Advertisement

ಶಾ ಭೇಟಿ ಹಿನ್ನೆಲೆ: ಬಿಜೆಪಿಯಲ್ಲಿ ಕಾರ್ಯ ಚಟುವಟಿಕೆ ಬಿರುಸು

04:29 PM Mar 24, 2018 | |

ಶಿವಮೊಗ್ಗ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಅಮಿತ್‌ ಶಾ ಪ್ರಥಮ ಬಾರಿಗೆ ಜಿಲ್ಲೆಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಪಕ್ಷದಲ್ಲಿ ಕಾರ್ಯಚಟುವಟಿಕೆ ಬಿರುಸುಗೊಂಡಿದೆ.

Advertisement

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಎಸ್‌. ರುದ್ರೇಗೌಡ ಮಾತನಾಡಿ, ಮುಂಬರುವ ವಿಧಾನಸಭಾ ಚುನಾವಣೆಗೆ ಪಕ್ಷ ಸಿದ್ಧತೆ ನಡೆಸಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಮಾ.26ರಂದು ತೀರ್ಥಹಳ್ಳಿ ಹಾಗೂ ಶಿವಮೊಗ್ಗಕ್ಕೆ ಆಗಮಿಸಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಅಂದು ಬೆಳಗ್ಗೆ ಬೆಂಗಳೂರಿಗೆ ಆಗಮಿಸುವ ಅಮಿತ್‌ ಶಾ, ನಂತರ ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದು ತಿಪಟೂರಿಗೆ ಆಗಮಿಸಿ ಅಲ್ಲಿ ತೆಂಗು ಬೆಳೆಗಾರರ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ನಂತರ ಮಧ್ಯಾಹ್ನ 1.10ಕ್ಕೆ ತೀರ್ಥಹಳ್ಳಿಗೆ ಆಗಮಿಸುವ ಅವರು, 1.20ಕ್ಕೆ ಕುಪ್ಪಳ್ಳಿ ಕವಿಶೈಲಕ್ಕೆ ಭೇಟಿ ನೀಡಿ ರಾಷ್ಟ್ರಕವಿ ಕುವೆಂಪು ಸ್ಮಾರಕ ವೀಕ್ಷಣೆ ನಡೆಸುವರು. ಮಧ್ಯಾಹ್ನ 2.45 ರಿಂದ 3.45ರವರೆಗೆ ಸಾರ್ವಜನಿಕ ಕ್ರೀಡಾಂಗಣದಲ್ಲಿ ನಡೆಯುವ ಅಡಿಕೆ ಬೆಳೆಗಾರರ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಬಾಳೆಬೈಲಿನ ನಂದಿತಾ ಕುಟುಂಬದವರನ್ನು ಭೇಟಿ ಮಾಡಲಿದ್ದಾರೆ ಎಂದು ತಿಳಿಸಿದರು.

ರೋಡ್‌ ಶೋ: ಸಂಜೆ 4.30ಕ್ಕೆ ಶಿವಮೊಗ್ಗಕ್ಕೆ ಆಗಮಿಸುವ ಅಮಿತ್‌ ಶಾ, ರಾಮಣ್ಣ ಶ್ರೇಷ್ಠಿ ಪಾರ್ಕ್‌ನಿಂದ ಗೋಪಿ ವೃತ್ತದವರೆಗೆ ಹಮ್ಮಿಕೊಂಡಿರುವ ರೋಡ್‌ ಶೋನಲ್ಲಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು. ರಾಮಣ್ಣ ಶ್ರೇಷ್ಠಿ ಪಾರ್ಕ್‌ನಿಂದ ಪ್ರಾರಂಭವಾಗುವ ರೋಡ್‌ ಶೋ ಗಾಂಧಿ ಬಜಾರ್‌, ಶಿವಪ್ಪ ನಾಯಕ ವೃತ್ತ, ನೆಹರೂ ರಸ್ತೆಯಲ್ಲಿ ಸಾಗಲಿದೆ. ನಂತರ ಗೋಪಿ ವೃತ್ತದಲ್ಲಿ ಸಮಾಪಣೆಗೊಳ್ಳಲಿದೆ. ಅಲ್ಲಿ ಅಮಿತ್‌ ಶಾ, ಬಿ.ಎಸ್‌. ಯಡಿಯೂರಪ್ಪ ಹಾಗೂ ಕೆ.ಎಸ್‌. ಈಶ್ವರಪ್ಪ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದರು.

Advertisement

ರೋಡ್‌ ಶೋನಲ್ಲಿ ಸುಮಾರು 25 ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಶಿವಪ್ಪನಾಯಕ ವೃತ್ತದಿಂದ ಸುಮಾರು 4 ಸಾವಿರ ಮಹಿಳಾ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
 
ಸಂವಾದ ಕಾರ್ಯಕ್ರಮ: ನಂತರ ಸಂಜೆ 6.20ರಿಂದ ನಗರದ ಕುವೆಂಪು ರಂಗಮಂದಿರದಲ್ಲಿ ಜಿಲ್ಲೆಯ ವಾಣಿಜ್ಯೋದ್ಯಮಿಗಳು, ಕೈಗಾರಿಕೋದ್ಯಮಿಗಳು, ವ್ಯಾಪಾರಸ್ಥರು, ವೃತ್ತಿಪರರೊಂದಿಗೆ ನಡೆಯುವ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಸುಮಾರು 1 ಸಾವಿರ ಜನ ಸಂವಾದದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.

ಶ್ರೀಗಳ ಭೇಟಿ: ರಾತ್ರಿ 7.30ಕ್ಕೆ ಬೆಕ್ಕಿನ ಕಲ್ಮಠಕ್ಕೆ ಭೇಟಿ ನೀಡಿ ಅಲ್ಲಿ ಜಿಲ್ಲೆಯ ಸಾಧುಸಂತರೊಂದಿಗೆ ಸಂವಾದ ನಡೆಸಲಿದ್ದಾರೆ. ಶ್ರೀಗಳ ಆಶೀರ್ವಾದವನ್ನು ಪಡೆಯಲಿದ್ದಾರೆ. ನಂತರ ಕೆ.ಎಸ್‌. ಈಶ್ವರಪ್ಪರವರ ನಿವಾಸದಲ್ಲಿ ಭೋಜನಕೂಟದಲ್ಲಿ ಭಾಗವಹಿಸಿ ಪ್ರವಾಸಿ ಮಂದಿರದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಮರುದಿನ ಬೆಳಗ್ಗೆ ದಾವಣಗೆರೆ ಜಿಲ್ಲೆಗೆ ಭೇಟಿ ನೀಡಲಿದ್ದಾರೆ ಎಂದರು.

ಎಲ್ಲಾ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ವಿಧಾನ ಪರಿಷತ್‌ ವಿಪಕ್ಷ ನಾಯಕ ಕೆ.ಎಸ್‌.ಈಶ್ವರಪ್ಪ ಭಾಗವಹಿಸಲಿದ್ದಾರೆ ಎಂದರು.  ಸಚಿವರ ಭೇಟಿ: ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಮನೋಜ್‌ ಸಿನ್ಹಾ ಮಾ.24 ಹಾಗೂ 25ರಂದು ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಲಿದ್ದು, 24ರಂದು ಮುಂಜಾನೆ ರೈಲಿನಲ್ಲಿ ಆಗಮಿಸುವ ಸಚಿವರು ಸಾಗರ, ಸೊರಬ ಹಾಗೂ ಶಿಕಾರಿಪುರಕ್ಕೆ ಭೇಟಿ ನೀಡಿ ವಿವಿಧ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. ಗೋಷ್ಠಿಯಲ್ಲಿ ಮುಖಂಡರಾದ ಕೆ.ಜಿ. ಕುಮಾರಸ್ವಾಮಿ, ಎಸ್‌.ಎನ್‌. ಚನ್ನಬಸಪ್ಪ, ಬಿಳಕಿ ಕೃಷ್ಣಮೂರ್ತಿ, ಎಸ್‌. ಜ್ಞಾನೇಶ್ವರ್‌, ಡಿ.ಎಸ್‌. ಅರುಣ್‌, ಬಿ.ಆರ್‌. ಮಧುಸೂಧನ್‌, ಅನಿತಾ ರವಿಶಂಕರ್‌, ರತ್ನಾಕರ ಶೆಣೈ, ಹಿರಣ್ಣಯ್ಯ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next