ಮಲ್ಲಿಕಾರ್ಜುನ ಮುದ್ನೂರ
ಶಹಾಪುರ: ನೂತನ ತಾಲೂಕು ಹುಣಸಿಗಿ ವ್ಯಾಪ್ತಿ ಬರುವ ಕೊನೆ ಗ್ರಾಮ ಎಣ್ಣೆ ವಡಿಗೇರಾ ಸೌಕರ್ಯವಿಲ್ಲದೆ ನಿತ್ಯ ನರಳುತ್ತಿದೆ. ಕುಡಿಯುವ ನೀರಿಗಾಗಿ ನಿತ್ಯ ಜಾಗರಣೆ ಮಾಡುವ ಸ್ಥಿತಿ ಬಂದಿದೆ.
ಈ ಗ್ರಾಮ ಹುಣಸಗಿ ತಾಲೂಕಿನ ಕೊನೆ ಗ್ರಾಮವಾಗಿದ್ದು, ಜನಪ್ರತಿನಿಧಿಗಳು ಅಧಿಕಾರಿಗಳು ಯಾರೊಬ್ಬರೂ ಇಲ್ಲಿನ ಸಮಸ್ಯೆ ಪರಿಹಾರಕ್ಕೆ ಸೂಕ್ತ ಸ್ಪಂದನೆ ನೀಡುತ್ತಿಲ್ಲ. ನಿರ್ಲಕ್ಷ್ಯ ವಹಿಸಿದ್ದು, ಗ್ರಾಮದ ಜನತೆ ನಿತ್ಯ ಪರದಾಡು ವಂತಾಗಿದೆ.
ಸಮರ್ಪಕ ವಿದ್ಯುತ್ ಸರಬರಾಜು ಇಲ್ಲ. ಕುಡಿಯಲು ನೀರು ಮೊದಲೇ ಇಲ್ಲ. ರಸ್ತೆ, ವ್ಯವಸ್ಥಿತವಾದ ಚರಂಡಿ ಯಾವುದೇ ಅಭಿವೃದ್ಧಿ ಕಾಮಗಾರಿ ನಡೆಯದೆ ತೀರಾ ಹಿಂದುಳಿದ ಕುಗ್ರಾಮವಾಗಿದೆ.
ಎಣ್ಣೆ ವಡಿಗೇರಾ ಗ್ರಾಮದಲ್ಲಿ ಸುಮಾರು 900 ಮನೆಗಳಿವೆ. ಅಂದಾಜು 6,500ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. ಈ ಗ್ರಾಮ ಮಾರನಾಳ ಗ್ರಾಮ ಪಂಚಾಯತ್ ವ್ಯಾಪ್ತಿ ಬರುತ್ತದೆ. ಗ್ರಾಮದಲ್ಲಿ 9 ಜನ ಗ್ರಾಪಂ ಸದಸ್ಯರು ಇದ್ದಾರೆ. ಇಡೀ ಗ್ರಾಮಕ್ಕೆ ಒಂದೇ ಬಾವಿ ಇದ್ದು, ಅದರಲ್ಲೂ ಸಮರ್ಪಕ ನೀರು ಬರುತ್ತಿಲ್ಲ.
ಪ್ರತಿ ಮನೆಯವರು ನೀರು ತರಲು ಕೈಗಾಡಿ ನಿರ್ಮಿಸಿಕೊಂಡಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಇಲ್ಲಿನ ಸಮಸ್ಯೆ ಗಮನಕ್ಕೆ ಇದ್ದರೂ ಯಾರೊಬ್ಬರು ಸಮಸ್ಯೆ ಪರಿಹಾರಕ್ಕೆ ಸಹಕಾರ ನೀಡುತ್ತಿಲ್ಲ ಎಂದು ನೊಂದ ಗ್ರಾನಸ್ಥರು ತಿಳಿಸಿದ್ದಾರೆ.