ಶಹಾಪುರ: ಸ್ವತಃ ಗಾಪಂ ಅಧ್ಯಕ್ಷ ಇದೇ ಗ್ರಾಮದ ನಿವಾಸಿ. ನಾಲ್ವರು ಗ್ರಾಪಂ ಸದಸ್ಯರಿದ್ದರೂ ಸೌಲಭ್ಯ ಮರೀಚಿಕೆ. ರಸ್ತೆ, ಚರಂಡಿ, ಶೌಚಾಲಯ ಮತ್ತು ಕುಡಿಯುವ ನೀರಿಗೂ ಬರ.
ಇದು ತಾಲೂಕಿನ ಮಡ್ನಾಳ ಗ್ರಾಮದ ಪರಿಸ್ಥಿತಿ. ಗ್ರಾಮದಲ್ಲಿ ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ. ಚರಂಡಿ ವ್ಯವಸ್ಥೆ, ಸಾರ್ವಜನಿಕ ಶೌಚಾಲಯ, ಕುಡಿಯಲು ಶುದ್ಧ ನೀರಿಲ್ಲ. ರಸ್ತೆ ಮೇಲೆ ಕಲುಷಿತ ನೀರು ಸಂಗ್ರಹವಾಗಿ ಸಾಂಕ್ರಾಮಿಕ ರೋಗಗಳು ಹರಡುವ ಆತಂಕದಲ್ಲಿ ಗ್ರಾಮಸ್ಥರು ಕಾಲ ಕಳೆಯುತ್ತಿದ್ದಾರೆ.
ಹೋತಪೇಟ ಗ್ರಾಪಂ ವ್ಯಾಪ್ತಿ ಬರುವ ಮಡ್ನಾಳ ಗ್ರಾಮ ಹನ್ನೊಂದು ನೂರು ಮತದಾರರನ್ನು ಹೊಂದಿದೆ. ಗ್ರಾಮದಲ್ಲಿ ಯಾವುದೇ ಸಮರ್ಪಕ ಸೌಲಭ್ಯಗಳಿಲ್ಲದ ಜನ ತತ್ತರಿಸಿ ಹೋಗಿದ್ದಾರೆ.
ಮನೆಯಿಂದ ಹೊರಗೆ ಬಂದರೆ ಹೊಲಸು ನೀರಿನಲ್ಲಿ ಹೆಜ್ಜೆ ಇಡಬೇಕಾದ ಅನಿವಾರ್ಯವಿದೆ. ಗಬ್ಬು ವಾಸನೆ ಬೇರೆ. ಮಕ್ಕಳು, ವೃದ್ಧರು ಇದೇ ಹೊಲಸು ನೀರಲ್ಲಿ ಸಂಚರಿಸುವ ಸ್ಥಿತಿ ಬಂದಿದೆ. ಹೋತಪೇಟ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ಸಾಕಷ್ಟು ಬಾರಿ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಪಿಡಿಒ ಒಮ್ಮೆಯೂ ಗ್ರಾಮಕ್ಕೆ ಭೇಟಿ ನೀಡಿಲ್ಲ. ಸಾಕಷ್ಟು ಬಾರಿ ಕರೆ ಮಾಡಿದರೂ ಸಮರ್ಪಕ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ರಾಜ್ಯ ಸರ್ಕಾರ ಪ್ರತಿ ಗ್ರಾಮದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಬಡಾವಣೆಗಳ ಅಭಿವೃದ್ಧಿಗಾಗಿ ಸಾಕಷ್ಟು ಅನುದಾನ ನೀಡಿದರೂ ಅಧಿಕಾರಿಗಳು ಮಾತ್ರ ಯಾವುದೇ ಯೋಜನೆ ಅನುಷ್ಠಾನಗೊಳಿಸದೆ ಜನರನ್ನು ವಂಚಿಸುತ್ತಿದ್ದಾರೆ. ಕೇವಲ ಕಾಗದ ಪತ್ರದಲ್ಲಿ ಮಾತ್ರ ಯೋಜನೆಗಳು ಜಾರಿಯಲ್ಲಿವೆ. ಸ್ಥಳಕ್ಕೆ ಬಂದು ಪರಿಶೀಲಿಸಿದಲ್ಲಿ ನಿಜ ಸ್ಥಿತಿ ಅರಿವಿಗೆ ಬರುತ್ತದೆ. ಇಂತಹ ವಿಷಮ ಸ್ಥಿತಿಯಲ್ಲಿ ಜನ ಬದುಕುತ್ತಿದ್ದಾರೆ. ಮಹಿಳಾ ಸಾರ್ವಜನಿಕ ಶೌಚಾಲಯವಿಲ್ಲದ ಕಾರಣ ಬಯಲು ಬಹಿರ್ದೆಸೆಯೇ ಗತಿ ಎನ್ನಲಾಗಿದೆ. ಇದರಿಂದಾಗಿ ಮಹಿಳೆಯರು ನಿತ್ಯ ಪರದಾಡುವಂತಾಗಿದೆ. ಪ್ರಾಥಮಿಕ ಶಾಲೆ ಇದ್ದರೂ ಹಳೆ ಕಟ್ಟಡದಲ್ಲಿದೆ. ಮಕ್ಕಳಿಗೂ ಅಲ್ಲಿಯೂ ಯಾವುದೇ ಸಮರ್ಪಕ ವ್ಯವಸ್ಥೆ ಇಲ್ಲ. ಶೌಚಾಲಯ, ಗ್ರಂಥಾಲಯ ಇಲ್ಲ. ಒಟ್ಟಾರೆ ಶೈಕ್ಷಣಿಕ ವಾತಾವರಣವೇ ಕಾಣುತ್ತಿಲ್ಲ.