ಮುಂಬಯಿ: ಸೂಪರ್‌ಸ್ಟಾರ್ ಶಾರುಖ್ ಖಾನ್ ಸೋಮವಾರ ತಮ್ಮ ಮುಂಬರುವ ಬಹುನಿರೀಕ್ಷಿತ “ಜವಾನ್” ಚಿತ್ರದ ನಾಯಕಿ ನಯನತಾರಾ ಅವರ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದು, ಅವರ ಪಾತ್ರವನ್ನು “ಚಂಡಮಾರುತದ ಮೊದಲು ಬರುವ ಗುಡುಗು” ಎಂದು
ಶೀರ್ಷಿಕೆ ನೀಡಿ ಕುತೂಹಲ ಮೂಡಿಸಿದ್ದಾರೆ.
“ಕೋಲಮಾವು ಕೋಕಿಲ”, “ಗಜಿನಿ” ಮತ್ತು “ನೆಟ್ರಿಕನ್” ನಂತಹ ತಮಿಳು ಚಲನಚಿತ್ರಗಳ ಮೂಲಕ ಖ್ಯಾತಿಯ ಉತ್ತುಂಗಕ್ಕೇರಿದ ಬಹುಭಾಷಾ ನಟಿ ನಯನತಾರಾ ಅಟ್ಲೀ ನಿರ್ದೇಶನದ ಪ್ಯಾನ್-ಇಂಡಿಯಾ ಸಿನಿಮಾ “ಜವಾನ್” ನಲ್ಲಿ ಪೋಲೀಸ್ ಪಾತ್ರದಲ್ಲಿ ನಟಿಸಿದ್ದಾರೆ.
ಶಾರುಖ್ ಅವರು ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಚಿತ್ರದಲ್ಲಿ ನಟಿಯ ಮೊದಲ ನೋಟವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ವಿಜಯ್ ಸೇತುಪತಿ ಕೂಡ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.
ನಿರ್ಮಾಪಕರ ಪ್ರಕಾರ, “ಜವಾನ್” ಒಂದು ಆಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು ಸಮಾಜದಲ್ಲಿನ ತಪ್ಪುಗಳನ್ನು ಸರಿಪಡಿಸಲು ಮುಂದಾದ ವ್ಯಕ್ತಿಯ ಭಾವನಾತ್ಮಕ ಪ್ರಯಾಣದ ಕಥೆಯಾಗಿದೆ.
ಚಿತ್ರದಲ್ಲಿ ದೀಪಿಕಾ ಪಡುಕೋಣೆ ವಿಶೇಷ ಪಾತ್ರದಲ್ಲಿ ನಟಿಸಿದ್ದು, ಸನ್ಯಾ ಮಲ್ಹೋತ್ರಾ, ಪ್ರಿಯಾಮಣಿ, ಗಿರಿಜಾ ಓಕ್, ಸಂಜೀತಾ ಭಟ್ಟಾಚಾರ್ಯ, ಲೆಹರ್ ಖಾನ್, ಆಲಿಯಾ ಖುರೇಷಿ, ರಿಧಿ ಡೋಗ್ರಾ, ಸುನಿಲ್ ಗ್ರೋವರ್ ಮತ್ತು ಮುಖೇಶ್ ಛಾಬ್ರಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ರೆಡ್ ಚಿಲ್ಲಿಸ್ ಎಂಟರ್ಟೈನ್ಮೆಂಟ್ ಪ್ರಸ್ತುತಪಡಿಸುತ್ತಿರುವ “ಜವಾನ್” ಚಿತ್ರವನ್ನು ಶಾರುಖ್ ಪತ್ನಿ ಗೌರಿ ಖಾನ್ ನಿರ್ಮಿಸಿದ್ದಾರೆ ಮತ್ತು ಗೌರವ್ ವರ್ಮಾ ಸಹ-ನಿರ್ಮಾಣ ಮಾಡಿದ್ದಾರೆ.ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಸೆಪ್ಟೆಂಬರ್ 7 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.