Advertisement

ಶಹಾಬಾದ್ ಇಎಸ್ ಐ ಆಸ್ಪತ್ರೆ ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತನೆ: ಮುರುಗೇಶ್ ನಿರಾಣಿ

04:22 PM May 12, 2021 | Team Udayavani |

ಕಲಬುರಗಿ: ಕೋವಿಡ್ ಸೋಂಕಿತರಿಗೆ ಸಕಾಲದಲ್ಲಿ ಸೂಕ್ತ ವೈದ್ಯಕೀಯ ‌ಚಿಕಿತ್ಸೆ ನೀಡಲು ಅನುಕೂಲವಾಗುವಂತೆ ಕಲಬುರಗಿ ಜಿಲ್ಲೆ ಶಹಾಬಾದ್ ನಲ್ಲಿ  ಶಿಥಿಲಾವಸ್ಥೆಯಲ್ಲಿರುವ ಇಎಸ್ ಐ ಆಸ್ಪತ್ರೆಗೆ ಅತ್ಯಾಧುನಿಕ ಸೌಲಭ್ಯ ಕಲ್ಪಿಸಿ ‘ಕೋವಿಡ್ ಕೇರ್ ಸೆಂಟರ್’ನ್ನಾಗಿ ಪರಿವರ್ತಿಸಲು ತೀರ್ಮಾನಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ಆರ್ ನಿರಾಣಿ ಹೇಳಿದರು.

Advertisement

ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ಆರ್ ನಿರಾಣಿ ಅಧಿಕಾರಿಗಳ ಜೊತೆ ಚರ್ಚೆಸಿ ಕೂಡಲೇ  ಶಹಾಬಾದ್ ಪಟ್ಟಣವು ವಾಡಿ ರಸ್ತೆಯಲ್ಲಿರುವ ಇಎಸ್ ಐ ಆಸ್ಪತ್ರೆಯನ್ನು ಕೋವಿಡ್ ಕೇರ್ ಕೇಂದ್ರವಾಗಿ ಪರಿವರ್ತಿಸಲು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚನೆ  ನೀಡಿದ್ದಾರೆ.

ಜಿಲ್ಲಾಧಿಕಾರಿ ವಿ.ವಿ ಜ್ಯೋತ್ಸ್ನಾ, ಶಹಾಬಾದ್  ತಹಸೀಲ್ದಾರ್ ಸುರೇಶ್ ವರ್ಮಾ, ಪುರಸಭೆ ಆಯುಕ್ತ ಕೆ.ಗುರುಲಿಂಗಪ್ಪ, ಕಂದಾಯ, ಮತ್ತು ಆರೋಗ್ಯ ಇಲಾಖೆ  ಮತ್ತಿತರ ಅಧಿಕಾರಿಗಳ ಜೊತೆ ಚರ್ಚಿಸಿ ಅತೀ ಶೀಘ್ರದಲ್ಲಿ ಕಾರ್ಯಾರಂಭ ಮಾಡುವಂತೆ ಪೂರ್ವ ಸಿದ್ಧತೆಗಳನ್ನು ಕೈಗೊಳ್ಳಬೇಕೆಂದು ಸಚಿವರು ನಿರ್ದೇಶಕ ನೀಡಿದ್ದಾರೆ.

ಸಚಿವರು ಸೂಚನೆ ಕೊಟ್ಡ ಬೆನ್ನಲ್ಲೇ ಬುಧವಾರ  ಅಧಿಕಾರಿಗಳು ಸ್ಥಳ ಪರಿಶೀಲಿನೆ ಮಾಡಿದ್ದಾರೆ. ಭಾನುವಾರ ಖುದ್ದು ಸಚಿವ ನಿರಾಣಿ ಅವರೇ ಶಹಾಬಾದ್ ಪಟ್ಟಣಕ್ಕೆ ಭೇಟಿ ನೀಡಲಿದ್ದಾರೆ.

ಆಸ್ಪತ್ರೆಯಲ್ಲಿ ಬೆಳೆದು ನಿಂತಿರುವ ಗಿಡ-ಗಂಟೆಗಳು, ಬಿರುಕು ಬಿಟ್ಟಿರುವ ಗೋಡೆಗಳು, ಕೈಕೊಟ್ಟಿರುವ ವಿದ್ಯುತ್ ಸಂಪರ್ಕ, ಹಾಳಾಗಿರುವ ಬೆಡ್‍ಗಳು, ಚಿಕಿತ್ಸಾ ಕೊಠಡಿ, ರೋಗಿಗಳು ತಂಗುವ ಕೊಠಡಿಗಳು, ಶೌಚಾಲಯ, ಅಡುಗೆ ಮನೆ, ಸ್ನಾನದ ಕೋಣೆ ಸೇರಿದಂತೆ ಎಲ್ಲವನ್ನೂ ಸರಿಪಡಿಸಿ  ಸಕಲ ಸವಲತ್ತುಗಳನ್ನು ಕಲ್ಪಿಸಬೇಕೆಂದು ಜಿಲ್ಲಾಡಳಿತಕ್ಕೆ ಸಚಿವರು ತಿಳಿಸಿದ್ದಾರೆ.

Advertisement

ಕೋವಿಡ್ ಸೋಂಕಿತರಿಗೆ ಅಗತ್ಯವಿರುವ ವೈದ್ಯಕೀಯ ಸೌಲಭ್ಯಗಳನ್ನು ಈ ಆಸ್ಪತ್ರೆಯಲ್ಲಿ ಕಲ್ಪಿಸಬೇಕು. ಹಾಸಿಗೆ, ವೆಂಟಿಲೇಟರ್, ಆಕ್ಸಿಜನ್ ಪೂರೈಕೆ, ಕುಡಿಯುವ ನೀರು, ಅಡುಗೆ ಮನೆ, ಶೌಚಾಲಯ ಸೇರಿದಂತೆ ಆಧುನಿಕ ಆಸ್ಪತ್ರೆಗೆ ಇರಬೇಕಾದ ಎಲ್ಲಾ ಮೂಲ ಸೌಕರ್ಯಗಳನ್ನೂ ಕಲ್ಪಿಸಬೇಕು. ಇದು ಸಮರೋಪಾದಿಯಲ್ಲಿ ನಡೆಯಬೇಕೆಂದೂ ಸೂಚಿಸಿದ್ದಾರೆ.

ಇದನ್ನೂ ಓದಿ : ಕೋವಿಡ್-19 ಸೋಂಕಿಗೆ ಮಾಜಿ ಕ್ರಿಕೆಟಿಗ ಆರ್.ಪಿ.ಸಿಂಗ್ ತಂದೆ ನಿಧನ

ಎಷ್ಟು ಸಾಧ್ಯವೋ ಅಷ್ಟು ಬೇಗ ಕೋವಿಡ್ ಸೆಂಟರ್ ಕಾರ್ಯಾರಂಭ ಮಾಡಬೇಕು. ಅಧಿಕಾರಿಗಳು ಇಲ್ಲದ ಸಬೂಬು ಹೇಳುವುದು, ಕಾರಣ ಕೊಟ್ಟು ವಿಳಂಬ ಮಾಡುವುದು, ಅನಗತ್ಯವಾಗಿ ಅಸಡ್ಡೆ ತೋರಿದರೆ ಅಂತಹವರ ಮೇಲೆ ಶಿಸ್ತುಕ್ರಮ ಜರುಗಿಸುವುದಾಗಿಯೂ ಎಚ್ಚರಿಕೆ ಕೊಟ್ಟಿದ್ದಾರೆ.

ಇಎಸ್‍ಐ ಆಸ್ಪತ್ರೆಯು ನಮಗೆ ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತನೆಯಾದರೆ ನೂರಾರು ಸಂಖ್ಯೆಯ ಸೋಂಕಿತರಿಗೆ  ಇಲ್ಲಿ ಚಿಕಿತ್ಸೆ ನೀಡಬಹುದು. ಈಗ ಜಿಲ್ಲೆಯಲ್ಲಿ ಬೆಡ್ ಸಿಗದೆ ಸೋಂಕಿತರು ಪರದಾಡುತ್ತಿದ್ದಾರೆ.  ಹೀಗಾಗಿ ಪಾಳು ಬಿದ್ದಿರುವ ಆಸ್ಪತ್ರೆಗೆ ಆಧುನಿಕ ಸ್ಪರ್ಶ ನೀಡಿ ಭವಿಷ್ಯದಲ್ಲಿಯೂ ಬಳಕೆ ಮಾಡಿಕೊಳ್ಳುವ ಯೋಜನೆ ಸಚಿವರದ್ದಾಗಿದೆ.

ಆಸ್ಪತ್ರೆಯ ಹಿನ್ನೆಲೆ:  1994ರಲ್ಲಿ ಶಹಾಬಾದ್ ಪಟ್ಟಣದಲ್ಲಿ ಕಾರ್ಮಿಕರಿಗಾಗಿಯೇ ಇಎಸ್‍ಐ ಆಸ್ಪತ್ರೆಯನ್ನು ನಿರ್ಮಾಣ ಮಾಡಲಾಗಿತ್ತು. ಪ್ರಾರಂಭದಲ್ಲಿ ಈ ಆಸ್ಪತ್ರೆಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಜಿಲ್ಲೆಯ ನಾನಾ ಭಾಗಗಳಿಂದ ಪ್ರತಿದಿನ ನೂರಾರು ಸಂಖ್ಯೆಯಲ್ಲಿ ಕಾರ್ಮಿಕರು, ಜನಸಾಮಾನ್ಯರು ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯುತ್ತಿದ್ದರು.

ನುರಿತ ವೈದ್ಯರು ಉತ್ತಮ ಚಿಕಿತ್ಸೆ ಕೊಡುತ್ತಿದ್ದರಿಂದ ಇದೊಂದು ಉತ್ತಮ ಇಎಸ್‍ಐ ಆಸ್ಪತ್ರೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು. ಆಸ್ಪತ್ರೆ ಸುತ್ತಮುತ್ತ ಸಿಮೆಂಟ್ ಫ್ಯಾಕ್ಟರಿಗಳು ಇದ್ದವು. ಕಾಲಕ್ರಮೇಣ ಈ ಕಾರ್ಖಾನೆಗಳು ಮಹಾರಾಷ್ಟ್ರ, ಆಂಧ್ರ ಪ್ರದೇಶ, ತೆಲಂಗಾಣ ರಾಜ್ಯಗಳಿಗೆ ಸ್ಥಳಾಂತರಗೊಂಡರೆ, ಇನ್ನೂ ಕೆಲವು ಕಾರ್ಖಾನೆಗಳು ಬೇರೆ ಬೇರೆ ಕಾರಣಗಳಿಂದ ಸ್ಥಗಿತಗೊಂಡವು.

ಹೀಗೆ ಕಾರ್ಖಾನೆ ಸ್ಥಗಿತಗೊಂಡಿದ್ದರಿಂದ ಈ ಆಸ್ಪತ್ರೆಗೆ ದಿನದಿಂದ ದಿನಕ್ಕೆ ಕಾರ್ಮಿಕರು ಬರುವ ಸಂಖ್ಯೆ ಕಡಿಮೆಯಾಗುತ್ತ ಕೊನೆಗೊಂದು ದಿನ ಮುಚ್ಚುವ ಹಂತಕ್ಕೆ ಬಂದಿತು. ಈಗ ಪಾಳು ಬಿದ್ದಿರುವ ಆಸ್ಪತ್ರೆಗೆ ಆಧುನಿಕ ಸ್ಪರ್ಶ ನೀಡಿ ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತನೆ ಮಾಡಲು ಸಚಿವ ನಿರಾಣಿ ಮುಂದಾಗಿರುವುದು ಆಶಾದಾಯಕ ಬೆಳವಣಿಗೆಯಾಗಿದೆ

Advertisement

Udayavani is now on Telegram. Click here to join our channel and stay updated with the latest news.

Next