Advertisement

ಹತ್ಯೆ ಕೇಸ್; ಗಲ್ಲುಶಿಕ್ಷೆಗೆ ಗುರಿಯಾದ ಶಬನಂ ಉತ್ತರಪ್ರದೇಶ ಗವರ್ನರ್ ಗೆ ಕ್ಷಮಾದಾನ ಅರ್ಜಿ

12:52 PM Feb 19, 2021 | Team Udayavani |

ನವದೆಹಲಿ: ಉತ್ತರಪ್ರದೇಶದ ಅಮ್ರೋಹಾ ಕೊಲೆ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಶಬನಂ ಕ್ಷಮಾದಾನ ಕೋರಿ ಉತ್ತರಪ್ರದೇಶ ಗವರ್ನರ್ ಆನಂದಿಬೆನ್ ಪಟೇಲ್ ಅವರಿಗೆ ಮನವಿ ಸಲ್ಲಿಸಿರುವುದಾಗಿ ವರದಿ ತಿಳಿಸಿದೆ.

Advertisement

ಇದನ್ನೂ ಓದಿ:402 ಕೋ.ರೂ. ಅಕ್ರಮ ಪತ್ತೆ: ಐಟಿ ದಾಳಿ ವೇಳೆ ಭಾರೀ ಅಕ್ರಮ ಬಯಲು

ಶಬನಂ ಗಲ್ಲಿಗೇರಿಸಲು ಮಥುರಾ ಜೈಲಿನಲ್ಲಿ ಸಿದ್ಧತೆ ನಡೆಯುತ್ತಿರುವ ನಡುವೆಯೇ ಕ್ಷಮಾದಾನ ಕೋರಿ ಗವರ್ನರ್ ಗೆ ಮನವಿ ಸಲ್ಲಿಸಿರುವುದಾಗಿ ವರದಿ ವಿವರಿಸಿದೆ.

ಏನಿದು ಘಟನೆ:

2008ರ ಏಪ್ರಿಲ್ 14ರಂದು ಶಬನಂ ತನ್ನ ಪ್ರಿಯತಮನ ಜೊತೆ ಸೇರಿ ಉತ್ತರಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿದ್ದ ತನ್ನದೇ ಕುಟುಂಬದ ಏಳು ಜನರನ್ನು ಹತ್ಯೆಗೈದಿದ್ದಳು. ಏಳು ತಿಂಗಳ ಮಗು ಸೇರಿದಂತೆ ಏಳು ಮಂದಿಯನ್ನು ನಿರ್ದಯವಾಗಿ ಕೊಚ್ಚಿ ಹತ್ಯೆಗೈದಿದ್ದರು. ಈ ಪ್ರಕರಣದಲ್ಲಿ ಆಕೆಯ ಅಪರಾಧ ಸಾಬೀತಾಗಿದ್ದು, ನ್ಯಾಯಾಲಯ ಗಲ್ಲುಶಿಕ್ಷೆ ವಿಧಿಸಿತ್ತು.

Advertisement

ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಈ ಕೊಲೆ ಪ್ರಕರಣ ನಡೆದು ಐದು ದಿನಗಳ ನಂತರ ಶಬನಂ ಹಾಗೂ ಆಕೆಯ ಪ್ರಿಯಕರ ಸಲೀಂನನ್ನು ಪೊಲೀಸರು ಬಂಧಿಸಿದ್ದರು. ಈ ಸಂದರ್ಭದಲ್ಲಿ ಶಬನಂ ಗರ್ಭಿಣಿಯಾಗಿದ್ದಳು. 2008ರ ಡಿಸೆಂಬರ್ ನಲ್ಲಿ ಶಬನಂ ಗಂಡು ಮಗುವಿಗೆ ಜನ್ಮನೀಡಿದ್ದಳು.

2010ರ ಜುಲೈ 14ರಂದು ಜಿಲ್ಲಾ ಸೆಷನ್ಸ್ ಕೋರ್ಟ್ ಶಬನಂ ಹಾಗೂ ಸಲೀಂಗೆ ಮರಣದಂಡನೆ ಶಿಕ್ಷೆ ವಿಧಿಸಿತ್ತು. ನಂತರ ಇಬ್ಬರು ಸೆಷನ್ಸ್ ಕೋರ್ಟ್ ತೀರ್ಪನ್ನು ಪ್ರಶ್ನಿಸಿ ಅಲಹಾಬಾದ್ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು. ಆದರೆ ಹೈಕೋರ್ಟ್ ಸೆಷನ್ಸ್ ಕೋರ್ಟ್ ತೀರ್ಪನ್ನು ಎತ್ತಿ ಹಿಡಿದಿತ್ತು. ನಂತರ ಇಬ್ಬರು ಹಂತಕರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಸುಪ್ರೀಂಕೋರ್ಟ್ ಕೂಡಾ 2015ರಲ್ಲಿ ಮರಣದಂಡನೆ ಶಿಕ್ಷೆ ಎತ್ತಿಹಿಡಿದಿತ್ತು.

ಎಲ್ಲಾ ಕಾನೂನು ಅವಕಾಶ ಮುಗಿದ ಬಳಿಕ ಶಬನಂ ಕ್ಷಮಾದಾನ ಅರ್ಜಿಯನ್ನು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ತಿರಸ್ಕರಿಸಿದ್ದು, ಈಗ ಗಲ್ಲುಶಿಕ್ಷೆ ವಿಧಿಸುವ ಪ್ರಕ್ರಿಯೆ ಆರಂಭಗೊಂಡಿದೆ. ನಿರ್ಭಯಾ ಹಂತಕರಿಗೆ ಗಲ್ಲುಶಿಕ್ಷೆ ಜಾರಿಗೊಳಿಸಿದ್ದ ವಧಾಕಾರ ಪವನ್ ಜಲ್ಲಾದ್, ಮಥುರಾ ಕಾರಾಗೃಹಕ್ಕೆ ಬಂದು ವಧಾಸ್ಥಾನವನ್ನು ಪರಿಶೀಲಿಸಿ ಹೋಗಿರುವುದಾಗಿ ವರದಿ ತಿಳಿಸಿದೆ.

ಶಬನಂ ಗಲ್ಲುಶಿಕ್ಷೆಗೆ ಜಾರಿಯಾದರೆ ಭಾರತದಲ್ಲಿ ಸ್ವಾತಂತ್ರ್ಯೋತ್ತರ ಕಾಲಘಟ್ಟದಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರಿಗೆ ಮರಣದಂಡನೆ ಜಾರಿಯಾದಂತಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next