಸಲಾಗಿದೆ.

ಸುಳ್ಳು ಹೇಳುತ್ತಿದ್ದಾರೆ
ಆಡಳಿತ ಮಂಡಳಿಯವರು ನನ್ನ ಮಗನಿಗೆ ಮೈಯಲ್ಲಿ ಹುಷಾರಿಲ್ಲವೆಂದು ಸುಳ್ಳು ಹೇಳುತ್ತಿದ್ದಾರೆ. ಮೈಯಲ್ಲಿ ಹುಷಾರಿಲ್ಲದಿದ್ದರೆ ನಾವು ಶಾಲೆಗೆ ಹೇಗೆ ಕಳಿಸುತ್ತೇವೆ. ನಮ್ಮ ಮಕ್ಕಳ ಬಗ್ಗೆ ನಮಗೆ ಕಾಳಜಿ ಇಲ್ಲವೇ? ಶಾಲೆಯವರ ನಿರ್ಲಕ್ಷ್ಯದಿಂದ ನನ್ನ ಮಗ ಸತ್ತಿದ್ದಾನೆ ಎಂದು ಮೃತ ಬಾಲಕನ ತಂದೆ ರಾಮುಲು ರಾಠೊಡ ಹೇಳಿದ್ದಾರೆ.

ಆಂಬ್ಯುಲೆನ್ಸ್‌ ನಲ್ಲಿ ಕರೆದುಕೊಂಡು ಹೋಗಬೇಕಿತ್ತು
ನಮ್ಮ ಅಣ್ಣನ ತರಗತಿ ಶಿಕ್ಷಕರ ಹತ್ತಿರ ಹೋಗಿ ನಮ್ಮಣ್ಣ ವಾಂತಿ ಮಾಡಿಕೊಳ್ಳುತ್ತಿದ್ದಾನೆ ಫೋನ್‌ ಕೊಡಿ ನಮ್ಮ ಅಪ್ಪ ಅಮ್ಮನಿಗೆ ಫೋನ್‌ ಮಾಡಬೇಕೆಂದು ಕೇಳಿದರೆ ಫೋನ್‌ ಕೊಡದೆ ಕ್ಲಾಸ್‌ ಸರ್‌ ಬೆದರಿಸಿ ಹಾಗೆಲ್ಲ ಕೊಡಕ್ಕಾಗಲ್ಲ ಎಚ್‌ಎಮ್‌ ಅವರ ಅನುಮತಿ ಬೇಕು ಎಂದು ಗದರಿಸಿ ಕಳುಹಿಸಿದ್ದಾರೆ. ತಕ್ಷಣ ನನ್ನ ಅಣ್ಣನನ್ನು ದವಾಖಾನೆಗೆ ಕರೆದುಕೊಂಡು ಹೋಗಿದ್ದರೆ ನಮ್ಮಣ್ಣ ಉಳಿಯುತ್ತಿದ್ದ. ನನ್ನ ಅಣ್ಣನನ್ನು ಶಾಲಾ ವಾಹನ ಅಥವಾ ಆಂಬ್ಯುಲೆನ್ಸ್‌ ನಲ್ಲಿ ಕರೆದುಕೊಂಡು ಹೋಗಬಹುದಾಗಿತ್ತು. ಹಾಗೆ ಮಾಡದೆ ಇಬ್ಬರು ಎತ್ತಿಕೊಂಡು ಬೈಕ್‌ ಮೇಲೆ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಅಲ್ಲಿಂದ ಸರ್ಕಾರಿ ದವಾಖಾನೆಗೆ ಕರೆದುಕೊಂಡು ಹೋಗಿದ್ದಾರೆ ಎಂದು ಮೃತ ವಿದ್ಯಾರ್ಥಿ ಚೇತನನ ತಂಗಿ ಪವಿತ್ರಾ ಮಾಧ್ಯಮದೆದುರು ತನ್ನ ಅಳಲು ತೋಡಿಕೊಂಡಳು.

Advertisement
Advertisement

Udayavani is now on Telegram. Click here to join our channel and stay updated with the latest news.

Next