Advertisement

ಶಾ ಕರುನಾಡ ಜಾಗೃತಿ ಯಾತ್ರೆ, ರೋಡ್‌ ಶೋ

06:30 AM Mar 27, 2018 | Team Udayavani |

ಶಿವಮೊಗ್ಗ: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಪ್ರಥಮ ಬಾರಿಗೆ ಶಿವಮೊಗ್ಗ ಭೇಟಿ ಹಾಗೂ ಮುಂಬರುವ ವಿಧಾನಸಭಾ ಚುನಾವಣೆ 
ಹಿನ್ನೆಲೆಯಲ್ಲಿ ಅವರು ಕೈಗೊಂಡಿರುವ ಕರುನಾಡ ಜಾಗೃತಿ ಯಾತ್ರೆ ಶಿವಮೊಗ್ಗಕ್ಕೆ ಆಗಮಿಸಿದ ವೇಳೆ ಜಿಲ್ಲಾ ಬಿಜೆಪಿಯಿಂದ 
ಹಮ್ಮಿಕೊಂಡಿದ್ದ ರೋಡ್‌ ಶೋನಲ್ಲಿ ಸಾವಿರಾರು ಕಾರ್ಯಕರ್ತರು ಅಮಿತೋತ್ಸಾಹದಿಂದ ಪಾಲ್ಗೊಂಡರು.

Advertisement

ಅಮಿತ್‌ ಶಾ ಸ್ವಾಗತಕ್ಕೆ ಶಿವಮೊಗ್ಗ ನಗರ ಸಿಂಗಾರಗೊಂಡಿತ್ತು. ಎಲ್ಲೆಡೆ ಬಿಜೆಪಿ ಮುಖಂಡರ ಬ್ಯಾನರ್‌, ಬಂಟಿಂಗ್ಸ್‌, ಹೋರ್ಡಿಂಗ್‌ಗಳು, ಬಿಜೆಪಿ ಧ್ವಜ ರಾರಾಜಿಸುತ್ತಿದ್ದು, ನಗರ ಸಂಪೂರ್ಣವಾಗಿ ಕೇಸರಿಮಯವಾಗಿತ್ತು.

ಅಮಿತ್‌ ಶಾ ಸಂಚರಿಸುವ ಬಿ.ಎಚ್‌. ರಸ್ತೆ, ಗಾಂಧಿ ಬಜಾರ್‌ ಮುಖ್ಯರಸ್ತೆ, ಕುವೆಂಪು ರಸ್ತೆ, ಪ್ರವಾಸಿ ಮಂದಿರ ವೃತ್ತ, ಗೋಪಿವೃತ್ತ, ಕುವೆಂಪು ರಂಗಮಂದಿರ ಹಾಗೂ ರಂಗಮಂದಿರದ ಮುಂದಿನ ರಸ್ತೆ, ಹೊಳೆ ಬಸ್‌ ನಿಲ್ದಾಣದ ವೃತ್ತ ಹೀಗೆ ಹಲವು ಕಡೆ ರಸ್ತೆಯನ್ನು ಸಿಂಗಾರ ಮಾಡಲಾಗಿತ್ತು. ಗಾಂಧಿ ಬಜಾರಿನ ಪ್ರತಿಯೊಂದು ಅಂಗಡಿಗಳ ಮುಂದೆ ಕೇಸರಿ ಬಲೂನ್‌ಗಳನ್ನು ಕಟ್ಟಲಾಗಿತ್ತು.

ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ, ಕೇಂದ್ರ ಸಚಿವ ಅನಂತ ಕುಮಾರ್‌, ವಿಧಾನಪರಿಷತ್‌ ವಿಪಕ್ಷ ನಾಯಕ ಕೆ.ಎಸ್‌. ಈಶ್ವರಪ್ಪ,ಜಿಲ್ಲಾಧ್ಯಕ್ಷ ಎಸ್‌. ರುದ್ರೇಗೌಡ, ರಾಷ್ಟ್ರೀಯ ಸಹಸಂಘಟನಾ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌, ವಿಧಾನ ಪರಿಷತ್‌ ಸದಸ್ಯ ಎಂ.ಬಿ. ಭಾನುಪ್ರಕಾಶ್‌ ಮತ್ತಿತರರು ಇದ್ದರು.

ಶಿವಪ್ಪನಾಯಕ ವೃತ್ತಕ್ಕೆ ಪುಷ್ಪಾಲಂಕಾರ: ಗಾಂಧಿ ಬಜಾರ್‌ ಪ್ರವೇಶ ದ್ವಾರದ ಬಳಿಯ ಶಿವಪ್ಪನಾಯಕ ವೃತ್ತವನ್ನು ಗುಲಾಬಿಹೂಗಳಿಂದ ಅಲಂಕರಿಸಲಾಗಿತ್ತು. ಇನ್ನು ಅಮಿತ್‌ ಶಾ ಅವರಿಗೆ ಗಾಂಧಿ ಬಜಾರ್‌ ನಿಂದ ಎಎ ವೃತ್ತದವರೆಗೂ ಕೇಸರಿ ಚೆಂಡುಹೂವಿನ ಪುಷ್ಪವೃಷ್ಟಿ ಮಾಡಲಾಯಿತು. ಇದಕ್ಕಾಗಿ ಸುಮಾರು 3 ಟನ್‌ ಕೇಸರಿ ಚೆಂಡು ಹೂ ತರಿಸಲಾಗಿತ್ತು. ಶಿವಪ್ಪನಾಯಕರ ಪ್ರತಿಮೆಗೆ ಅಮಿತ್‌ ಶಾ ಪುಷ್ಪಮಾಲೆ ಸಮರ್ಪಿಸಿದರು. ರೋಡ್‌ ಶೋ ಸಂಚರಿಸುವ ಮಾರ್ಗದ ಇಕ್ಕೆಲಗಳಲ್ಲಿ ಖಾಕಿ ಸರ್ಪಗಾವಲು ಹಾಕಲಾಗಿತ್ತು.

Advertisement

ಗಾಂಧಿ ಬಜಾರ್‌ ಸಂಪರ್ಕಿಸುವ ರಸ್ತೆಗಳನ್ನು ಬಂದ್‌ ಮಾಡಲಾಗಿತ್ತು. ಬಿಎಚ್‌ ರಸ್ತೆಯಲ್ಲಿ ವಾಹನ ಸಂಚಾರ ಸಂಪೂರ್ಣ ನಿಷೇಧಿಸಲಾಗಿತ್ತು. ರೋಡ್‌ ಶೋದಲ್ಲಿ ಬೈಕ್‌ಗಳಲ್ಲಿ ಪೇಟಾ ಧರಿಸಿದ ಮಹಿಳೆಯರು ಮಿಂಚಿದರೆ, ಮೆರವಣಿಗೆಯುದ್ದಕ್ಕೂ ಜನಪದ ಕಲಾ ತಂಡಗಳು ಮೆರಗು ನೀಡಿದವು.

ಜ್ಞಾನಪೀಠ ಪುರಸ್ಕೃತ ಕುವೆಂಪುರವರ ರಾಮಾಯಣ ದರ್ಶನಂ ರಾಷ್ಟ್ರದಲ್ಲಿಯೇ ಉತ್ಕೃಷ್ಠ ಗ್ರಂಥ. ಅವರ ಕೃತಿಗಳಲ್ಲಿ ವಿವೇಕಾನಂದ ಚಿಂತನೆ ಮತ್ತು ಸಂದೇಶಗಳನ್ನು ಪ್ರತಿಪಾದಿಸಿರುವುದು ಮೆಚ್ಚುವಂತಹ ವಿಚಾರ.ಅವರ ವಿಶ್ವಮಾನವ ಸಂದೇಶ ಸಾರ್ವಕಾಲಿಕ. ಸಿದ್ದರಾಮಯ್ಯ ಸರ್ಕಾರ ಕುವೆಂಪುರವರ ವಿಶ್ವಮಾನವ ತತ್ವದ ಆಶಯದಡಿ ಕಾರ್ಯನಿರ್ವ ಹಿಸುವುದನ್ನು ಮರೆತಿದೆ.
– ಅಮಿತ್‌ ಶಾ,
ಬಿಜೆಪಿ ರಾಷ್ಟ್ರಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next