Advertisement

ಬಹುಗ್ರಾಮ ಕುಡಿಯುವ ನೀರಿನ ಯೋಜನೆ ವಿಫಲ

10:44 AM May 05, 2019 | Team Udayavani |

ಶಹಾಪುರ: ತಾಲೂಕಿನ ಶೆಟಿಗೇರಾ ಗ್ರಾಮದ ಕೆರೆಯಲ್ಲಿ ವಿಶ್ವ ಬ್ಯಾಂಕ್‌ ಜಲ ನಿರ್ಮಾಣ ಯೋಜನೆಯಡಿ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯ ಅಂದಾಜು 5 ಕೋಟಿ 67 ಲಕ್ಷ ರೂ. ಅನುದಾನದಲ್ಲಿ ನಿರ್ಮಿಸಲಾದ ಪಂಪ್‌ ಹೌಸ್‌ ನಾಗರಿಕರಿಗೆ ನೀರೊದಗಿಸದೆ ಪಾಳು ಬಿದ್ದಿದೆ. ಕೆರೆ ಸಂಪೂರ್ಣ ಬತ್ತಿ ಹೋಗಿದ್ದು, ಬಹುಗ್ರಾಮ ಕುಡಿಯುವ ನೀರು ಯೋಜನೆ ಬತ್ತಿದ ಕೆರೆಯಲ್ಲಿ ಬಿಸಿಲ ಬೇಗೆಗೆ ಬೆಂಡಾಗಿ ಹೋಗಿದೆ.

Advertisement

ಶೆಟಿಗೇರಾ ಸೇರಿದಂತೆ ವನದುರ್ಗ, ಚನ್ನೂರ ಮತ್ತು ಹೊಸಕೇರಾ ಗ್ರಾಮಗಳಿಗೆ ಶಾಶ್ವತ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವ ಹಿನ್ನೆಲೆಯಲ್ಲಿ ನಾಲ್ಕು ಗ್ರಾಮಗಳಿಗೆ ಪೈಪ್‌ಲೈನ್‌ ಸಹ ಅಳವಡಿಸಲಾಗಿತ್ತು. 2011-12ರಲ್ಲಿ ಕಾಮಗಾರಿ ಆರಂಭವಾಗಿ 2012-13ರಲ್ಲಿ ಪೂರ್ಣಗೊಂಡಿದ್ದು, ಗುತ್ತಿಗೆದಾರರಿಗೆ ಸಂಪೂರ್ಣ ಬಿಲ್ ಸಹ ಪಾವತಿಯಾಗಿದೆ.

ಕೋಟ್ಯಂತರ ರೂ. ಖರ್ಚಾದರೂ ಈ ಯೋಜನೆ ಸಫಲವಾಗಿಲ್ಲ. ಇದುವರೆಗೂ ಹನಿ ನೀರು ಸರಬರಾಜು ಆಗಿಲ್ಲ. ಪ್ರಮುಖವಾಗಿ ಕೆರೆಯಲ್ಲಿ ನೀರು ಸಂಗ್ರಹಕ್ಕೆ ಬೇಕಾದ ವ್ಯವಸ್ಥೆ ಮಾಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ.

ಕಳೆದ ಎರಡು ವರ್ಷದ ಹಿಂದೆ ಇದೇ ಗ್ರಾಮಸ್ಥರು, ರೈತರು ಪಂಪ್‌ ಹೌಸ್‌ ಹತ್ತಿರ ಪ್ರತಿಭಟನೆ ನಡೆಸಿ ಅಧಿಕಾರಿಗಳ ಗಮನ ಸೆಳೆದಿದ್ದರು. ಆಗ ಕಾಟಾಚಾರಕ್ಕೆ ಎಂಬಂತೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಕಾರ್ಯಯೋಜನೆ ರೂಪಿಸುವ ಭರವಸೆ ನೀಡಿದ್ದರು. ಆದರೆ ಇಲ್ಲಿವರೆಗೂ ಯಾವ ಕ್ರಮ ಕೈಗೊಂಡಿರುವುದಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಸ್ತುತ ರಣ ಬೇಸಿಗೆಗೆ ಹನಿ ನೀರಿಗೂ ಈ ಭಾಗದ ಜನ ಪರದಾಡುವಂತಾಗಿದೆ. ನೀರು ಸರಬರಾಜು ಕಾರ್ಯ ನಡೆಯದ ಕಾರಣ ನಿರುಪಯುಕ್ತ ನೀರಿನ ಟ್ಯಾಂಕ್‌ ಮತ್ತು ಪೈಪ್‌ಲೈನ್‌ ಸಂಪೂರ್ಣ ಹದಗೆಟ್ಟು ಹೋಗಿವೆ. ಅಲ್ಲದೆ ಈ ಕುರಿತು ಆಗಿನ ಗ್ರಾಮೀಣ ಅಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ ಸೇರಿದಂತೆ ಜಿಲ್ಲಾಧಿಕಾರಿ ಮತ್ತು ಜಿಪಂ ಸಿಇಒ ಹಾಗೂ ತಾಪಂ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಲಾಗಿದೆ. ಆದಾಗ್ಯು ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ನಾಲ್ಕು ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರವಿದೆ. ಶಾಶ್ವತ ಕುಡಿಯುವ ನೀರಿನ ಟ್ಯಾಂಕ್‌ ಕೋಟ್ಯಂತರ ರೂ. ಖರ್ಚು ಮಾಡಿ ನಿರ್ಮಿಸಲಾಗಿದ್ದರೂ ಅದರ ಸದ್ಭಳಿಕೆ ಮಾಡುವಲ್ಲಿ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ. ಆದರೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಸಾರ್ವಜನಿಕರ ಅನುಕೂಲಕ್ಕಾಗಿ ನಿರ್ಮಿಸಿದ ನೀರು ಸರಬರಾಜು ಟ್ಯಾಂಕ್‌ ನಾಗರಿಕರ ಸೇವೆಗೆ ಬಾರದೆ ಅನಾಥವಾಗಿದೆ. ಕಾರಣ ಯೋಜನೆಗೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು. ಅಲ್ಲದೆ ಯೋಜನೆ ಸಫಲತೆಗೆ ಕ್ರಮ ಕೈಗೊಳ್ಳುವವ ಮೂಲಕ ನಾಗರಿಕರಿಗೆ ಅನುಕೂಲ ಕಲ್ಪಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಯೋಜನೆ ವಿಫಲವಾಗಿರುವುದಕ್ಕೆ ಬೇಸರವಿದೆ. ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಕುರಿತು ಚರ್ಚಿಸಿದ್ದೇನೆ. ಆದರೂ ಅನುಷ್ಠಾನವಾಗುತ್ತಿಲ್ಲ. ಸಂಬಂಧಿಸಿದ ಮೇಲಧಿಕಾರಿಗಳ ಜೊತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವೆ.
ಶರಣಬಸಪ್ಪಗೌಡ ದರ್ಶನಾಪುರ, ಶಾಸಕ

ಬಹುಗ್ರಾಮ ಕುಡಿವ ನೀರಿನ ಯೋಜನೆಯಡಿ ಕೋಟ್ಯಂತರ ರೂ. ಖರ್ಚು ಮಾಡಲಾಗಿದೆ. ಆದರೆ ಕೆರೆಯಲ್ಲಿ ನೀರು ಸಂಗ್ರಹವಾಗದೆ ಯೋಜನೆ ವಿಫಲವಾಗಿದೆ. ಕೋಟ್ಯಂತರ ರೂ. ಬತ್ತಿದ ಕೆರೆಗೆ ಅರ್ಪಣೆ ಮಾಡಿದಂತಾಗಿದೆ. ಕೂಡಲೇ ಸ್ಥಳೀಯ ಶಾಸಕರು ಈ ಯೋಜನೆಗೆ ಮರು ಜೀವ ನೀಡುವ ಮೂಲಕ ಸಮರ್ಪಕ ವ್ಯವಸ್ಥೆ ಕಲ್ಪಿಸಿ ಯೋಜನೆ ಯಶಸ್ಸಿಗೆ ಕ್ರಮ ಕೈಗೊಳ್ಳಬೇಕು.
•ಯಲ್ಲಯ್ಯ ನಾಯಕ ವನದುರ್ಗ

ಮಲ್ಲಿಕಾರ್ಜುನ ಮುದ್ನೂರ

Advertisement

Udayavani is now on Telegram. Click here to join our channel and stay updated with the latest news.

Next