ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ 9 ವರ್ಷಗಳು ಪೂರೈಸಿರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಜೂ.10 ಮತ್ತು 11ರಂದು ನಾಲ್ಕು ರಾಜ್ಯಗಳಲ್ಲಿ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಶನಿವಾರ ಅಮಿತ್ ಶಾ ಅವರು ಗುಜರಾತ್‌ನ ಪಟನ್ ಮತ್ತು ಮಹಾರಾಷ್ಟ್ರದ ನಾಂದೇಡ್‌ನಲ್ಲಿ ನಡೆಯುವ ಸಾರ್ವಜನಿಕ ರ್ಯಾಲಿಯಲ್ಲಿ ಭಾಗವಹಿಸಲಿದ್ದಾರೆ.
ಭಾನುವಾರ ತಮಿಳುನಾಡಿನ ವೆಲ್ಲೂರು ಮತ್ತು ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಏರ್ಪಡಿಸಿರುವ ಸಾರ್ವಜನಿಕ ಸಭೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಇತ್ತೀಚೆಗೆ ತೆಲುಗು ದೇಶಂ ಪಾರ್ಟಿ(ಟಿಡಿಪಿ)ಯ ಅಧ್ಯಕ್ಷ ಎನ್.ಚಂದ್ರಬಾಬು ನಾಯ್ಡು ಅವರು ನವದೆಹಲಿಯಲ್ಲಿ ಅಮಿತ್ ಶಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.
ಈ ವೇಳೆ ಎನ್‌ಡಿಎ ಜತೆಗೆ ಟಿಡಿಪಿ ಮೈತ್ರಿ ಏರ್ಪಡುವ ಸಾಧ್ಯತೆಗಳ ಬಗ್ಗೆ ಸುದ್ದಿ ಹರಡಿತ್ತು. ಇದೀಗ ವಿಶಾಖಪಟ್ಟಣಕ್ಕೆ ಅಮಿತ್ ಶಾ ಭೇಟಿ ಮತ್ತು ಟಿಡಿಪಿ-ಬಿಜೆಪಿ ಮೈತ್ರಿ ಕುರಿತು ಅವರು ಭಾಷಣದಲ್ಲಿ ಏನು ಮಾತನಾಡಲಿದ್ದಾರೆ ಎಂಬ ಬಗ್ಗೆ ಕುತೂಹಲ ಮೂಡಿದೆ. ಇನ್ನೊಂದೆಡೆ, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ತಿರುಪತಿಯಲ್ಲಿ ನಡೆಯುವ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇದೇ ವೇಳೆ ಅವರು ತಿರುಮಲ ವೆಂಕಟೇಶ್ವರನ ಸನ್ನಿಧಾನಕ್ಕೆ ಭೇಟಿ ನೀಡುತ್ತಿದ್ದಾರೆ.