ಬೆಂಗಳೂರು: ಎಂಎಸ್ ಧೋನಿ ಅವರು ಐಪಿಎಲ್‌ನ ಅತ್ಯಂತ ಯಶಸ್ವಿ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಆಗಿರುವ ಧೋನಿ ಚೆನ್ನೈ ಸೂಪರ್ ಕಿಂಗ್ಸ್‌ನ ನಾಯಕತ್ವ ವಹಿಸಿದ ವೇಳೆ ಎರಡು ಬಾರಿ ಐಪಿಎಲ್ ಮತ್ತು ಚಾಂಪಿಯನ್ಸ್ ಲೀಗ್ ಟ್ವೆಂಟಿ20 ಕೂಟದ ಪ್ರಶಸ್ತಿಯನ್ನು ಜಯಿಸಿದ್ದರು. ಧೋನಿ ಅವರ ತಂಡವನ್ನು ಮುನ್ನಡೆಸುವ ಸಾಮರ್ಥ್ಯ ಮತ್ತು ನಿಖರ ಪಂದ್ಯಗಳಲ್ಲಿ ಪಂದ್ಯವನ್ನು ಗೆಲ್ಲಿಸಿಕೊಡುವಲ್ಲಿ ಸಮರ್ಥರಾಗಿರುವ ಅವರು ಚೆನ್ನೈ ತಂಡವನ್ನು ಐಪಿಎಲ್‌ನ ಪ್ರಭಾವಿ ತಂಡವಾಗಿ ರೂಪಿಸಲು ನೆರವಾಗಿದ್ದರು. ಚೆನ್ನೈಗೆ ಎರಡು ವರ್ಷಗಳ ನಿಷೇಧ ಹೇರಿದ ಬಳಿಕ ಧೋನಿ ಅವರ ಸೇವೆಯನ್ನು ರೈಸಿಂಗ್ ಪುಣೆ ಸೂಪರ್‌ಜೈಂಟ್ ಪಡೆದುಕೊಂಡಿತು. ಆದರೆ ಪುಣೆ ನಾಯಕರಾಗಿ ಮೊದಲ ಋತುವಿನಲ್ಲಿ ಮಹೀ ಅಮೋಘ ಆಟ ಪ್ರದರ್ಶಿಸಲು ವಿಫಲರಾಗಿದ್ದರು. ಈ ಕಾರಣಕ್ಕಾಗಿ ಈ ಬಾರಿಯ ಐಪಿಎಲ್ ಆರಂಭಕ್ಕೆ ಮೊದಲೇ ನಾಯಕತ್ವವನ್ನು ಸ್ಟೀವನ್ ಸ್ಮಿತ್‌ಗೆ ವಹಿಸಿಕೊಡಲಾಗಿತ್ತು.
ಸದ್ಯದ ಸ್ಥಿತಿಯಲ್ಲಿ ಪುಣೆ ಮತ್ತು ಗುಜರಾತ್ ಲಯನ್ಸ್‌ನ ಭವಿಷ್ಯ ಏನೆಂಬುದು ಯಾರಿಗೂ ತಿಳಿದಿಲ್ಲ. ಈ ಎರಡು ತಂಡಗಳು ಚೆನ್ನೈ ಮತ್ತು ರಾಜಸ್ಥಾನ್ ರಾಯಲ್ಸ್ ಬದಲಿಗೆ ಐಪಿಎಲ್ ಕೂಟಕ್ಕೆ ಸೇರಿಸಲ್ಪಟ್ಟಿತ್ತು. ಚೆನ್ನೈ ಮತ್ತು ರಾಜಸ್ಥಾನ ಮುಂದಿನ ಐಪಿಎಲ್‌ಗೆ ಮರಳುವ ಕಾರಣ ಈ ಎರಡು ತಂಡಗಳಿಗೆ ಆಟಗಾರರನ್ನು ಆಯ್ಕೆ ಮಾಡಲು ಬಿಸಿಸಿಐ ಯಾವ ವಿಧಾನ ಅನುಸರಿಸುತ್ತದೆ ಎಂಬುದನ್ನು ನೋಡಬೇಕಾಗಿದೆ. ಹರಾಜಿನ ಮೂಲಕ ಧೋನಿ ಅವರು ಚೆನ್ನೈಗೆ ಸೇರುತ್ತಾರಾ ಎಂಬ ಪ್ರಶ್ನೆಯನ್ನು ಕ್ರಿಕೆಟ್ ಪ್ರೇಮಿಗಳು ಇದೀಗ ಕೇಳುತ್ತಿದ್ದಾರೆ.
ಬಾಳ್ವೆಯ ಈ ಹಂತದಲ್ಲಿಯೂ ಧೋನಿ ಜತೆ ಒಪ್ಪಂದ ಮಾಡಿಕೊಳ್ಳಲು ಪ್ರತಿಯೊಂದು ಫ್ರಾಂಚೈಸಿ ಮಾಲಕರು ಮುಂದಾಗಲಿರುವುದರಲ್ಲಿ ಯಾವುದೇ ಸಂಶಯವಿಲ್ಲ. ಕೋಲ್ಕತಾ ನೈಟ್‌ರೈಡರ್ ಸಹ ಮಾಲಕ ಶಾರೂಖ್ ಖಾನ್ ಇದಕ್ಕೆ ಹೊರತಾಗಿಲ್ಲ. ಧೋನಿ ಅವರನ್ನು ಖರೀದಿಸಲು ಕೆಕೆಆರ್‌ಗೆ ಆಸಕ್ತಿ ಇದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಶಾರೂಖ್ ಅವರು ಧೋನಿ ಅವರನ್ನು ಖರೀದಿಸಲು ನನ್ನ ಪೈಜಾಮವನ್ನು ಮಾರಾಟ ಮಾಡಲು ಸಿದ್ಧನಿದ್ದೇನೆ. ಆದರೆ ಅವರು ಹರಾಜಿನಲ್ಲಿ ಲಭ್ಯವಿದ್ದರೆ ಇದೆಲ್ಲ ಸಾಧ್ಯ ಎಂದರು. ಈ ಬಾರಿಯ ಐಪಿಎಲ್‌ನಲ್ಲಿ ಧೋನಿ ಪ್ರಚಂಡ ಬ್ಯಾಟಿಂಗ್ ಪ್ರದರ್ಶಿಸಿಲ್ಲ. ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಅಜೇಯ 61 ರನ್ ಸಿಡಿಸಿದ್ದರಿಂದ ಪುಣೆ ರೋಚಕ ಸೆಣಸಾಟದಲ್ಲಿ ಜಯ ಸಾಧಿಸಲು ಅವರು ನೆರವಾಗಿದ್ದರು. ಉಳಿದಂತೆ ಅವರ ಬ್ಯಾಟಿಂಗ್ ನೀರಸವಾಗಿತ್ತು.