ಕೋಲ್ಕತ್ತಾ: ಬಾಲಿವುಡ್ ನಟ ಶಾರುಖ್ ಖಾನ್ ಅವರ ಅಪಾರ ಅಭಿಮಾನಿಗಳಲ್ಲಿ ಒಬ್ಬರಾಗಿರುವ, ಮಾರಣಾಂತಿಕ ಕ್ಯಾನ್ಸರ್ ನಿಂದ ಬಳಲುತ್ತಿರುವ ಶಿವಾನಿ ಚಕ್ರವರ್ತಿ ಎಂಬ ವೃದ್ಧೆಯ ಕೊನೆಯ ಆಸೆಯನ್ನು ಶಾರುಖ್ ಅವರು ಪೂರ್ತಿಗೊಳಿಸಿದ್ದಾರೆ.
ಪಶ್ಚಿಮ ಬಂಗಾಳದ ನಾರ್ತ್ 24 ಪರಗಣ ಜಿಲ್ಲೆಯ 60 ವರ್ಷದ ವೃದ್ಧೆ ಶಿವಾನಿ ಚಕ್ರವರ್ತಿ ಕಿಂಗ್ ಖಾನ್ ಅವರ ಬಹುದೊಡ್ಡ ಅಭಿಮಾನಿ. ಅವರಿಗೆ ನಡೆಯಲು ಆಗದೇ ಇದ್ದರೂ, ನಿತ್ಯ ಶಾರುಖ್ ಅವರ ಧ್ಯಾನವನ್ನೇ ಮಾಡಿಕೊಂಡು, ಅವರನ್ನು ಒಮ್ಮೆಯಾದರೂ ಭೇಟಿ ಆಗಬೇಕೆಂದುಕೊಂಡಿದ್ದರು.
ಹೌದು ಶಿವಾನಿ ಚಕ್ರವರ್ತಿ ಶಾರುಖ್ ಖಾನ್ ಅವರ ದೊಡ್ಡ ಅಭಿಮಾನಿ. ಅವರ ಎಲ್ಲಾ ಸಿನಿಮಾವನ್ನು ನೋಡಿದ್ದಾರೆ. ಎದ್ದು ನಡೆಯಲು ಕಷ್ಟವಾದರೂ ಇತ್ತೀಚೆಗೆ ತೆರೆಕಂಡ ʼಪಠಾಣ್ʼ ಸಿನಿಮಾವನ್ನು ಥಿಯೇಟರ್ ಗೆ ಹೋಗಿ ನೋಡಿದ್ದಾರೆ. 2000 ಇಸವಿಯಿಂದ ಇದುವರಗೆ ಬಂದ ಅವರ ಎಲ್ಲಾ ಸಿನಿಮಾದ ಪೋಸ್ಟರ್ ಗಳನ್ನು ತನ್ನ ಬೆಡ್ ರೂಮ್ ನ ಗೋಡೆಗಳಲ್ಲಿ ಅಂಟಿಸಿ ಇಟ್ಟಿದ್ದಾರೆ. ಶಾರುಖ್ ಖಾನ್ ಅವರು ಕೆಕೆಆರ್ ತಂಡವನ್ನು ಖರೀದಿಸಿದಾಗಿನಿಂದ ಅವರು ಐಪಿಎಲ್ ನಲ್ಲಿ ಕೆಕೆಆರ್ ತಂಡವನ್ನು ಸರ್ಪೋಟ್ ಮಾಡುವುದು ಮಾತ್ರವಲ್ಲದೆ, ಕೆಕೆಆರ್ ನ ಎಲ್ಲಾ ಪಂದ್ಯವನ್ನು ಶಾರುಖ್ ಗಾಗಿ ನೋಡಿದ್ದಾರೆ.
ಇದನ್ನೂ ಓದಿ:ಬಡತನ: ಮಕ್ಕಳ ಕಾಲಿಗೆ ಚಪ್ಪಲಿಯಂತೆ ಪ್ಲ್ಯಾಸ್ಟಿಕ್ ಸುತ್ತಿ ಕೆಲಸಕ್ಕಾಗಿ ಬೀದಿ ಅಲೆದ ತಾಯಿ.!
Related Articles
“ನಾನು ಕೊನೆಯ ದಿನಗಳನ್ನು ಲೆಕ್ಕ ಹಾಕುತ್ತಿದ್ದೇನೆ. ವೈದ್ಯರು ನಾನು ಹೆಚ್ಚು ದಿನ ಬದುಕುವುದಿಲ್ಲ ಎಂದಿದ್ದಾರೆ. ನನ್ನ ಜೀವನದ ಕೊನೆ ಆಸೆ ಎಂದರೆ ಅದು ಶಾರುಖ್ ಅವರನ್ನು ಮುಖತಃ ಭೇಟಿ ಆಗಬೇಕು” ಎಂದು ಶಿವಾನಿ ಚಕ್ರವರ್ತಿ ಹೇಳಿದ್ದರು.
ಈ ಸಂಬಂಧ ಶಿವಾನಿ ಅವರ ಮಗಳು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟನ್ನು ಹಾಕಿಕೊಂಡಿದ್ದರು. ಇದೀಗ ಈ ಪೋಸ್ಟ್ ಗಳು ಶಾರುಖ್ ಅವರ ಗಮನಕ್ಕೆ ಬಂದಿದ್ದು, ಮಾರಣಾಂತಿಕ ಕ್ಯಾನ್ಸರ್ ನಿಂದ ಬಳಲುತ್ತಿರುವ ಶಿವಾನಿ ಚಕ್ರವರ್ತಿ ಶಾರುಖ್ ಖಾನ್ ಅವರು ವಿಡಿಯೋ ಕಾಲ್ ಮಾಡಿ ಮಾತನಾಡಿದ್ದಾರೆ.
ಈ ಬಗ್ಗೆ ಶಿವಾನಿ ಅವರ ಮಗಳು ʼಇಂಡಿಯಾ ಟುಡೇʼ ಜೊತೆ ಮಾತನಾಡಿದ್ದಾರೆ. “ನನ್ನ ತಾಯಿ ಜೊತೆಗೆ ವಿಡಿಯೋ ಕಾಲ್ ನಲ್ಲಿ ಸುಮಾರು 40 ನಿಮಿಷ ಶಾರುಖ್ ಖಾನ್ ಅವರು ಮಾತನಾಡಿದ್ದಾರೆ. ಅವರು ಅಮ್ಮನ ಕಾಯಿಲೆ ಬೇಗ ಗುಣವಾಗಲಿವೆಂದು ವಿಡಿಯೋ ಕಾಲ್ ನಲ್ಲೇ ದುಃಆ ( ಪ್ರಾರ್ಥನೆ) ಯನ್ನು ಮಾಡಿದ್ದಾರೆ. ನಮ್ಮ ಮನೆಗೆ ಹಾಗೂ ನನ್ನ ಮದುವೆಯ ಸಂದರ್ಭದಲ್ಲಿ ಅವರು ಬಂದು ನಮ್ಮ ಮನೆಯಲ್ಲಿ ಊಟ ಮಾಡುತ್ತಾರೆ ಎಂದಿದ್ದಾರೆ. ನನ್ನ ತಾಯಿ ಕ್ಯಾನ್ಸರ್ ನಿಂದ ಹೋರಾಡಲು ಆರ್ಥಿಕವಾಗಿ ಅವರಿಗೆ ಸಹಾಯ ಮಾಡುವುದಾಗಿ ಶಾರುಖ್ ಅವರು ಹೇಳಿದ್ದಾರೆ ಎಂದು ಶಿವಾನಿ ಅವರ ಮಗಳು ಹೇಳಿದ್ದಾರೆ.
ಸದ್ಯ ಶಾರುಖ್ ಖಾನ್ ರಾಜ್ ಕುಮಾರ್ ಹಿರಾನಿ ಅವರ ʼ ಡಂಕಿʼ ಸಿನಿಮಾದ ಶೂಟ್ ನಲ್ಲಿ ಬ್ಯುಸಿಯಾಗಿದ್ದಾರೆ.