ಶಹಾಪುರ: ಸುರಪುರ, ಯಾದಗಿರಿ ಮತ್ತು ಜೇವರ್ಗಿಯಲ್ಲಿ ಕೃಷಿ ಮಾರುಕಟ್ಟೆಯಲ್ಲಿ ಉತ್ತಮ ವಹಿವಾಟು ನಡೆಯುತ್ತದೆ. ನಮ್ಮಲ್ಲಿ ಕೂಡ ಕೃಷಿಕರಿಗೆ ಅನುಕೂಲ ಆಗುವ ರೀತಿಯಲ್ಲಿ ಕೃಷಿ ಮಾರುಕಟ್ಟೆ ನಿರ್ಮಾಣದ ಗುರಿ ಹೊಂದಲಾಗಿದೆ ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.
ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ 2 ಕೋಟಿ 9 ಲಕ್ಷ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಅಡಿಗಲ್ಲು ನೆರವೇರಿಸಿ ನಂತರ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು.
ಕೃಷಿ ಮಾರುಕಟ್ಟೆ ಪ್ರಾಂಗಣದಲ್ಲಿ ವಾರ್ಷಿಕ ಕ್ರಿಯಾ ಯೋಜನೆಯಡಿ ಪ್ಯಾಕೇಜ್ ಕಾಮಗಾರಿಗಳಲ್ಲಿ ಆಡಳಿತ ಕಚೇರಿ ಕಟ್ಟಡ, ಡಾಂಬರೀಕರಣ ರಸ್ತೆ ಮತ್ತು ಸುತ್ತು ಗೋಡೆ ನಿರ್ಮಾಣ ಕಾಮಾಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದ ಅವರು, ಎಪಿಎಂಸಿ ಪರವಾನಗಿ ಹೊಂದಿದ್ದ ನಿಯಮನುಸಾರ ಎಲ್ಲಾ ದಾಖಲೆ ಹೊಂದಿವರಿಗೆ ಮಾತ್ರ ಅವಕಾಶ ಕಲ್ಪಿಸಿ, ಅಂಗಡಿ ಮತ್ತು ಪ್ಲಾಟ್‌ಗಳನ್ನು ಹಂಚಿಕೆ ಮಾಡಿ ಇಲಾಖೆಯ ಮಾನದಂಡ ಅನುಸರಿಸಿ ಹಂಚಿಕೆ ಮಾಡಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಮುಂದಿನ ದಿನಗಳಲ್ಲಿ 100 ಮಳಿಗೆ ನಿರ್ಮಾಣದ ಗುರಿ ಹೊಂದಲಾಗಿದೆ. ಎಲ್ಲರ ಸಹಕಾರವು ಇದಕ್ಕೆ ಮುಖ್ಯವಿದೆ. ಅಲ್ಲದೆ ಅಧಿಕಾರಿಗಳು ಗ್ರಾಮೀಣ ಪ್ರದೇಶಕ್ಕೆ ತೆರಳಿ ಮಾರುಕಟ್ಟೆ ವಹಿವಾಟು ಕುರಿತು ಜಾಗೃತಿ ಮೂಡಿಸಬೇಕು ಎಂದು ವರ್ತಕರಿಗೆ ಸಲಹೆ ನೀಡಿದರು.
ಮತ್ತು ನಿತ್ಯ ಕೃಷಿ ಮಾರುಕಟ್ಟೆಯಲ್ಲಿ ದುಡಿಯುವ ಕೂಲಿಕಾರರಿಗೆ 150 ಮನೆಗಳ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ. ಶೀಘ್ರದಲ್ಲಿ ಅದಕ್ಕೆ ಅರ್ಜಿ ಕರೆಯಲಾಗುವುದು ಎಂದರು.
ಈ ಸಂದರ್ಭದಲ್ಲಿ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಆರಬೋಳ, ತಾಪಂ ಅಧ್ಯಕ್ಷ ಬಸವಂತರೆಡ್ಡಿ ಸಾಹು ಹತ್ತಿಗುಡೂರ, ನಿಂಗಣ್ಣ ಬಾದ್ಯಾಪುರ, ಯಾದಗಿರಿ ಕೃಷಿ ಮಾರುಕಟ್ಟೆ ಇಲಾಖೆ ಸಹಾಯಕ ನಿರ್ದೇಶಕ ಭೀಮರಾಯ, ಕೃ.ಉ.ಮಾ.ಸ ಆಡಳಿತಾಧಿಕಾರಿ ಶಂಕರಗೌಡ ಎಸ್. ಸೋಮನಾಳ, ಕಲಬುರಗಿಯ ಜಿ.ಎಮ್. ಅಮರನಾಥ, ಕೃಷಿ ಉತ್ಪನ್ನ ಮಾರುಕಟ್ಟೆ ಕಾರ್ಯದರ್ಶಿ ಶಿವಕುಮಾರ ದೇಸಾಯಿ, ಇಲಾಖೆ ಕಲಬುರಗಿ ವಿಭಾಗದ ಅಭಿಯಂತರ ಎಸ್.ಎಸ್. ಜಾಗೀರದಾರ. ಬಿ.ಇ. ಶರಣಗೌಡ ಗುಂಡಗುರ್ತಿ, ಗುಂಡಪ್ಪ ತುಂಬಗಿ, ಗುರುಬಸಯ್ಯ ಅಣಬಿ, ಬಸವರಾಜ ಚನ್ನೂರ್, ಶಿವುಕುಮಾರ ತಳವಾರ, ಹಣಮಂತ್ರಾಯಗೌಡ ರಾಕಂಗೇರ, ಶರಣಪ್ಪ ಮುಂಡಾಸ, ಅಶೋಕರೆಡ್ಡಿ ಗುಂಡಗುರ್ತಿ, ಭೀಮರೆಡ್ಡಿ ಬೂದನೂರ ಸೇರಿದಂತೆ ಇತರರಿದ್ದರು.