ಶಹಾಪುರ: ಕೃಷಿಕರ ಜೀವನಮಟ್ಟ ಸುಧಾರಿಸದ ಹೊರತು ಅಭಿವೃದ್ಧಿಗೆ ಅರ್ಥವಿಲ್ಲ. ಕೃಷಿಕರ ಶ್ರಮವಿದ್ದಲ್ಲಿ ಮಾತ್ರ ನಮ್ಮೆಲ್ಲರ ಹೊಟ್ಟೆ ತುಂಬಲು ಸಾಧ್ಯವಿದೆ. ಕೃಷಿಕರು ದೇಶದ ನಿಜವಾದ ಕಾಯಕಯೋಗಿಗಳು ಎಂದು ಉಪ ಲೋಕಾಯುಕ್ತ ಬಿ.ಎಸ್. ಪಾಟೀಲ್ ತಿಳಿಸಿದರು.
ಭೀಮರಾಯನ ಗುಡಿಯ ಕೃಷಿ ಮಹಾವಿದ್ಯಾಲಯ ಅಡಿಟೋರಿಯಂನಲ್ಲಿ ದಿ.ಬಸನಗೌಡ ಮಾಲಿ ಪಾಟೀಲ್ ಉಕ್ಕಿನಾಳ ಅವರ ದ್ವಿತೀಯ ಪುಣ್ಯ ಸ್ಮರಣೆ ನಿಮಿತ್ತ ಆಯೋಜಿಸಿದ್ದ ರೈತ ಚಿಂತನ ಮತ್ತು ಯುವಕರ ನಡೆ ಕೃಷಿಯೆಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೃಷಿಕರು ಸುಳ್ಳು ಹೇಳಿ ಮೋಸ ಮಾಡುವವರಲ್ಲ. ಮತ್ತೂಬ್ಬರಿಗೆ ಸುಳ್ಳು ಹೇಳಿ ತಮ್ಮ ಬೇಳೆ ಬೇಯಿಸಿಕೊಳ್ಳುವಂತ ಲಾಭ ಕಂಡುಕೊಳ್ಳುವಂತ ಅಥವಾ ಮತ್ತೂಬ್ಬರ ಹಂಗಿನಲ್ಲಿ ಕುಳಿತು ತಿನ್ನುವಂತವರು ಅವರಲ್ಲ. ದುಡಿಯದೇ ದೇಣಿಗೆ ಮೂಲಕ ಊಟ ಮಾಡುವವರು ಅವರಲ್ಲ. ಕೆಲ ಅಕ್ಷರಸ್ಥರಂತೆ ಮಾತಿನ ಮೂಲಕ ಮೋಡಿ ಮಾಡಿ ದುಡ್ಡು ಗಳಿಸುವ ಪ್ರಮೇಯವು ಅವರಿಗಿಲ್ಲ ಎಂದರು.
ರೈತರು ಶ್ರಮದಿಂದ ನಂಬಿಕೆಯೊಂದಿಗೆ ಕೃಷಿ ಕಾಯಕ ನಡೆಸುವವರಾಗಿದ್ದಾರೆ. ಪ್ರಸ್ತುತ ಕೃಷಿ ಕಾಯಕದಿಂದ ಯುವಕರು ಹಿಂದೆ ಸರಿಯುತ್ತಿರುವುದು ವಿಷಾದನೀಯ. ಆ ನಿಟ್ಟಿನಲ್ಲಿ ಕೃಷಿ ಉಳಿದರೆ ದೇಶ ಉಳಿಯಲಿದೆ. ಕೃಷಿ ಅಳಿದರೆ ಮುಂದಿನ ಅಪಾಯ ಊಹಿಸಲು ಕಷ್ಟಸಾಧ್ಯ. ಹೀಗಾಗಿ ಇಂತಹ ಕಾರ್ಯಕ್ರಮ ಆಯೋಜಿಸುವ ಮೂಲಕ ಯುವಕರನ್ನು ಕೃಷಿಯತ್ತ ಸೆಳೆಯುವ ಕೆಲಸವಾಗಬೇಕಿದೆ ಎಂದರು.
ಸೊನ್ನ ವಿರಕ್ತಮಠದ ಡಾ| ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಹಿರಿಯ ನ್ಯಾಯವಾದಿ ಭಾಸ್ಕರರಾವ್ ಮುಡಬೂಳ ಅಧ್ಯಕ್ಷತೆ ವಹಿಸಿದ್ದರು. ಡಾ| ಚಿದಾನಂದ ಮನಸೂರೆ, ಕೃಷಿ ಚಿಂತಕ ಮಲೆನಾಡಿನ ಟಿ.ಎನ್. ಪ್ರಕಾಶ, ಧಾರವಾಡ ಮತ್ತು ಸ್ಥಳೀಯ ಕೃಷಿ ಮಹಾವಿದ್ಯಾಲಯ ಡೀನ್ ಸೇರಿದಂತೆ ಕಾರ್ಯಕ್ರಮ ಆಯೋಜಿಸಿದ್ದ ದಿ.ಬಸನಗೌಡ ಮಾಲಿ ಪಾಟೀಲ್ ಉಕ್ಕಿನಾಳ ಚಾರಿಟೇಬಲ್ ಟ್ರಸ್ಟ್‌ನ ಡಾ| ಮಲ್ಲನಗೌಡ ಉಕ್ಕಿನಾಳ, ಬೆಂಗಳೂರಿನ ಡಾ| ಶೇಖರ ಪಾಟೀಲ್ ಉಕ್ಕಿನಾಳ, ರಾಜೂಗೌಡ ಉಕ್ಕಿನಾಳ ಉಪಸ್ಥಿತರಿದ್ದರು.