Advertisement

ಕುರಾನ್‌ ಗ್ರಂಥದಲ್ಲಿಲ್ಲ ಮುಚ್ಚುಮರೆ ಸಂದೇಶ : ಶಫಿ

06:32 PM Mar 19, 2021 | Team Udayavani |

ವಾಡಿ : ಕುರಾನ್‌ ಕೇವಲ ಮುಸಲ್ಮಾನರಿಗೆ ಸೀಮಿತವಾದ ಗ್ರಂಥವಲ್ಲ. ಅದು ಎಲ್ಲ ಜನಸುಮುದಾಯಗಳ ಜೀವನಕ್ಕೆ ಮಾರ್ಗದರ್ಶನ ನೀಡುವ ದೇವವಾಣಿಯಾಗಿದೆ. ಅದರಲ್ಲಿನ ಸಂದೇಶಗಳೆಲ್ಲ ಜನಮುಖೀಯಾಗಿವೆ ಎಂದು ಇಸ್ಲಾಂ ವಿದ್ವಾನ್‌ ಶೇಖ ಶಫಿ ಹೇಳಿದರು.

Advertisement

ಗುರುವಾರ ಪಟ್ಟಣದ ಡಾ| ಬಿ.ಆರ್‌. ಅಂಬೇಡ್ಕರ್‌ ವೃತ್ತದಲ್ಲಿ ಭಾಯ್‌ ಭಾಯ್‌ ಗ್ರೂಪ್‌ ವತಿಯಿಂದ ಏರ್ಪಡಿಸಲಾಗಿದ್ದ ಸಾರ್ವಜನಿಕರಿಗೆ ಕುರಾನ್‌ ಗ್ರಂಥ ಉಚಿತವಾಗಿ ವಿತರಿಸುವ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು. ಒಂದು ಕೋಮಿನ ಹಿತಾಸಕ್ತಿ ಬದಲು ಧರೆಯ ಮೇಲಿನ ಎಲ್ಲ ಜೀವರಾಶಿಗಳಿಗೆ ಮಾನವೀಯತೆ ಬೊಧೀ ಸುವ ಕಾರಣಕ್ಕೆ ಕುರಾನ್‌ ವಿಶ್ವದ ವಿವಿಧ ದೇಶಗಳಲ್ಲಿ ಶ್ರೇಷ್ಠ ದಿವ್ಯ ಗ್ರಂಥ ಎಂದು ಕರೆಯಿಸಿಕೊಂಡಿದೆ ಎಂದರು. ಕುರಾನ್‌ ಪುಟಗಳು ತೆರೆದುಕೊಂಡಿವೆ. ಇಲ್ಲಿ ಧರ್ಮ ದ್ರೋಹಿ ಸಂಶಯಾಸ್ಪದ ಚಿಂತನೆಗಳಿಗೆ ಜಾಗವಿಲ್ಲ.

ಯಾವುದೇ ಧರ್ಮದ ವಿರುದ್ಧ ಹೇಳಿಕೆಗಳಿಲ್ಲ. ಎಲ್ಲರನ್ನೂ ಗೌರವಿಸುವ, ಪ್ರೀತಿಸುವ ಹಾಗೂ ಸಂಕಷ್ಟದಲ್ಲಿ ನೆರವಾಗಬೇಕು ಎನ್ನುವ ಮನುಷ್ಯ ಚಿಂತನೆಗಳಿವೆ. ಪ್ರತಿಯೊಬ್ಬರೂ ಇದನ್ನು ಅಧ್ಯಯನ ಮಾಡುವ ಮೂಲಕ ಮುಕ್ತವಾಗಿ ಚರ್ಚೆ ನಡೆಸಬಹುದು ಎಂದು ಹೇಳಿದರು. ಒಂದೊಂದು ಧರ್ಮಕ್ಕೆ ಒಂದೊಂದು ಸಿದ್ಧಾಂತ, ಚಿಂತನೆಗಳಿರುವ ಹಾಗೆ ಇಸ್ಮಾಂ ಧರ್ಮಕ್ಕೂ ಕುರಾನ್‌ ಎನ್ನುವ ತನ್ನದೇಯಾದ ಧರ್ಮ ಗ್ರಂಥವಿದೆ ಎಂದು ಸಹಜವಾಗಿ ಎಲ್ಲರೂ ಭಾವಿಸಿದ್ದಾರೆ. ಈ ನಕಾರಾತ್ಮಕ ಆಲೋಚನೆಗಳಿಗೆ ವ್ಯತಿರಿಕ್ತವಾಗಿ ಕುರಾನ್‌ ಚಿಂತನೆಗಳಿವೆ ಎನ್ನುವ ಸತ್ಯ ಓದಿದವರಿಗೆ ಮಾತ್ರ ಅರ್ಥವಾಗುತ್ತದೆ ಎಂದರು.

ಬೌದ್ಧ ಸಮಾಜದ ಖಜಾಂಚಿ ಚಂದ್ರಸೇನ ಮೇನಗಾರ, ಹಿರಿಯರಾದ ಸದಾಶಿವ ಕಟ್ಟಿಮನಿ, ಇಸ್ಲಾಂ ವಿದ್ವಾನ್‌ ಶೇಖ ಬದಿಯೂಝಮಾ ಮಾತನಾಡಿದರು. ಮುಖ್ಯಾಧಿ ಕಾರಿ ವಿಠ್ಠಲ ಹಾದಿಮನಿ, ಭಾಯ್‌ ಭಾಯ್‌ ಗ್ರೂಪ್‌ ಅಧ್ಯಕ್ಷ ಶಮಶೀರ್‌ ಅಹ್ಮದ್‌, ಮಹ್ಮದ್‌ ಇರ್ಫಾನ್‌, ಜಾಮಿಯಾ ಮಸೀದಿ ಸಮಿತಿ ಅಧ್ಯಕ್ಷ ಮಹ್ಮದ್‌ ಜಾಫರ್‌, ಡಾ| ಸಂಜಯ ಮುನ್ನೋಳಿ, ಡಾ| ಶಿವಾನಂದ ಇಂಗಳೇಶ್ವರ, ಶೇಖ ಅನ್ವರ್‌ ಖಾನ್‌, ಇಕ್ಬಾಲ್‌ ಆಜಾದ್‌, ಈಶ್ವರ ಅಂಬೇಕರ್‌, ವಿ‍ಠ್ಠಲಸಿಂಗ್‌, ಶರಣಪ್ಪ ವಗ್ಗರ ಹಳಕರ್ಟಿ, ಶರಣಬಸು ಸಿರೂರಕರ, ರಮೇಶ ಬಡಿಗೇರ, ವಿಜಯಕುಮಾರ ಸಿಂಗೆ, ಝಹೂರ್‌ ಖಾನ್‌, ಸಲ್ಮಾನ್‌ ಪಟೇಲ್‌, ಖಾದೀರ್‌, ರಾಜಾ ಪಟೇಲ್‌, ಅಬೀದ್‌, ಇಮ್ರಾನ್‌, ಸೋಹಿಲ್‌, ಆಕಾಶ, ರಾಜು ಕೋಲಿ, ಫ್ರಾಂಕ್ಲೀನ್‌ ಪಾಲ್ಗೊಂಡಿದ್ದರು. ನೂರಾರು ಜನರಿಗೆ ಕನ್ನಡ, ಇಂಗ್ಲಿಷ್‌, ತೆಲಗು, ಮರಾಠಿ ಭಾಷೆಯಲ್ಲಿ ಅನುವಾದವಾದ ಕುರಾನ್‌ ಗ್ರಂಥಗಳನ್ನು ಉಚಿತವಾಗಿ ವಿತರಿಸಲಾಯಿತು

Advertisement

Udayavani is now on Telegram. Click here to join our channel and stay updated with the latest news.

Next