ಬೆಂಗಳೂರು: ರಾತ್ರಿ ಗಸ್ತು ತಿರುಗುತ್ತಿದ್ದ ಮಹಿಳಾ ಪಿಎಸ್‌ಐಗೆ ಲೈಂಗಿಕ ಕಿರುಕುಳ ನೀಡಿದ ನಾಲ್ವರು ನಾಲ್ವರು ದುಷ್ಕರ್ಮಿಗಳನ್ನು ಜೀವನ್ ಭೀಮಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ತಿಪ್ಪಸಂದ್ರದ ವಿಜಯಾನಂದ(26), ಜೀತು(26), ಸಚೀನ್(25), ಅಖೀಲ್ ಜೋಸೆ(27) ಬಂಧಿತ ಆರೋಪಿಗಳು.
ಜೀವನ್‌ಭೀಮಾನಗರದ ಮಹಿಳಾ ಪಿಎಸ್‌ಐ ಹಲ್ಲೆಗೊಳಗಾದವರು. ಜ.18ರಂದು ರಾತ್ರಿ ಪೇದೆಗಳಾದ ಸಿದ್ದಪ್ಪ ಮತ್ತು ರವಿಕುಮಾರ್ ಜತೆ ಹೊಯ್ಸಳದಲ್ಲಿ ಮಹಿಳಾ ಪಿಎಸ್‌ಐ ಗಸ್ತು ತಿರುಗುತ್ತಿದಕªರು. ಈ ವೇಳೆ ತಡರಾತ್ರಿ 2.30ರ ಸುಮಾರಿಗೆ ನ್ಯೂ ತಿಪ್ಪಸಂದ್ರ ರಸ್ತೆಯಲ್ಲಿರುವ ಕ್ಲೂಮ್ಯಾಕ್ಸ್ ಡೈಯೋಗ್ನಿಸ್ಟಿಕ್ ಬಳಿ ಆರೋಪಿಗಳು ಸಾರ್ವಜನಿಕರಿಗೆ ಚಾಕು ತೋರಿಸಿ ಬೆದರಿಸುತ್ತಿದ್ದರು.
ಈ ಮಾಹಿತಿ ಪಡೆದ ಪಿಎಸ್‌ಐ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ, ಆರೋಪಿಗಳನ್ನು ಪ್ರಶ್ನಿಸಿದ್ದು, ಬಂಧಿಸಲು ಮುಂದಾಗಿದ್ದಾರೆ. ಆದರೆ, ಆರೋಪಿಗಳು ಪೇದೆ ಹಾಗೂ ಪಿಎಸ್‌ಐರನ್ನು ತಳ್ಳಿ ಅವರ ಕೈ ಹಿಡಿದು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಅಷ್ಟೇ ಅಲ್ಲದೇ, ಮಹಿಳಾ ಪಿಎಸ್‌ಐರ ಸಮವಸ್ತ್ರ ಎಳೆದಾಡಿ, ಶರ್ಟ್‌ನ ಗುಂಡಿ ಕಿತ್ತು ಹಾಕಿ ಅಸಭ್ಯವಾಗಿ ವರ್ತಿಸಿದ್ದಾರೆ. ಜತೆಗೆ ಬಲಕಣ್ಣಿಗೆ ಗುದ್ದಿದ್ದಾರೆ. ಪರಿಣಾಮ ಕಣ್ಣು ಹಾನಿಗೊಳಗಾಗಿದೆ.
ಕೂಡಲೇ ಸ್ಥಳಕ್ಕೆ ಬಂದ ಸಾರ್ವಜನಿಕರ ನೆರವಿನಿಂದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಚಿವರ ತರಾಟೆ: ನಗರದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಪೊಲೀಸರ ಮೇಲಿನ ಹಲ್ಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಗೃಹ ಸಚಿವ ರಾಮಲಿಂಗಾರೆಡ್ಡಿ ನಗರ ಪೊಲೀಸ್ ಆಯುಕ್ತ ಟಿ.ಸುನಿಲ್ ಕುಮಾರ್‌ಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಸಂಬಂಧ ಶುಕ್ರವಾರ ರಾತ್ರಿ ಎಲ್ಲ ಡಿಸಿಪಿಗಳ ತುರ್ತು ಸಭೆ ಕರೆದ ಪೊಲೀಸ್ ಆಯುಕ್ತರು,
ಇನ್ಮುಂದೆ ಯಾವುದೇ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಯ ವಿರುದ್ಧ ಕಠಿಣ ಕ್ರಮಕ್ಕೆ ಸೂಚಿಸಿದ್ದಾರೆ. ಅಲ್ಲದೇ, ಅಗತ್ಯಬಿದ್ದಲ್ಲಿ ಗೂಂಡಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸುವಂತೆಯೂ ಸೂಚಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.