Advertisement

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ: ಆರೋಪಿ ಬಂಧನ

12:45 AM May 01, 2019 | Team Udayavani |

ಬೆಂಗಳೂರು: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಯನ್ನು ಮಂಗಳವಾರ ಎಸ್‌.ಜೆ.ಪಾರ್ಕ್‌ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ವಶಕ್ಕೆ ನೀಡುವಂತೆ ಸಂತ್ರಸ್ತೆಯ ಪೋಷಕರು, ಸಂಬಂಧಿಕರಿಂದ ಠಾಣೆ ಎದುರು ಪ್ರತಿಭಟನೆ ನಡೆಯಿತು.

Advertisement

ಎಸ್‌.ಜೆ.ಪಾರ್ಕ್‌ ಸಮೀಪದ ನಾರಾಯಣಸ್ವಾಮಿ ಗಾರ್ಡ್‌ನ್‌ ನಿವಾಸಿ ಮೊಹಮ್ಮದ್‌ ಅನ್ವರ್‌(33) ಬಂಧಿತ. ಆರೋಪಿ ಮನೆ ಸಮೀಪದ ಒಂಬತ್ತು ವರ್ಷದ ಬಾಲಕಿ ಮೇಲೆ ದೌರ್ಜನ್ಯ ಎಸಗಿದ್ದ. ಈ ಸಂಬಂಧ ಪೊಕ್ಸೋ ಕಾಯ್ದೆ ಅಡಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ನಾರಾಯಣಸ್ವಾಮಿ ಗಾರ್ಡ್‌ನ್‌ ನಿವಾಸಿ ಮೊಹಮ್ಮದ್‌ ಅನ್ವರ್‌ ಆರೇಳು ವರ್ಷಗಳ ಹಿಂದೆ ಮೌಲ್ವಿಯಾಗಿದ್ದು, ಈಗ ಪೇಟಿಂಗ್‌ ಹಾಗೂ ಮರಗೆಲಸ ಮಾಡುತ್ತಿದ್ದ. ಇತ್ತೀಚೆಗೆ ಕೆಲಸ ಬಿಟ್ಟು ಮನೆಯಲ್ಲಿ ಇರುತ್ತಿದ್ದ. ಆತನಿಗೆ ಮದುವೆಯಾಗಿದ್ದು, ಮೂವರು ಮಕ್ಕಳಿದ್ದಾರೆ.

ಈ ಮಧ್ಯೆ ನಾಲ್ಕು ದಿನಗಳಿಂದ ಮನೆ ಸಮೀಪದ ಸಂತ್ರಸ್ತೆಯನ್ನು ತನ್ನ ಮನೆಗೆ ಕರೆದೊಯ್ದು ಆಕೆ ಮೇಲೆ ದೌರ್ಜನ್ಯ ಎಸಗಿದ್ದಾನೆ. ಅಲ್ಲದೆ, ಈ ವಿಚಾರ ಯಾರಿಗೂ ಹೇಳದಂತೆ ಬೆದರಿಕೆ ಕೂಡ ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೋಮವಾರ ಮಗಳ ಆರೋಗ್ಯದಲ್ಲಿ ಏರುಪೇರು ಉಂಟಾದ ಹಿನ್ನೆಲೆಯಲ್ಲಿ ಪೋಷಕರು ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪರೀಕ್ಷಿಸಿದ ವೈದ್ಯರು ಲೈಂಗಿಕ ದೌರ್ಜನ್ಯದ ಬಗ್ಗೆ ದೃಢಪಡಿಸಿದ್ದಾರೆ.

Advertisement

ಈ ವಿಚಾರ ಕೇಳಿ ಆತಂಕಗೊಂಡ ಪೋಷಕರು ಕೂಡಲೇ ಪೊಲೀಸರಿಗೆ ದೂರು ನೀಡಿದ್ದಾರೆ. ಮತ್ತೂಂದೆಡೆ ಪುತ್ರಿಯಿಂದ ಆರೋಪಿಯ ಬಗ್ಗೆ ಮಾಹಿತಿ ಪಡೆದ ಪೋಷಕರು ಹಾಗೂ ಸಂಬಂಧಿಗಳು ಆರೋಪಿಗಾಗಿ ಸುತ್ತ-ಮುತ್ತ ಹುಡುಕಾಟ ನಡೆಸಿದ್ದರು ಎಂದು ಪೊಲೀಸರು ಹೇಳಿದರು.

ಠಾಣೆಗೆ ಶರಣಾದ ಆರೋಪಿ: ತನ್ನನ್ನು ಹುಡುಕಾಡುತ್ತಿರುವ ವಿಚಾರ ತಿಳಿದ ಆರೋಪಿ ಅನ್ವರ್‌ ಸೋಮವಾರ ತಡರಾತ್ರಿ ಪ್ರಾಣ ಭಯದಿಂದ ನೇರವಾಗಿ ಎಸ್‌.ಜೆ.ಪಾರ್ಕ್‌ ಠಾಣೆಗೆ ಬಂದು ಶರಣಾಗಿದ್ದಾನೆ.

ಮಂಗಳವಾರ ಬೆಳಗ್ಗೆ ಈ ಮಾಹಿತಿ ಎಲ್ಲೆಡೆ ಹಬ್ಬುತ್ತಿದ್ದಂತೆ ಆಕ್ರೋಶಗೊಂಡ ಪೋಷಕರು ಹಾಗೂ ಸಂಬಂಧಿಕರು ಮೊದಲಿಗೆ ಜೆ.ಸಿ.ರಸ್ತೆಯಲ್ಲಿ ವಾಹನ ತಡೆದು ಪ್ರತಿಭಟನೆ ನಡೆಸಿದರು. ಬಳಿಕ ನೇರವಾಗಿ ಠಾಣೆ ಎದುರು ಜಮಾಯಿಸಿ ಪ್ರತಿಭಟನೆಗೆ ಮುಂದಾದರು.

ಆರೋಪಿಯನ್ನು ಒಪ್ಪಿಸಿ: ಬೆಳಗ್ಗೆ 11 ಗಂಟೆ ಸುಮಾರಿಗೆ ಪೊಲೀಸ್‌ ಠಾಣೆ ಎದುರು ಜಮಾಯಿಸಿದ 150ಕ್ಕೂ ಹೆಚ್ಚು ಮಂದಿ ಮಹಿಳೆಯರು, ಮಕ್ಕಳು ಹಾಗೂ ಸಂತ್ರಸ್ತೆಯ ಸಂಬಂಧಿಕರು, ಪ್ರಕರಣವನ್ನು ವಾಪಸ್‌ ಪಡೆಯುತ್ತೇವೆ.

ಆರೋಪಿಯನ್ನು ನಮಗೆ ಒಪ್ಪಿಸಿ ಎಂದು ಒತ್ತಾಯಿಸಿದರು. ಆದರೆ, ಮಧ್ಯ ಪ್ರವೇಶಿದ ಪೊಲೀಸರು, ಕಾನೂನು ಪ್ರಕಾರ ಆರೋಪಿಯನ್ನು ಬಂಧಿಸಿದ್ದೇವೆ. ತಕ್ಕ ಶಿಕ್ಷೆಯನ್ನು ಕೊಡಿಸುತ್ತೇವೆ ಎಂದು ವಾತಾವರಣ ತಿಳಿಗೊಳಿಸಲು ಯತ್ನಿಸಿದರು.

ಉದಿಘ್ನ ಪರಿಸ್ಥಿತಿ, ಲಾಠಿ ಪ್ರಹಾರ: ಪೊಲೀಸರ ಸಮಾಧಾನಕ್ಕೆ ಶಾಂತರಾಗದ ಪ್ರತಿಭಟನಕಾರರು ಠಾಣೆ ಮುತ್ತಿಗೆಗೆ ಯತ್ನಿಸಿದರು. ಅಷ್ಟರಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಸ್ಥಳಕ್ಕೆ ಧಾವಿಸಿದ ಹೆಚ್ಚುವರಿ ಪೊಲೀಸರು ಪ್ರತಿಭಟನಾಕಾರರನ್ನು ತಡೆದು, ಸಮಾಧಾನಪಡಿಸಲು ಮುಂದಾದರು.

ಯಾವುದೇ ಕಾರಣಕ್ಕೂ ಆರೋಪಿಯನ್ನು ವಶಕ್ಕೆ ಪಡೆಯದೆ ಸ್ಥಳದಿಂದ ಹೋಗುವುದಿಲ್ಲ ಎಂದು ಪ್ರತಿಭಟನಾಕಾರರು ಪಟು ಹಿಡಿದರು. ಇದರಿಂದ ಕೆಲ ಹೊತ್ತು ಸ್ಥಳದಲ್ಲಿ ಉದಿಘ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೊನೆಗೆ ಲಘು ಲಾಠಿಪ್ರಹಾರ ನಡೆಸಿ ಗುಂಪು ಚದುರಿಸಿ, ವಾತಾವರಣ ತಿಳಿಗೊಳಿಸಿದರು.

ಮುಚ್ಚಿದ ಅಂಗಡಿ ಮಳಿಗೆಗಳು: ಘಟನೆ ವಿಕೋಪಕ್ಕೆ ಹೋಗುತ್ತಿದ್ದಂತೆ ಎಸ್‌.ಜೆ.ಪಾರ್ಕ್‌ ಠಾಣಾ ಆಸು-ಪಾಸಿನಲ್ಲಿದ್ದ ಅಂಗಡಿ ಮಳಿಗೆ ಮಾಲೀಕರು ಸ್ವಯಂ ಪ್ರೇರಿತರಾಗಿ ಬಾಗಿಲು ಹಾಕಿದರು. ಕೆಲವಡೆ ಪೊಲೀಸರೇ ಮುನ್ನೆಚ್ಚರಿಕಾ ಕ್ರಮವಾಗಿ ಅಂಗಡಿ ಮುಚ್ಚಿಸಿದ್ದು ಕಂಡು ಬಂತು.

ಪೊಲೀಸರ ವಿರುದ್ಧ ಆಕ್ರೋಶ: ಲಾಠಿ ಪ್ರಹಾರ ವಿರೋಧಿಸಿ ಮಹಿಳಾ ಪ್ರತಿಭಟನಾಕಾರರು ಪೊಲೀಸರ ಜತೆ ವಾಗ್ವಾದ ನಡೆಸಿದರು. ನ್ಯಾಯ ಕೇಳಲು ಬಂದವರ ಮೇಲೆ ಲಾಠಿ ಪ್ರಹಾರ ನಡೆಸುತ್ತಿರಾ? ಮಹಿಳೆಯರು ಎಂದು ನೋಡದೆ ಹಲ್ಲೆ ನಡೆಸುತ್ತಿರಾ? ಎಂದು ಆಕ್ರೋಶ ವ್ಯಕ್ತಪಡಿಸಿದ್ದು ಘಟನಾ ಸ್ಥಳದಲ್ಲಿ ಕಂಡು ಬಂತು.

ಕಾನೂನು ಪ್ರಕಾರ ಕ್ರಮ: ಪರಿಚಯಸ್ಥ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿ ಮೊಹಮ್ಮದ್‌ ಅನ್ವರ್‌ನನ್ನು ಬಂಧಿಸಲಾಗಿದೆ. ಈ ಸಂಬಂಧ ಕೆಲವರು ಆರೋಪಿಯನ್ನು ತಮಗೆ ಒಪ್ಪಿಸುವಂತೆ ಒತ್ತಾಯಿಸಿ ಠಾಣೆ ಎದುರು ಪ್ರತಿಭಟನೆ ನಡೆಸಿದರು.

ಮುನ್ನೆಚ್ಚರಿಕಾ ಕ್ರಮವಾಗಿ ಕನಿಷ್ಠ ಬಲಪ್ರಯೋಗ ನಡೆಸಿ ವಾತಾವರಣ ತಿಳಿಸಿಗೊಳಿಸಿದ್ದೇವೆ. ಈ ಹಿನ್ನೆಲೆಯಲ್ಲಿ ಅಕ್ರಮ ಕೂಟ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ಅಶಾಂತಿ ಉಂಟು ಮಾಡಿದ ಕೆಲವರನ್ನು ಬಂಧಿಸಿ, ಕಾನೂನು ಕ್ರಮ ಜರುಗಿಸಲಾಗುವುದು ಎಂದು ಕೇಂದ್ರ ವಿಭಾಗದ ಡಿಸಿಪಿ ಡಿ. ದೇವರಾಜ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next