Advertisement

ಶಹಾಪುರದಲ್ಲಿ ಫ್ಲೆಕ್ಸ್‌ ಹಾವಳಿಗಿಲ್ಲ ಕಡಿವಾಣ

11:27 AM Jun 03, 2019 | Naveen |

ಮಲ್ಲಿಕಾರ್ಜುನ ಮುದ್ನೂರ
ಶಹಾಪುರ:
ನಗರದ ಬಹುತೇಕ ಕಡೆ ಪ್ಲಾಸ್ಟಿಕ್‌ ಫ್ಲೆಕ್ಸ್‌ಗಳು ರಾರಾಜಿಸುತ್ತಿವೆ. ಅಷ್ಟೇ ಅಲ್ಲದೆ ಪಟ್ಟಣದ ತಹಶೀಲ್ದಾರ್‌ ಕಚೇರಿ ಎದುರು ಸರ್ಕಾರಿ ಜಾಹೀರಾತು ಮರೆಮಾಚುವಂತೆ ಬೋರ್ಡ್‌ಗಳ ಮೇಲೆ ಖಾಸಗಿ ಜಾಹೀರಾತು ಫ್ಲೆಕ್ಸ್‌ಗಳು ರಾರಾಜಿಸುತ್ತಿರುವುದು ನೋಡಿದರೆ ಪ್ಲಾಸ್ಟಿಕ್‌ ಫ್ಲೆಕ್ಸ್‌ಗಳ ಹಾವಳಿ ಎಷ್ಟಿದೆ ಎಂಬುದು ತಿಳಿಯಲಿದೆ. ಇಂತಹ ಫ್ಲಾಸ್ಟಿಕ್‌ ಫ್ಲೆಕ್ಸ್‌ಗಳಿಂದ ನಗರದ ಸೌಂದರ್ಯ ಹಾಳಾಗುತ್ತಿದೆ.

Advertisement

ಖಾಸಗಿ ಶಿಕ್ಷಣ ಸಂಸ್ಥೆಗಳು, ತರಬೇತಿ ಕೇಂದ್ರಗಳು ತಮ್ಮ ಸಂಸ್ಥೆಯಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳ ಭಾವಚಿತ್ರದೊಂದಿಗೆ ವಿದ್ಯಾರ್ಥಿಗಳ ಹೆಸರು ಪಡೆದ ಅಂಕಗಳನ್ನು ಬ್ಯಾನರ್‌ಗಳಲ್ಲಿ ಪ್ರದರ್ಶಿಸುವ ಮೂಲಕ ಹೆಚ್ಚಿನ ಪ್ರವೇಶಾತಿಯನ್ನು ಪಡೆಯ ಬಯಸುವ ಸಂಸ್ಥೆಗಳು ನಗರದ ಎಲ್ಲೆಂದರಲ್ಲಿ ಬ್ಯಾನರ್‌ ಕಟ್ಟುವ ಮೂಲಕ ನಗರದ ಸೌದರ್ಯ ಹಾಳುಗೆಡುವುತ್ತಿದ್ದಾರೆ.

ಅಲ್ಲದೇ ಸರ್ಕಾರಿ ಜಾಹೀರಾತು ನೀಡಿದ ದೊಡ್ಡ ದೊಡ್ಡ ನಾಮಫಲಕವನ್ನೆ ಮರೆ ಮಾಚಿ ಅವುಗಳ ಮೇಲೆ ಪ್ಲಾಸ್ಟಿಕ್‌ ಬ್ಯಾನರ್‌ಗಳನ್ನು ಕಟ್ಟಿದ್ದಾರೆ. ಶಿಕ್ಷಣ ಸಂಸ್ಥೆಗಳು ಏಪ್ರಿಲ್, ಮೇ ತಿಂಗಳಲ್ಲಿ ಇಂತಹ ಬ್ಯಾನರ್‌ ಫ್ಲೆಕ್ಸ್‌ ಅಳವಡಿಸುವ ಪರಿಪಾಠ ಬೆಳೆದು ಬಂದಿದೆ. ವರ್ಷದಿಂದ ವರ್ಷ ಇದು ಹೆಚ್ಚಾಗುತ್ತಲಿದೆ. ಇಂತಹ ಫ್ಲೆಕ್ಸ್‌, ಬ್ಯಾನರ್‌ ಅಳವಡಿಸುವ ಯಾವುದೇ ಶಿಕ್ಷಣ ಸಂಸ್ಥೆ ಸ್ಥಳೀಯ ನಗರಸಭೆಯಿಂದ ಪರವಾನಗಿ ಪಡೆದಿರುವುದಿಲ್ಲ. ನಿಯಮ ಬಾಹಿರವಾಗಿ ಫ್ಲೆಕ್ಸ್‌ ಬ್ಯಾನರ್‌ಗಳು ಅಳವಡಿಸುತ್ತಿರುವುದು ಕಂಡು ಬಂದಿದೆ. ನಗರಸಭೆ ಅಧಿಕಾರಿ ಹಾಗೂ ಸಿಬ್ಬಂದಿ ಕಣ್ಣಿಗೆ ಕಂಡರೂ ಕಾಣದಂತೆ ಮೌನ ವಹಿಸಿರುವುದು ಚರ್ಚೆಗೆ ಗ್ರಾಸವಾಗಿದೆ.

ಬಯಲು ಪ್ರದೇಶ, ಸಾರ್ವಜನಿಕ ಸ್ಥಳ ಸೇರಿದಂತೆ ನಗರದ ಮುಖ್ಯ ರಸ್ತೆಗಳ ಮಧ್ಯಭಾಗದಲ್ಲಿ ಯಾವುದೇ ಜಾಹೀರಾತು ನಾಮಫಲಕ ಬ್ಯಾನರ್‌, ಫ್ಲೆಕ್ಸ್‌ ಅಳವಡಿಸುವುದು ಕಾನೂನು ಬಾಹಿರವಾಗಿದೆ.

ನಗರ ವಿರೂಪ ತಡೆ ಕಾಯ್ದೆ 1981ರ ಅನ್ವಯ ನಗರಸಭೆ ಅಧಿಕಾರಿಗಳ ಪೂರ್ವಾನುಮತಿ ಇಲ್ಲದೆ ಫ್ಲೆಕ್ಸ್‌, ನಾಮಫಲಕ ಅಳವಡಿಸುವುದು ಕ್ರಿಮಿನಲ್ ಅಪರಾಧವಾಗಿದೆ. ಇದಕ್ಕೆ ತಕ್ಕ ದಂಡ ಅಲ್ಲದೆ ಆರು ತಿಂಗಳು ಜೈಲು ಶಿಕ್ಷೆಗೆ ಗುರಿಯಾಗುವ ಅವಕಾಶವಿದೆ.

Advertisement

ಕೆಲವೊಂದು ಜಾಹೀರಾತು ಅಳವಡಿಕೆಗೆ ಶಿಕ್ಷಣ ಸಂಸ್ಥೆಗಳು ಅನುಪತಿ ಪಡೆದಿರುವುದು ಒಂದು ಎರಡು ದಿನ ಆದರೆ, ಅವಧಿ ಮುಗಿದಿದ್ದರೂ ಅವುಗಳನ್ನು ತೆರವುಗೊಳಿಸುವ ಗೋಜಿಗೆ ನಗರಸಭೆ ಹೋಗುವುದಿಲ್ಲ. ಹೀಗಾಗಿ ಮುಂದಾದರೂ ನಗರಸಭೆ ಅಧಿಕಾರಿಗಳು ಎಚ್ಚೆತ್ತುಕೊಂಡು ಫ್ಲೆಕ್ಸ್‌ ಹಾವಳಿಗೆ ಬ್ರೇಕ್‌ ಹಾಕಲಿ. ಅಲ್ಲದೆ ಸಮರ್ಪಕವಾಗಿ ನಿಯಮನುಸಾರ ಫ್ಲೆಕ್ಸ್‌ ಅಳವಡಿಕೆಗೆ ಸೂಕ್ತ ಬೆಲೆ ಪಡೆದು ಅನುಮತಿ ನೀಡಲಿ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ತಹಶೀಲ್ದಾರ್‌ ಕಚೇರಿ ಎದುರು ಸರ್ಕಾರಿ ಜಾಹೀರಾತು ನಾಮಫಲಕ ಮರೆ ಮಾಚುವಂತೆ ಖಾಸಗಿ ಶಿಕ್ಷಣ ಸಂಸ್ಥೆಗಳು ತಮ್ಮ ಪ್ಲಾಸ್ಟಿಕ್‌ ಫ್ಲೆಕ್ಸ್‌ಗಳನ್ನು ಹಾಕಿದ್ದಾರೆ. ಪ್ಲಾಸ್ಟಿಕ್‌ ನಿಷೇಧವಿದ್ದರೂ ಬಳಕೆಯಲ್ಲಿದೆ. ನಗರಸಭೆ ಪರವಾನಿಗೆ ನೀಡುವುದರಿಂದ ಆದಾಯ ಮೂಲವು ಹೆಚ್ಚಾಗಲಿದೆ. ನಗರದ ಬಹುತೇಕ ಕಡೆ ಎಲ್ಲೆಂದರಲ್ಲಿ ಫ್ಲೆಕ್ಸ್‌ಗಳು ರಾರಾಜಿಸುತ್ತಿವೆ. ಇದರಿಂದ ನಗರ ಸೌಂದರ್ಯ ಹಾಳಾಗಿದೆ. ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು.
ಗುರು ಕಾಮಾ,
ಬಿಜೆಪಿ ಮುಖಂಡ

Advertisement

Udayavani is now on Telegram. Click here to join our channel and stay updated with the latest news.

Next