ಗಂಗಾವತಿ: ಬಿಎ, ಬಿಕಾಂ, ಬಿಎಸ್ಸಿ ಸೇರಿದಂತೆ ಪದವಿ ಕೋರ್ಸ್ ಪ್ರವೇಶಗಳಿಗೆ ರಾಜ್ಯ ಸರಕಾರ ಪ್ರವೇಶ ಪರೀಕ್ಷೆ ಪದ್ಧತಿ ಜಾರಿ ಮಾಡುವುದನ್ನು ಖಂಡಿಸಿ ಭಾರತ ವಿದ್ಯಾರ್ಥಿ ಪೆಡರೇಷನ್ ವಿದ್ಯಾರ್ಥಿ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದರು.
ಪದವಿ ಓದ ಬಯಸುವ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಪ್ರವೇಶ ಪರೀಕ್ಷೆ ನಡೆಸುವ ಮೂಲಕ ಉನ್ನತ ಶಿಕ್ಷಣ ಕಲಿಯುವವರಿಗೆ ಶಿಕ್ಷಣದಿಂದ ವಂಚಿತರನ್ನಾಗಿ ಮಾಡಲು ಹೊರಟಿರುವ ಯುಜಿಸಿ ಮತ್ತು ಸರಕಾರ ವಿದ್ಯಾರ್ಥಿ ವಿರೋಧಿ ನೀತಿ ಅನುಸರಿಸುತ್ತಿವೆ.
ಬಡ, ಹಿಂದುಳಿದ, ದಲಿತ, ಅಲ್ಪಸಂಖ್ಯಾತರ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಕಲಿಯಲು ಪ್ರವೇಶ ಪರೀಕ್ಷೆ ಕಡ್ಡಾಯ ಮಾಡಿರುವುದು ಸರಿಯಲ್ಲ. ಪ್ರವೇಶ ಪರೀಕ್ಷೆ ಕಡ್ಡಾಯ ಮಾಡಿ ಇನ್ನಷ್ಟು ವ್ಯಾಪಾರೀಕರಣಕ್ಕೆ ಸರಕಾರ ದಾರಿ ಮಾಡಿ ಕೊಟ್ಟಂತಾಗುತ್ತದೆ. ಪರೀಕ್ಷೆಯ ಹೆಸರಿನಲ್ಲಿ ಟ್ಯೂಷನ್ ಲಾಬಿ ಹೆಚ್ಚು ಮಾಡುವ ಮೂಲಕ ಬಡ, ಮಧ್ಯಮ ವರ್ಗದ ವಿದ್ಯಾರ್ಥಿಗಳನ್ನು ಪದವಿ ಶಿಕ್ಷಣದಿಂದ ವಂಚಿಸುವ ಎನ್‌ಇಪಿ ನೀತಿಯ ಭಾಗವಾಗಿ ಜಾರಿಗೊಳಿಸಲು ಮುಂದಾಗಿರುವ ಈ ಅಪಾಯಕಾರಿ ನೀತಿಯನ್ನು ಎಸ್‌ಎಫ್‌ಐ ತೀವ್ರವಾಗಿ ವಿರೋಧಿಸುತ್ತದೆ.
ರಾಜ್ಯದ ಉನ್ನತ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳಿಗೆ ಮಾರಕವಾಗುವ ಈ ಪ್ರವೇಶ ಪರೀಕ್ಷೆ ರದ್ದು ಮಾಡಬೇಕು. ಇಲ್ಲವಾದರೆ ಸರಕಾರ ಖಾಸಗಿಯವರ ಲಾಭಕ್ಕೆ ಶಿಕ್ಷಣ ಕ್ಷೇತ್ರವನ್ನು ಮಾರಾಟ ಮಾಡಿದಂತಾಗುತ್ತದೆ. ಕೂಡಲೇ ಸರಕಾರ ಎಚ್ಚೆತ್ತುಕೊಂಡು ಈಗಿರುವ ಪದವಿ ಪ್ರವೇಶಾತಿ ನಿಯಮವನ್ನು ಮುಂದುವರೆಸಬೇಕು. ಇಲ್ಲವಾದರೆ ವಿದ್ಯಾರ್ಥಿಗಳೊಂದಿಗೆ ಉಗ್ರ ಹೋರಾಟಕ್ಕೆ ಮುನ್ನಡೆಬೇಕಾಗುತ್ತದೆ ಎಂದು ಮನವಿ ಪತ್ರದಲ್ಲಿ ಎಚ್ಚರಿಕೆ ನೀಡಲಾಗಿದೆ.
ಎಸ್‌ಎಫ್‌ಐ ತಾಲೂಕಾಧ್ಯಕ್ಷ ಗ್ಯಾನೇಶ ಕಡಗದ, ಕಾರ್ಯದರ್ಶಿ ಶಿವುಕುಮಾರ, ಸದಸ್ಯರಾದ ಭೀಮೇಶ, ಶರೀಫ್,ನಾಗರಾಜ, ಅಮರೇಶ, ಸಂತೋಷ, ಜಗದೀಶ, ಶರಣಪ್ಪ ರುದ್ರಗೌಡ, ಶಿವುಕುಮಾರ ಹಾಗೂ ವಿದ್ಯಾರ್ಥಿಗಳಿದ್ದರು.