ಕರಾಚಿ: ಪಾಕಿಸ್ಥಾನದ ಟೆಸ್ಟ್, ಏಕದಿನ ಮತ್ತು ಟಿ20 ಕ್ರಿಕೆಟ್ ತಂಡಗಳಿಗೆ ಮತ್ತೆ ಬಾಬರ್ ಆಜಮ್ ಅವರನ್ನೇ ನಾಯಕರನ್ನಾಗಿ ನೇಮಿಸಲು ಪಿಸಿಬಿ ಸಿದ್ಧತೆ ನಡೆಸುತ್ತಿದೆ ಎಂದು ವರದಿಯಾಗಿದೆ.
ಟಿ20 ನಾಯಕತ್ವ ವಹಿಸಿದ್ದ ಯುವ ವೇಗಿ ಶಾಹೀನ್ ಶಾ ಅಫ್ರಿದಿ ಅವರಲ್ಲಿ ನಂಬಿಕೆ ಇಲ್ಲದ ಕಾರಣ, ಮತ್ತೆ ಬಾಬರ್‌ಗೆ ಮಣೆ ಹಾಕಲು ಪಿಸಿಬಿ ಯೋಚಿಸಿದೆ ಎನ್ನಲಾಗುತ್ತಿದೆ.
ಟಿ20 ವಿಶ್ವಕಪ್‌ಗೆ ಎರಡು ತಿಂಗಳು ಬಾಕಿ ಇರುವಾಗಲೇ ರಾಷ್ಟ್ರೀಯ ಕ್ರಿಕೆಟ್ ತಂಡದ ನಾಯಕತ್ವ ಬದಲಾಯಿಸಲು ಪಿಸಿಬಿ ಮುಂದಾಗಿದೆ. ಇದಕ್ಕಾಗಿ, ಮೂರೂ ಕ್ರಿಕೆಟ್ ಮಾದರಿಗಳ ನಾಯಕತ್ವ ವಹಿಸಿಕೊಳ್ಳುವಂತೆ ಬಾಬರ್ ಮನವೊಲಿಸಲು ಪಿಸಿಬಿ ಪ್ರಯತ್ನಿಸುತ್ತಿದೆ. ಆದರೆ ಬಾಬರ್ ಈ ಬಗ್ಗೆ ಇನ್ನೂ ತಮ್ಮ ನಿರ್ಧಾರ ಪ್ರಕಟಿಸಿಲ್ಲ ಎಂದು ಮೂಲಗಳು ತಿಳಿಸಿವೆ.
ಕಳೆದ ಡಿಸೆಂಬರ್‌ನಲ್ಲಿ ಪಾಕ್ ತಂಡದ ಆಸ್ಟ್ರೇಲಿಯ ಪ್ರವಾಸದ ವೇಳೆ, ಟೆಸ್ಟ್ ತಂಡಕ್ಕೆ ಶಾನ್ ಮಸೂದ್ ಅವರನ್ನು ನಾಯಕರನ್ನಾಗಿ ನೇಮಿಸಲಾಗಿತ್ತು. ಟಿ20 ನಾಯಕತ್ವದ ಜವಾಬ್ದಾರಿಯನ್ನು 22 ವರ್ಷದ ವೇಗಿ ಶಾಹೀನ್ ಶಾ ಅಫ್ರಿದಿಗೆ ವಹಿಸಿತ್ತು. ಆದರೆ ಜೂನ್ 2ರಿಂದ ಅಮೆರಿಕ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ಆರಂಭಗೊಳ್ಳಲಿರುವ ಬಹು ನಿರೀಕ್ಷಿತ ಟಿ20 ವಿಶ್ವಕಪ್‌ಗೂ ಮುನ್ನ ಮೂರೂ ಮಾದರಿಗಳ ನಾಯಕತ್ವ ವಹಿಸಲು, ಪಿಸಿಬಿ ಅಧ್ಯಕ್ಷ ಮೋಹ್ಸಿನ್ ನಖ್ವಿ, ಬಾಬರ್‌ಗೆ ಆಫರ್ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.