ಬೆಂಗಳೂರು: ಕುಮಾರಸ್ವಾಮಿ ಲೇಔಟ್‌ನಲ್ಲಿ ಕಾರು ಚಲಾಯಿಸಿಕೊಂಡು ಹೊರಟಿದ್ದ ಮಹಿಳೆಯೊಬ್ಬರು ಸರಣಿ ಅಪಘಾತ ಮಾಡಿ, ಕೊನೆಗೆ ಕಾರೊಂದಕ್ಕೆ ಡಿಕ್ಕಿ ಹೊಡೆದಿದ್ದರು. ಈ ಬಗ್ಗೆ ಪ್ರಶ್ನಿಸಿದ ವ್ಯಕ್ತಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯದ ದೂರು ದಾಖಲಿಸಿದ್ದ ಮಹಿಳೆ, ಮರುದಿನ ಬೆಳಗ್ಗೆ ದೂರು ಹಿಂಪಡೆದಿದ್ದಾರೆ.
“”ನನ್ನ ಮೇಲೆ ಯಾರು ದೌರ್ಜನ್ಯವೆಸಗಿಲ್ಲ. ಪ್ರಕರಣ ಮುಂದುವರಿಸಲು ನನಗಿಷ್ಟವಿಲ್ಲ. ಉದ್ವೇಗದಲ್ಲಿ ದೂರು ನೀಡಿದ್ದೆ,” ಎಂದು ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ. ಸಂಗೀತ ತರಗತಿಗೆ ತೆರಳಲೆಂದು ಮಾ.19ರ ಮಧ್ಯಾಹ್ನ 1 ಗಂಟೆಯಲ್ಲಿ ಕಾರಿನಲ್ಲಿ ಹೊರಟಿದ್ದ ಆ ಮಹಿಳೆ, ಕುಮಾರಸ್ವಾಮಿ ಲೇಔಟ್ ರಸ್ತೆಯಲ್ಲಿ 3-4 ವಾಹನಗಳಿಗೆ ಡಿಕ್ಕಿ ಹೊಡೆದಿದ್ದರು.
ಇದರಿಂದ ಗಾಭರಿಗೊಂಡು, ಕಾರಿನ ನಿಯಂತ್ರಣ ಕಳೆದುಕೊಂಡ ಆ ಮಹಿಳೆ ಮುಂಬದಿಯ ಕಾರಿಗೂ ಡಿಕ್ಕಿ ಹೊಡೆದಿದ್ದರು. ಈ ಬಗ್ಗೆ ಕಾರಿನ ಮಾಲೀಕನ ಮಹಿಳೆಯನ್ನು ಪ್ರಶ°ಸಿದ್ದಾರೆ. ಜತೆಗೆ ಸಣ್ಣ ಜಗಳವೂ ಮಾಡಿದ್ದಾರೆ. ಅಲ್ಲಿಂದ ನೇರವಾಗಿ ಕುಮಾರಸ್ವಾಮಿ ಲೇಔಟ್ ಠಾಣೆಗೆ ತೆರಳಿದ್ದ ಮಹಿಳೆ, ಅಪಘಾತ ವೇಳೆ ಸ್ಥಳದಲ್ಲಿದ್ದ ಸಾರ್ವಜನಿಕರು ನನ್ನ ಮೇಲೆ ಮುಗಿಬಿದ್ದರು, ವ್ಯಕ್ತಿಯೊಬ್ಬ ಲೈಂಗಿಕ ದೌರ್ಜನ್ಯ ಎಸಗಿದ, ಕೆಲವರು ಕಾರಿನ ಗಾಜು ಪುಡಿ ಮಾಡಿದರು ಎಂದು ದೂರು ನೀಡಿದ್ದರು.
ಪ್ರಮಾಣ ಪತ್ರ ಸಲ್ಲಿಸಿ ದೂರು ವಾಪಸ್: ದೂರಿನ ಹಿನ್ನೆಲೆಯಲ್ಲಿ ಮರು ದಿನ (ಮಾ.20) ಪೊಲೀಸರು ಮಹಿಳೆ ಮತ್ತು ಆರೋಪಿತರನ್ನು ಕೆರೆಸಿ ವಿಚಾರಣೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮಹಿಳೆ, ಘಟನೆ ದಿನ ನಾನು ಒತ್ತಡಕ್ಕೊಳಗಾಗಿದ್ದೆ. ಹೀಗಾಗಿಯೇ ಆತನ ವಿರುದ್ಧ ದೂರು ನೀಡಿದ್ದೇನೆ. ನನ್ನ ಮೇಲೆ ಯಾವುದೇ ದೌರ್ಜನ್ಯವಾಗಿಲ್ಲ. ದೂರು ವಾಪಸ್ ಪಡೆಯುತ್ತೇನೆ ಎಂದು ಪ್ರಮಾಣಪತ್ರ ಸಲ್ಲಿಸಿ, ಪ್ರಕರಣ ಹಿಂಪಡೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.